ಬೆಂಗಳೂರು:"ಪ್ರತಿಯೊಬ್ಬ ಚರಿತ್ರಾರ್ಹ ವ್ಯಕ್ತಿಯ ಅಧ್ಯಯನವಾಗಬೇಕು. ವಿಶ್ವಕರ್ಮ ಸಮುದಾಯದ ಮೂಲಪುರುಷ ವಿಶ್ವಕರ್ಮ. ಅವರ ಅಧ್ಯಯನ ಪೀಠ ಸ್ಥಾಪಿಸಲಾಗುವುದು" ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರವೀಂದ್ರ ಕಲಾಕ್ಷೇತ್ರದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣ ದಿನಾಚರಣೆ ಹಾಗೂ ಜಕಣಾಚಾರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, "ಇತಿಹಾಸ ಎಲ್ಲರಿಗೂ ತಿಳಿಯಬೇಕು. ಇತಿಹಾಸ ತಿಳಿಯದವರು ಇತಿಹಾಸ ರಚಿಸಲು ಸಾಧ್ಯವಿಲ್ಲ. ಅದಕ್ಕಾಗಿ ಪ್ರತಿಯೊಬ್ಬ ಚರಿತ್ರಾರ್ಹ ವ್ಯಕ್ತಿಯ ಅಧ್ಯಯನವಾಗಬೇಕು. ವಿಶ್ವಕರ್ಮ ಸಮುದಾಯದ ಮೂಲಪುರುಷ ವಿಶ್ವಕರ್ಮ ಅವರ ಅಧ್ಯಯನ ಪೀಠವೂ ಆಗಬೇಕಿದೆ" ಎಂದರು.
"ಜಕಣಾಚಾರಿ ಸಂಸ್ಮರಣೆ 2019ರಲ್ಲಿ ಪ್ರಾರಂಭವಾದರೂ ಕೋವಿಡ್ ಇದ್ದುದರಿಂದ ಆಚರಿಸಲಾಗಲಿಲ್ಲ. ಕಳೆದ ವರ್ಷ ವಿಜಯನಗರ ಜಿಲ್ಲೆಯಲ್ಲಿ ಆಚರಿಸಲಾಗಿತ್ತು. ರಾಜ್ಯಮಟ್ಟದ ಜಯಂತಿಗಳನ್ನು ಬೆಂಗಳೂರಿನಲ್ಲಿಯೇ ಆಚರಿಸಬೇಕೆಂದು ಸೂಚಿಸಲಾಗಿದೆ. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿಯೂ ಆಚರಿಸಲಾಗುತ್ತದೆ" ಎಂದು ಹೇಳಿದರು.
ಕಾಲ್ಪನಿಕ ವ್ಯಕ್ತಿ ಎನ್ನುವುದು ಸುಳ್ಳು:"ಜಕಣಾಚಾರಿ ಎಲ್ಲರಿಗೂ ಗೊತ್ತಿರುವವರು. ಅವರು ಕಾಲ್ಪನಿಕ ವ್ಯಕ್ತಿ ಎನ್ನುವುದು ಸುಳ್ಳು. ವಿಶ್ವಕರ್ಮ ಸಮಾಜದಲ್ಲಿ ಜಕಣಾಚಾರಿ ಹುಟ್ಟಿದವರು. ಅವರು ಬೆಳೆದ ಎತ್ತರ ಜನರಿಗೆ ತಿಳಿಯಬಾರದೆಂದು ಇತಿಹಾಸ ತಿರುಚುವ ಪ್ರಯತ್ನ ಮಾಡಲಾಗಿದೆ. ಪಟ್ಟಭದ್ರ ಹಿತಾಸಕ್ತಿಗಳು ಈ ಕೆಲಸ ಮಾಡಿದ್ದರೂ ಮಾಡಿರಬಹುದು. ಅಮರಶಿಲ್ಪಿ ಜಕಣಾಚಾರಿ ಇತಿಹಾಸ ನಮ್ಮ ಮುಂದಿದೆ. ವಿಶ್ವಕರ್ಮ ಅಭಿವೃದ್ಧಿ ನಿಗಮ, ಜಯಂತಿ ಆಚರಿಸುವ ತೀರ್ಮಾನವನ್ನು ನಮ್ಮ ಸರ್ಕಾರವೇ ಹಿಂದೆ ಮಾಡಿತ್ತು" ಎಂದು ತಿಳಿಸಿದರು.