ಬೆಂಗಳೂರು :ರಾಜ್ಯದ ಆಹಾರ ಧಾನ್ಯಗಳ ಬೆಲೆ ಇಳಿಕೆ ಮಾಡಬೇಕಾದವರು ಕೇಂದ್ರ ಸರ್ಕಾರ ಅಲ್ವಾ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ನಾಡಪ್ರಭು ಕೆಂಪೇಗೌಡ ಜಯಂತಿ ಹಿನ್ನೆಲೆ ವಿಧಾನಸೌಧ ಪೂರ್ವ ಭಾಗದಲ್ಲಿರುವ ಕೆಂಪೇಗೌಡ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಆಹಾರ ಧಾನ್ಯ, ತರಕಾರಿ ಬೆಲೆ ಏರಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಬೆಲೆ ಇಳಿಕೆ ಮಾಡಬೇಕಾದವರು ಯಾರು?. ಕೇಂದ್ರ ಸರ್ಕಾರ ಅಲ್ವಾ?. ನಾವು ಆ ಬಗ್ಗೆ ಗಮನ ಹರಿಸಿದ್ದೇವೆ ಎಂದು ತಿಳಿಸಿದರು.
ಕೆಂಪೇಗೌಡ ಪ್ರತಿಮೆಗೆ ಪುಷ್ಪನಮನ: ಇಂದು ಕೆಂಪೇಗೌಡರ ಜಯಂತಿ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ವಿಧಾನಸೌಧದ ಮುಂಭಾಗದ ಕೆಂಪೇಗೌಡ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ಕೆಂಪೇಗೌಡ ಜಯಂತಿಯನ್ನು ಎಲ್ಲಾ 31 ಜಿಲ್ಲೆಗಳಲ್ಲಿ ಆಚರಿಸುತ್ತಿದ್ದೇವೆ. 5 ದಿಕ್ಕುಗಳಿಂದ ಜ್ಯೋತಿ ತರಲಾಗಿದೆ. ನಮ್ಮ ಸರ್ಕಾರ ಇದ್ದಾಗ ಕೆಂಪೇಗೌಡ ಜಯಂತಿ ಆಚರಣೆ ಆರಂಭ ಮಾಡಿದ್ದೆವು. ಅದಕ್ಕೂ ಮುಂಚೆ ಸರ್ಕಾರದ ವತಿಯಿಂದ ಆಚರಣೆ ಆಗ್ತಿರಲಿಲ್ಲ ಎಂದರು.
ಕೆಂಪೇಗೌಡ ಪ್ರಾಧಿಕಾರವನ್ನು ರಚನೆ ಮಾಡಿದ್ದು ನಾವು. ಬೆಂಗಳೂರು ಏರ್ಪೋರ್ಟ್ಗೆ ಕೆಂಪೇಗೌಡರ ಹೆಸರನ್ನ ಇಟ್ಟಿದ್ದು ನಾವೇ. ಬೆಂಗಳೂರು ಅಭಿವೃದ್ಧಿ ಆಗಬೇಕಾದ್ರೆ ಕೆಂಪೇಗೌಡರು ಅಡಿಪಾಯ ಹಾಕಿದ್ರು. ಆ ಕಾಲದಲ್ಲೇ ಎಲ್ಲಾ ಜನಾಂಗಕ್ಕೆ ಪೇಟೆ ಮಾಡಿದ್ರು. ಬೆಂಗಳೂರು ಬೆಳೆದಿರೋದಕ್ಕೆ ಅವರ ದೂರದೃಷ್ಟಿ ಕಾರಣ. ಅವರಿಂದ ನಾವು ಸ್ಫೂರ್ತಿ ಪಡೆಯಬೇಕಾಗಿದೆ ಎಂದರು.
