ಕರ್ನಾಟಕ

karnataka

ETV Bharat / state

ಜನತಾದರ್ಶನದ ವೇಳೆ ಸ್ವೀಕಾರಗೊಂಡ ಅರ್ಜಿಗಳ ಇತ್ಯರ್ಥಕ್ಕೆ 15 ದಿನಗಳ ಗಡುವು: ಸಿಎಂ - ಭ್ರಷ್ಟಾಚಾರ

ಇಂದು ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಜನರ ಅಹವಾಲು ಆಲಿಸಿ ಸಮಸ್ಯೆ ಪರಿಹಾರಕ್ಕಾಗಿ ಅಧಿಕಾರಿಗಳಿಗೆ ಸೂಚಿಸಿದರು.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

By ETV Bharat Karnataka Team

Published : Nov 27, 2023, 6:40 PM IST

Updated : Nov 27, 2023, 7:18 PM IST

ಸಿಎಂ ಸಿದ್ದರಾಮಯ್ಯ

ಬೆಂಗಳೂರು : ರಾಜ್ಯ ಮಟ್ಟದ ಜನಸ್ಪಂದನ ಕಾರ್ಯಕ್ರಮ ಮುಕ್ತಾಯವಾಗಿದ್ದು, ಭಾರಿ ಪ್ರಮಾಣದಲ್ಲಿ ಜನಸಮೂಹವೇ ಹರಿದು ಬಂದಿತ್ತು. ಬೆಳಗ್ಗೆ 9.30 ಗಂಟೆಗೆ ಪ್ರಾರಂಭವಾದ ಜನಸ್ಪಂದನ ಸಂಜೆ 5 ಗಂಟೆವರೆಗೆ ನಡೆಯಿತು. ಸಿಎಂ ಸಿದ್ದರಾಮಯ್ಯ ಜನರ ಅಹವಾಲು ಆಲಿಸಿ ಸಮಸ್ಯೆ ಪರಿಹಾರಕ್ಕಾಗಿ ಅಧಿಕಾರಿಗಳಿಗೆ ಸೂಚಿಸಿದರು.

ಜನಸ್ಪಂದನದ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇವತ್ತು ಜನಸ್ಪಂದನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಎರಡು ತಿಂಗಳ ಹಿಂದೆಯೇ ಈ ಕಾರ್ಯಕ್ರಮ ನಡೆಯಬೇಕಾಗಿತ್ತು. ಎಲ್ಲ ಜಿಲ್ಲಾ ಸಚಿವರಿಗೆ ಪತ್ರ ಬರೆದಿದ್ದೆ; ಜಿಲ್ಲೆಗಳಲ್ಲಿ ಜನತಾ ಸ್ಪಂದನ ಕಾರ್ಯಕ್ರಮ ಮಾಡಿ ನನಗೆ ವರದಿ ಸಲ್ಲಿಸಬೇಕು ಎಂದು ತಿಳಿಸಲಾಗಿತ್ತು. ಕೆಲವು ಜಿಲ್ಲೆಗಳಿಂದ ಮಾತ್ರ ವರದಿ ಬಂದಿದೆ. ಉಳಿದ ಜಿಲ್ಲೆಗಳಿಂದ ವರದಿ ಬಂದಿಲ್ಲ. ಇದನ್ನು ಸಹಿಸಲ್ಲ. ಜನತಾ ಸ್ಪಂದನ - ಅನೇಕ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಥಳದಲ್ಲಿ ಪರಿಹಾರ ನೀಡಲು ಸಾಧ್ಯವಾಗುತ್ತದೆ. ಕೆಲವು ಅರ್ಜಿಗಳು ಕೂಡಲೇ ತೀರ್ಮಾನ ಮಾಡಲು ಆಗುವುದಿಲ್ಲ. ಸಮಯ ಬೇಕಾಗುತ್ತದೆ. ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಬೇಕು. ಇಲ್ಲವಾದರೆ ಬೆಳೆಯುತ್ತಲೇ ಹೋಗುತ್ತವೆ ಎಂದರು.

