ಕರ್ನಾಟಕ

karnataka

ETV Bharat / state

ಹಸಿರು, ಬರದ ಬಗ್ಗೆ ವಿಶೇಷ ಗಮನ ಹರಿಸಿ, ರೈತರ ಹಿತ ಕಾಪಾಡಿ: ಕೇಂದ್ರ ಬರ ಅಧ್ಯಯನ ತಂಡಕ್ಕೆ ಸಿಎಂ ಮನವಿ

ರಾಜ್ಯಕ್ಕೆ ಭೇಟಿ ನೀಡಿದ ಕೇಂದ್ರ ಬರ ಅಧ್ಯಯನ ತಂಡದ ಜೊತೆ ಸಿಎಂ ಸಿದ್ದರಾಮಯ್ಯ ಸಭೆ. ಮಳೆ ಕೊರತೆಯಿಂದಾಗಿ ಜಮೀನಿನಲ್ಲಿ ಹಸಿರು ಇದ್ದರೂ ಫಸಲು ಇಲ್ಲದ ಪರಿಸ್ಥಿತಿ ಉಂಟಾಗಿದೆ. ಈ ಬಗ್ಗೆ ಆಳವಾದ ಅಧ್ಯಯನ ನಡೆಸಿ, ರೈತರ ಹಿತ ಕಾಪಾಡುವಂತೆ ಕೇಂದ್ರ ತಂಡಕ್ಕೆ ಸಿಎಂ ಮನವಿ ಮಾಡಿದರು.

CM Siddaramaih meeting with central draught team
ಕೇಂದ್ರ ಬರ ಅಧ್ಯಯನ ತಂಡದ ಜೊತೆ ಸಿಎಂ ಸಿದ್ದರಾಮಯ್ಯ ಮನವಿ

By ETV Bharat Karnataka Team

Published : Oct 6, 2023, 7:15 AM IST

ಬೆಂಗಳೂರು: ಕೇಂದ್ರ ಬರ ಅಧ್ಯಯನ ತಂಡದ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿ, ಹಸಿರು ಹಾಗೂ ಬರದ ಬಗ್ಗೆ ಆಳವಾದ ಅಧ್ಯಯನ‌ ನಡೆಸುವಂತೆ ಮನವಿ ಮಾಡಿದ್ದಾರೆ. ರಾಜ್ಯದ ಬರ ಪರಿಸ್ಥಿತಿ ಅಧ್ಯಯನಕ್ಕೆ ಕೇಂದ್ರದ ಮೂರು ತಂಡಗಳು ರಾಜ್ಯಕ್ಕೆ ಅಗಮಿಸಿದ್ದು, ನಾಲ್ಕು ದಿನಗಳ ಕಾಲ ವಿವಿಧ ಜಿಲ್ಲಾ ಪ್ರವಾಸ ಕೈಗೊಂಡು ಪರಿಶೀಲನೆ ನಡೆಸಲಿವೆ. ಕೇಂದ್ರ ತಂಡ ಹತ್ತು ಸದಸ್ಯರನ್ನೊಳಗೊಂಡಿದ್ದು, ರಾಜ್ಯದ ಸ್ಥಳೀಯ ಅಧಿಕಾರಿಗಳೊಂದಿಗೆ ಕೃಷಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಲಿದೆ.

ಕೇಂದ್ರ ಬರ ಅಧ್ಯಯನ ತಂಡ ಗುರುವಾರ ಬೆಳಗ್ಗೆ ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಿತು. ಬಳಿಕ ಕಂದಾಯ ಸಚಿವರು, ಕೃಷಿ ಸಚಿವ, ಸಹಕಾರ ಸಚಿವರ ಜೊತೆ ವಿಧಾನಸೌಧದಲ್ಲಿ ರಾಜ್ಯದ ಬರ ಪರಿಸ್ಥಿತಿಯ ಬಗ್ಗೆ ಸುದೀರ್ಘ ಚರ್ಚೆ ನಡೆಸಿತು. ಬಳಿಕ ಸಿಎಂ ಸಿದ್ದರಾಮಯ್ಯ ಜೊತೆ ಸಭೆ ನಡೆಸಿ, ಬರ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಂಡಿತು.