ಧರಣಿ ಕೂರುತ್ತೇನೆ ಅನ್ನೋರು ಧರಣಿ ಕೂರಲಿ, ನಾನು ಮಾತ್ರ ನಿಲ್ಲೋದಿಲ್ಲ; ಡಿಸಿಎಂ ಡಿಕೆಶಿ:ಭಾಷಣ ಮಾಡೋರು, ತಮಟೆ ಹೊಡೆಯೋರು ಹೊಡೆಯಲಿ. ನಾನಂತೂ ಸುಮ್ಮನೆ ಕೂರಲ್ಲ. ಅವಕಾಶ ಬಳಸಿ ಸಾಕ್ಷಿ ಬಿಟ್ಟು ಹೋಗುತ್ತೇನೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.
ವಿಧಾನಸೌಧದಲ್ಲಿ ನಡೆದ ಕೆಂಪೇಗೌಡ ಜಯಂತಿಯಲ್ಲಿ ಮಾತನಾಡಿದ ಅವರು, ಈಗಲೂ ಕೆಲವು ತೀರ್ಮಾನ ಮಾಡ್ತೇವೆ. ನಮಗೆ ಒಂದು ಅವಕಾಶ ಸಿಕ್ಕಿದೆ. ಅವಕಾಶ ಬಳಸಿ ಏನಾದ್ರೂ ಸಾಕ್ಷಿ ಬಿಟ್ಟು ಹೋಗಬೇಕು. ಟೀಕೆ ಮಾಡುವವರು ಮಾಡಲಿ. ಟೀಕೆ ಮಾಡುವವರು ಮಾಡ್ತಾ ಇರಲಿ. ಬಾವುಟ ಕಟ್ಟೋರು ಕಟ್ತಾ ಇರಲಿ, ಸೌಂಡ್ ಮಾಡೋರು ಮಾಡ್ತಾ ಇರಲಿ. ಧರಣಿ ಕೂರ್ತೀನಿ ಅನ್ನೋ ನಾಯಕರು ಧರಣಿ ಕೂರಲಿ. ನಾನು ಮಾತ್ರ ನಿಲ್ಲೋನಲ್ಲ, ಮುಂದಕ್ಕೆ ಹೋಗ್ತಾನೆ ಇರ್ತೀನಿ ಎಂದು ಬಿಜೆಪಿಗೆ ಟಾಂಗ್ ನೀಡಿದರು.
ಟೀಕೆಗಳಿಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ: ಬೆಂಗಳೂರಿನಲ್ಲಿ ಟ್ರಾಪಿಕ್ ಕಿರಿಕಿರಿ ಹೆಚ್ಚಿದೆ. ಮನೆಯ ಮುಂದೆ ಮೂರು ಮೂರು ಕಾರುಗಳಿವೆ. ಆದರೆ ರಸ್ತೆಗಳು ಮಾತ್ರ ಅವೇ ಇವೆ. ಹಿಂದೆ ಸಿದ್ರಾಮಯ್ಯ ಪಾಪ ಏನೋ ಮಾಡೋಕೆ ಹೊರಟಿದ್ದರು. ಸಿದ್ದರಾಮಯ್ಯ ಅವರು ಈ ಮುಂಚೆ ಸಿಎಂ ಇದ್ದಾಗ ಸ್ಟೀಲ್ ಬ್ರಿಡ್ಜ್ ಕಟ್ಟಲು ಮುಂದಾಗಿದ್ದರು. ಭಾರಿ ಟೀಕೆಗಳು ವ್ಯಕ್ತವಾಗಿದ್ದವು. ಅದಕ್ಕೆ ಹೆದರಿ ಸಿದ್ದರಾಮಯ್ಯ, ಕೆ ಜೆ ಜಾರ್ಜ್ ಅದನ್ನು ರದ್ದು ಮಾಡಿದ್ದರು. ನಾನಾಗಿದ್ದರೆ ನಿಲ್ಲಿಸುತ್ತಿರಲಿಲ್ಲ. ಉಕ್ಕಿನ ಸೇತುವೆ ನಿರ್ಮಿಸ್ತಾ ಇದ್ದೆ. ಟೀಕೆಗಳಿಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ ಎಂದು ತಿಳಿಸಿದರು.