ಇಂದು ಬಂದ ಅರ್ಜಿಗಳಲ್ಲಿ ಬಹುತೇಕ ಕಂದಾಯ, ಪೊಲೀಸ್‌ ಇಲಾಖೆ, ಗೃಹಲಕ್ಷ್ಮಿ ಯೋಜನೆ, ಬಿಬಿಎಂಪಿ, ಪಿಂಚಣಿ, ಗ್ರಾಚ್ಯುಟಿ ಇತ್ಯರ್ಥ, ವಸತಿ ಕೊಡಿ, ಉದ್ಯೋಗ ಕೊಡಿಸಿ ಎಂಬ ಮನವಿಗಳು ಬಂದಿವೆ. ವಿಶೇಷವಾಗಿ ಅಂಗವಿಕಲರು ಉದ್ಯೋಗ ಕೊಡಿಸಿ, ತ್ರಿಚಕ್ರ ವಾಹನ ಕೊಡಿಸಿ ಎಂದು ಮನವಿ ಸಲ್ಲಿಸಿದ್ದಾರೆ. ವಿಶೇಷವಾಗಿ ಜಿಲ್ಲಾಧಿಕಾರಿಗಳು ಸ್ಥಳೀಯವಾಗಿಯೇ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತದೆ. ಖಾತೆ, ಪಹಣಿ, ಪೋಡಿ ಮಾಡಲು ನನ್ನ ಬಳಿ ಬರಬೇಕಾ?. ಜಿಲ್ಲಾಧಿಕಾರಿಗಳು, ತಹಶೀಲ್ದಾರರು, ಉಪವಿಭಾಗಾಧಿಕಾರಿಗಳು ಕೆಲಸ ಮಾಡಿದರೆ ಜನರು ಬೆಂಗಳೂರಿಗೆ ಬರುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂದು ಸಿಎಂ ಅಭಿಪ್ರಾಯಪಟ್ಟರು.

ಅರ್ಜಿ ಇತ್ಯರ್ಥಕ್ಕೆ 15 ದಿನಗಳ ಗಡುವು: ಕಟ್ಟುನಿಟ್ಟಿನ ಸೂಚನೆಯನ್ನು ಎಲ್ಲ ಜಿಲ್ಲಾಧಿಕಾರಿಗಳಿಗೆ ನೀಡುವಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚಿಸಿದ್ದೇನೆ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಆಸ್ಪತ್ರೆ, ಪೊಲೀಸ್‌ ಠಾಣೆ, ಹಾಸ್ಟೆಲ್​ಗಳು ಮತ್ತಿತರ ಸ್ಥಳಗಳಿಗೆ ಭೇಟಿ ನೀಡಬೇಕು. ಜನರ ಸಮಸ್ಯೆ ಬಗೆಹರಿಸಬೇಕು. ವಿಳಂಬ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುತ್ತದೆ. ಆದ್ದರಿಂದ ಕೂಡಲೇ ಜನರಿಗೆ ಸ್ಪಂದಿಸಲು ಸೂಚಿಸಿದರು. ಕಾನೂನು ರೀತ್ಯ ಮಾಡಲು ಸಾಧ್ಯವಾಗದಿದ್ದರೆ, ಹಿಂಬರಹ ನೀಡಬೇಕು ಎಂದು ಸಿದ್ದರಾಮಯ್ಯ ಸೂಚಿಸಿದರು.

ಇಂದು ಸ್ವೀಕರಿಸಿದ ಅರ್ಜಿಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಲಾಗುವುದು. ಹದಿನೈದು ದಿನದೊಳಗೆ ಇವುಗಳನ್ನು ವಿಲೇವಾರಿ ಮಾಡಬೇಕು. ನಿಯಮಾವಳಿಗಳಡಿ ಅವಕಾಶವಿಲ್ಲದೇ ಇದ್ದರೆ, ಅರ್ಜಿದಾರರಿಗೆ ಹಿಂಬರಹ ಬರೆದು ಕಳುಹಿಸಿ. ಕೆಳಹಂತದ ಅಧಿಕಾರಿಗಳಿಗೆ ನೀವು ಕೂಡಲೇ ಸ್ಪಂದಿಸಬೇಕು ಎಂದು ತಿಳಿಸಿದರು.

ಮೂರು ತಿಂಗಳಿಗೊಮ್ಮೆ ಜನಸ್ಪಂದನ: ಮೂರು ತಿಂಗಳಿಗೊಮ್ಮೆ ನಾನು ಜನಸ್ಪಂದನ ಮಾಡುತ್ತೇನೆ. ಮುಂದಿನ ಮೂರು ತಿಂಗಳು ಮಾಡುವ ಜನಸ್ಪಂದನೆಯಲ್ಲಿ ಇಷ್ಟು ಅರ್ಜಿಗಳು ಬರಬಾರದು. ಹೆಚ್ಚು ಜನ ಬಂದರೆ ತಳ ಹಂತದ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ ಎಂದು ಅರ್ಥ ಎಂದರು.

ಇಂದು ಮೂರುವರೆ ಸಾವಿರ ಅರ್ಜಿ ಸ್ವೀಕರಿಸಲಾಗಿದೆ. ಇವುಗಳನ್ನು ಪರಿಶೀಲಿಸಿ, ಕಾನೂನು ರೀತ್ಯ ಪರಿಹಾರ ನೀಡಬೇಕು. ಸಾಧ್ಯವಾಗದಿದ್ದರೆ ಹಿಂಬರಹ ನೀಡಬೇಕು. ತಳಹಂತದ ಅಧಿಕಾರಿಗಳು ಅರ್ಜಿಯನ್ನು ಇತ್ಯರ್ಥಪಡಿಸಿದ್ದಾರೆಯೇ ಇಲ್ಲವೇ ಎಂಬ ಬಗ್ಗೆ ಮುಖ್ಯಮಂತ್ರಿ ಕಚೇರಿಗೆ ಮಾಹಿತಿ ನೀಡಬೇಕು. ಇದನ್ನು ಹಗುರವಾಗಿ ತೆಗೆದುಕೊಳ್ಳಬೇಡಿ. ಲಘುವಾಗಿ ತೆಗೆದುಕೊಂಡರೆ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು. ಕೆಲ ಕಚೇರಿಗಳಿಗೆ ನಾನೇ ಭೇಟಿ ಕೊಡುತ್ತೇನೆ. ಅಧಿಕಾರಿಗಳಿಂದ ನಿರ್ಲಕ್ಷ್ಯ ಕಂಡುಬಂದರೆ ಕಠಿಣ ಕ್ರಮ ತೆಗದುಕೊಳ್ಳುತ್ತೇನೆ ಎಂದು ಇದೇ ವೇಳೆ ತಿಳಿಸಿದರು.