ರೈತರ ಹಿತ ಕಾಪಾಡುವಂತೆ ಸಿಎಂ ಸಲಹೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಬರ ಅಧ್ಯಯನ ತಂಡದೊಂದಿಗೆ ಮಾತುಕತೆ ನಡೆಸಿ, ರಾಜ್ಯದ ರೈತರ ರಕ್ಷಣೆಗೆ ಪೂರಕವಾಗಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ರಾಜ್ಯದ ಬರ ಪರಿಸ್ಥಿತಿಯನ್ನು ವಿವರಿಸಿದ ಮುಖ್ಯಮಂತ್ರಿಗಳು, ಕೇಂದ್ರದ ಮಾರ್ಗಸೂಚಿಯನ್ವಯ 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ.

ಇನ್ನೂ 32 ತಾಲೂಕುಗಳು ನಿಗದಿತ ಮಾನದಂಡಗಳನ್ನು ಪೂರೈಸುತ್ತಿವೆ. ರಾಜ್ಯದಲ್ಲಿ ನೈಋತ್ಯ ಮುಂಗಾರು ವಿಳಂಬದಿಂದ ಹಾಗೂ ಮಳೆಯ ಕೊರತೆಯಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ರಾಜ್ಯದಲ್ಲಿ ಶೇ.90 ರಷ್ಟು ಬಿತ್ತನೆ ಆಗಿದ್ದು, ಅದರಲ್ಲಿ 42 ಲಕ್ಷ ಹೆಕ್ಟೇರ್​​ಗೂ ಹೆಚ್ಚು ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ರೈತರ ಜಮೀನಿನಲ್ಲಿ ಹಸಿರು ಕಾಣಿಸಿದರೂ ಬೆಳೆಯಿಲ್ಲದ ಪರಿಸ್ಥಿತಿ ಉಂಟಾಗಿದ್ದು, ರಾಜ್ಯದಲ್ಲಿ ಹಸಿರು ಬರ ತಲೆದೋರಿದೆ ಎಂದು ವಾಸ್ತವ ಪರಿಸ್ಥಿತಿಯನ್ನು ವಿವರಿಸಿದರು.

ಪ್ರವಾಸದ ಸಂದರ್ಭದಲ್ಲಿ ರಾಜ್ಯದ ವಸ್ತುಸ್ಥಿತಿಯನ್ನು ಅರಿತು ಕೇಂದ್ರಕ್ಕೆ ಮನವರಿಕೆ ಮಾಡುವ ಮೂಲಕ ರೈತರ ಸಂಕಷ್ಟಕ್ಕೆ ಕೇಂದ್ರ ಸರ್ಕಾರ ತ್ವರಿತವಾಗಿ ಸ್ಪಂದಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು. ಮುಂಗಾರು ವಿಳಂಬ ಹಾಗೂ ಆಗಸ್ಟ್‌ ತಿಂಗಳಲ್ಲಿ ಕಳೆದ 122 ವರ್ಷಗಳಲ್ಲೇ ಅತಿ ಕಡಿಮೆ ಮಳೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಅಣೆಕಟ್ಟುಗಳು ಬರಿದಾಗಿವೆ. ಸೆಪ್ಟೆಂಬರ್‌ ತಿಂಗಳಲ್ಲಿ ಅಲ್ಲಲ್ಲಿ ಚದುರಿದಂತೆ ಮಳೆಯಾಗಿದೆ. ಆದರೆ ಮುಂಗಾರು ಮುಗಿಯುತ್ತ ಬಂದಿದೆ. ಇದು ಕುಡಿಯುವ ನೀರಿನ ಕೊರತೆ, ವಿದ್ಯುತ್‌ ಕೊರತೆಯ ಆತಂಕವನ್ನೂ ಸೃಷ್ಟಿಸಿದೆ ಎಂದು ತಿಳಿಸಿದರು.