ಕೆಂಪೇಗೌಡರು ರಾಜ್ಯದ ಆಸ್ತಿ, ದೇಶದ ಆಸ್ತಿಯಾಗಿದ್ದಾರೆ. ದೇವರು ನಮಗೆ ವರನೂ ಕೊಡುವುದಿಲ್ಲ. ಶಾಪನೂ ಕೊಡುವುದಿಲ್ಲ. ದೇವರು ಕೇವಲ ಅವಕಾಶ ಕೊಡುತ್ತಾನೆ. ನನ್ನದೇ ಒಂದು ಛಾಪನ್ನು ನಾನು ದೇಶದಲ್ಲಿ ಬಿಟ್ಟಿದ್ದೇನೆ ಎಂಬ ನನ್ನ ನಂಬಿಕೆ. ಟೀಕೆಗಳು ಸತ್ತು ಹೋಗುತ್ತವೆ. ಕೆಲಸ ಮಾತ್ರ ಉಳಿಯುತ್ತವೆ ಎಂದು ಡಿಕೆಶಿ ಹೇಳಿದ್ರು.
ಸರ್ಕಾರಿ ಕಚೇರಿಗಳಲ್ಲಿ ಕೆಂಪೇಗೌಡ ಫೋಟೋ ಹಾಕಿ: ಇದೇ ವೇಳೆ ಮಾತನಾಡಿದ ನಂಜಾವದೂತ ಸ್ವಾಮೀಜಿ, ಈಗಾಗಲೇ ನಮ್ಮ ಬೇಡಿಕೆಗಳನ್ವಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ಎಂದು ನಾಮಕರಣ ಮಾಡಲಾಗಿದೆ. ದೊಡ್ಡ ಪ್ರತಿಮೆ ನಿರ್ಮಿಸಬೇಕು ಎಂಬ ಬೇಡಿಕೆ ಇತ್ತು. ಅದನ್ನು ಈಡೇರಿಸಲಾಗಿದೆ. ಬೇಡಿಕೆಯಂತೆ ವಿಧಾನಸೌಧದ ಮುಂದೆ ಇಬ್ಬರು ಮಹನೀಯರ ಪುತ್ಥಳಿ ನಿರ್ಮಿಸಲಾಗಿದೆ. ಬಸವಣ್ಣರ ಭಾವಚಿತ್ರವನ್ನು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಹಾಕಲಾಗಿದೆ. ಅದೇ ರೀತಿ ಕೆಂಪೇಗೌಡರ ಫೋಟೋವನ್ನು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಹಾಕಬೇಕು. ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಪಠ್ಯಕ್ರಮದಲ್ಲಿ ಕೆಜಿಯಿಂದ ಪಿಜಿವರೆಗೆ ಕೆಂಪೇಗೌಡರ ಪಠ್ಯ ಅಳವಡಿಸಬೇಕು. ಲಾಲ್ಬಾಗ್ನಲ್ಲಿ ದೊಡ್ಡ ಗೋಪುರ ಇದೆ. ಅಲ್ಲಿ ಒಂದು ಕೆಂಪೇಗೌಡರ ಥೀಮ್ ಪಾರ್ಕ್ ಮಾಡಬೇಕು. ಕೆಂಪೇಗೌಡರಿಗೆ ಸಿಗಬೇಕಾದ ಗೌರವ ಆದರಗಳು ಹಾಗೇ ಉಳಿದುಕೊಂಡಿದೆ. ಲಂಡನ್ನ ಮೇಯರ್ ಜೊತೆ ಪತ್ರ ವ್ಯವಹಾರ ಮಾಡಿ ಅಲ್ಲಿ ಕೆಂಪೇಗೌಡರ ಪುತ್ಥಳಿಯನ್ನು ನಿರ್ಮಿಸಬೇಕು ಎಂಬುದು ನಮ್ಮ ಮನವಿ ಎಂದರು.