ಸಿಎಂ ಪರಿಹಾರದಿಂದ 25 ಕೋಟಿ ಬಿಡುಗಡೆ:ಕ್ಯಾನ್ಸರ್, ಕಿಡ್ನಿ, ಹೃದಯ ಸೇರಿದಂತೆ ಆರೋಗ್ಯ ಸಮಸ್ಯೆಯಿಂದ ವೈದ್ಯಕೀಯ ವೆಚ್ಚ ಭರಿಸುವ ಮನವಿಗಳು ಹೆಚ್ಚು ಸ್ವೀಕೃತವಾಗಿವೆ. ನಾನು ಮುಖ್ಯಮಂತ್ರಿಯಾದ ನಂತರ ಜನರ ಆರೋಗ್ಯಸಮಸ್ಯೆಗಳ ಪರಿಹಾರಕ್ಕಾಗಿ ಸುಮಾರು 25 ಕೋಟಿ ರೂ.ಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಬಿಡುಗಡೆ ಮಾಡಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ಲಭಿಸುತ್ತದೆ ಎಂಬ ನಂಬಿಕೆಯಿಂದ ಜನರು ಸರ್ಕಾರಿ ಆಸ್ಪತ್ರೆ ಬಿಟ್ಟು, ಖಾಸಗಿ ಆಸ್ಪತ್ರೆಯತ್ತ ಮುಖ ಮಾಡುವ ಕಾರಣ, ಅವರ ವೈದ್ಯಕೀಯ ವೆಚ್ಚಗಳೂ ಹೆಚ್ಚಾಗುತ್ತವೆ. ಆ ವೆಚ್ಚದಲ್ಲಿ ಸಣ್ಣಪ್ರಮಾಣವನ್ನು ಸರ್ಕಾರ ಈ ರೀತಿ ಭರಿಸಲು ಪ್ರಯತ್ನಿಸುತ್ತದೆ ಎಂದು ಸಿಎಂ ತಿಳಿಸಿದರು.

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಬಸವರಾಜ್ ಬೊಮ್ಮಾಯಿ ಯಾವ ಆಸ್ಪತ್ರೆಗೆ ಹೋಗಿದ್ದರು. ಅವರು ಅಪೋಲೊ ಆಸ್ಪತ್ರೆಗೆ ಹೋಗಿದ್ದರು. ನಾನು ಕೊರೊನಾ ಬಂದಿದ್ದಾಗ ಮಣಿಪಾಲ್ ಆಸ್ಪತ್ರೆ ಹೋಗಿದ್ದೆ ಎಂದು ಸಿಎಂ ಇದೇ ವೇಳೆ ತಿಳಿಸಿದರು.

ಭ್ರೂಣ ಹತ್ಯೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ:ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಭ್ರೂಣಹತ್ಯೆ ಬಗ್ಗೆ ಆರೋಗ್ಯ ಇಲಾಖೆಯೊಂದಿಗೆ ಸಭೆ ನಡೆಸಿ, ಈ ದುಷ್ಕೃತ್ಯದಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಹೆಚ್ಚುವರಿ ಬಸ್ ವ್ಯವಸ್ಥೆ:ಶಕ್ತಿ ಯೋಜನೆ ಯಶಸ್ವಿಯಾದರೂ, ಬಸ್ ಕೊರತೆಯಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಈಗಾಗಲೇ 971 ಬಸ್​​ಗಳನ್ನು ಖರೀದಿಸಲು ಅನುಮತಿ ನೀಡಲಾಗಿದೆ. ಅಗತ್ಯವಿರುವೆಡೆ ಹೆಚ್ಚು ಬಸ್ಗಳನ್ನು ಹಾಕಲು ತಿಳಿಸಲಾಗಿದೆ ಎಂದರು.

ಇದನ್ನೂ ಓದಿ:ನಾಳೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಜನತಾ ದರ್ಶನ; ಜನರ ಅಹವಾಲುಗಳಿಗೆ ಸ್ಥಳದಲ್ಲೇ ಪರಿಹಾರ

Last Updated : Nov 27, 2023, 7:18 PM IST

ABOUT THE AUTHOR

...view details