ಸೆಂಟ್ರಲ್ ವಿವಿಗೆ ಕೆಂಪೇಗೌಡ ಹೆಸರು ಇಡಬೇಕು:ಬೆಂಗಳೂರು ಮೂಲಸೌಕರ್ಯವನ್ನು ಎಲ್ಲ ರೀತಿ ಅಭಿವೃದ್ಧಿ ಪಡಿಸಬೇಕು. ಡಿಕೆಶಿಯವರು ಮತ್ತೊಂದು ಕೆಂಪೇಗೌಡರು ಆಗಬೇಕು. ಕೆಂಪೇಗೌಡರ ರಕ್ತ ಡಿಕೆಶಿ ರಕ್ತದಲ್ಲಿ ಹರಿತಾ ಇದೆ. ಸಂಕ್ರಾತಿ ಹಬ್ಬವನ್ನು ಕೆಂಪೇಗೌಡ ಹಬ್ಬವಾಗಿ ಆಚರಿಸಬೇಕು. ಮುಂದಿನ ಡಿಸೆಂಬರ್ ನಲ್ಲಿ 15 ದಿನಗಳ ಕಾಲ ಬೆಂಗಳೂರು ಹಬ್ಬವನ್ನು ಮಾಡಿ ದೊಡ್ಡ ಮಟ್ಟದಲ್ಲಿ ಆಚರಿಸಬೇಕು. ಕೆಂಪೇಗೌಡರ ಹೆಸರಲ್ಲೇ ಬೆಂಗಳೂರು ಹಬ್ಬ ಆಚರಿಸಬೇಕು. ಬೆಂಗಳೂರು ಗ್ರಾಮಾಂತರವನ್ನು ಕೆಂಪೇಗೌಡ ಜಿಲ್ಲೆಯಾಗಿ ನಾಮಕರಣ ಮಾಡಬೇಕು. ಸೆಂಟ್ರಲ್ ವಿವಿಗೆ ಕೆಂಪೇಗೌಡ ಹೆಸರು ಇಡಬೇಕೆಂದು ಮನವಿ ಮಾಡಿದರು.
ಡಿ ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು : ಡಿ ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು. ಇದು ನಮ್ಮೆಲ್ಲರ ಬಯಕೆ ಎಂದು ವಿಶ್ವಒಕ್ಕಲಿಗ ಮಹಾಸಂಸ್ಥಾನದ ಚಂದ್ರಶೇಖರ ಗುರೂಜಿ ಹೇಳಿಕೆ ನೀಡಿದರು.
ವಿಧಾನಸೌಧ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಚಂದ್ರಶೇಖರ ಸ್ವಾಮೀಜಿ ಈ ಹೇಳಿಕೆ ನೀಡಿದರು. ಈ ವೇಳೆ ನೆರೆದಿದ್ದವರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು.
ಕೆಂಪೇಗೌಡರ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ: ಇದೇ ವೇಳೆ ಕೆಂಪೇಗೌಡರ 514 ನೇ ಜಯಂತಿ ಆಚರಣೆ ಪ್ರಯುಕ್ತ ಮೂವರು ಸಾಧಕರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಪರವಾಗಿ ನಿರ್ದೇಶಕ ಡಾ ಮಂಜುನಾಥ್, ಯುವ ಉದ್ಯಮಿ ನಿತಿನ್ ಕಾಮತ್ ಪರವಾಗಿ ಅವರ ಪೋಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಗಾಲ್ಫರ್ ಅದಿತಿ ಅಶೋಕ್ ಹೊರ ದೇಶದಲ್ಲಿರುವುದರಿಂದ ಅವರಿಗೆ ಬಳಿಕ ಪ್ರಶಸ್ತಿ ನೀಡಲಾಗುತ್ತದೆ.
ಇದನ್ನೂ ಓದಿ:ಕೆಂಪೇಗೌಡರ ಪ್ರತಿಮೆಗಳಿರುವ ಸ್ಥಳವನ್ನು ರಾಜ್ಯ ಸರ್ಕಾರ ಇನ್ನಷ್ಟು ಅಭಿವೃದ್ಧಿ ಮಾಡಬೇಕು : ಮಾಜಿ ಸಚಿವ ಆರ್ ಅಶೋಕ್