ಕೊಡಗು ಜಿಲ್ಲೆಯಲ್ಲಿ ಮಳೆ ಕೊರತೆಯಿಂದಾಗಿ ಕೆಆರ್​​ಎಸ್ ಡ್ಯಾಂನಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಕುಡಿಯುವ ನೀರಿಗಾಗಿಯೇ ರಾಜ್ಯಕ್ಕೆ 33 ಟಿಎಂಸಿ ನೀರಿನ ಅವಶ್ಯಕತೆಯಿದೆ. ಆದರೆ ಮಳೆಯ ಕೊರತೆಯಿಂದ ಆತಂಕದ ಸ್ಥಿತಿ ಎದುರಾಗಿದೆ. ರಾಜ್ಯದಲ್ಲಿ ಸಣ್ಣ ಮತ್ತು ಮಧ್ಯಮ ರೈತರ ಸಂಖ್ಯೆ ಹೆಚ್ಚಿದ್ದು, ಇವರ ದತ್ತಾಂಶವನ್ನು ಫ್ರೂಟ್ಸ್‌ ತಂತ್ರಾಂಶದಲ್ಲಿ ಸಂಗ್ರಹಿಸಲಾಗಿದೆ. ಜೊತೆಗೆ ಬೆಳೆ ಸಮೀಕ್ಷೆಯನ್ನು ಸಹ ಡಿಜಿಟೈಸ್‌ ಮಾಡಿರುವುದರಿಂದ ನಿಖರ ಮಾಹಿತಿ ದೊರೆಯುವುದು. ರೈತರಿಗೆ ಎನ್.ಡಿ.ಆರ್.ಎಫ್. ಮಾರ್ಗ ಸೂಚಿಯಲ್ಲಿ ನಿಗದಿ ಪಡಿಸಿರುವ ಬೆಳೆ ನಷ್ಟ ಪರಿಹಾರ ಅತ್ಯಂತ ಕಡಿಮೆಯಿದ್ದು, ಅದನ್ನು ಹೆಚ್ಚಿಸುವ ಅಗತ್ಯವಿದೆ. ರಾಜ್ಯದಲ್ಲಿ ಹೆಚ್ಚುವರಿಯಾಗಿ ಬೆಳೆ ನಷ್ಟ ಪರಿಹಾರ ನೀಡಲಾಗುತ್ತಿದೆ ಎಂದು ಸಿಎಂ ತಿಳಿಸಿದರು.

ಕಂದಾಯ, ಕೃಷಿ ಸಚಿವರ ಜೊತೆ ಸಭೆ:ಸಮಗ್ರ ಚಿತ್ರಣ, ರೈತರ ಸಮಸ್ಯೆ, ಎಷ್ಟು ಬೆಳೆ ಹಾನಿಯಾಗಿದೆ ಮತ್ತು ಬೆಳೆ ಹಾನಿ ಪ್ರದೇಶದ ಬಗ್ಗೆ ಅಧಿಕಾರಿಗಳ ತಂಡಕ್ಕೆ ಮನವರಿಕೆ ಮಾಡಿದ್ದೇವೆ ಎಂದು ತಿಳಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ನಮಗೆ ಜೂನ್​​ನಲ್ಲಿ ಶೇ.56ರಷ್ಟು ಮಳೆ ಕೊರತೆಯಾಗಿದೆ. ಆಗಸ್ಟ್​​ನಲ್ಲಿ ಶೇ.73 ರಷ್ಟು ಮಳೆ ಕೊರತೆಯಾಗಿದೆ. ಅದು ಕೃಷಿಯಲ್ಲಿ ಚೇತರಿಕೆ ಆಗದೆ ಏಟು ಕೊಟ್ಟಿದೆ. ವಾಡಿಕೆ ಪ್ರಕಾರ ಇಳುವರಿ ಕಷ್ಟ ಸಾಧ್ಯ. ಹಲವೆಡೆ ನಿಮಗೆ ಬೆಳೆ ಇರುವಂತೆ ಕಂಡುಬಂದರೂ ಬೆಳೆ ಇದೆ ಎಂದು ತಿಳಿದುಕೊಳ್ಳಬೇಡಿ. ಅದರಿಂದ‌ ಬೆಳೆ ಬರಬಹುದಾ ಎಂದು ರೈತರನ್ನು, ವಿಜ್ಞಾನಿಗಳಲ್ಲಿ ಕೇಳಿ. ಹಸಿರಾಗಿ ಕಂಡುಬಂದರೂ ಅದರಿಂದ ಯಾವುದೇ ಪ್ರಯೋಜನವಾಗಲ್ಲ. ಇದನ್ನು ಆಳವಾಗಿ ಅಧ್ಯಯನ ನಡೆಸಿ ಎಂದು ಒತ್ತಾಯ ಮಾಡಿದ್ದೇವೆ ಎಂದರು.

ಇನ್ನೂ 15 ತಾಲೂಕು ಬರಪೀಡಿತ ಸಾಧ್ಯತೆ:ಸಣ್ಣ ಹಾಗೂ ಅತಿ ಸಣ್ಣ ರೈತರ ಸಂಖ್ಯೆ ಹೆಚ್ಚಿದ್ದು, ಅದನ್ನೂ ಗಮನಕ್ಕೆ ತೆಗೆದುಕೊಳ್ಳುವಂತೆ ಮನವಿ ಮಾಡಲಾಗಿದೆ. ಕೇಂದ್ರ ಸರ್ಕಾರದ ಬಳಿ 2015ರ ಅಂಕಿಅಂಶ ಇದೆ. ಅದು ಈಗಿನ ವಾಸ್ತವತೆಗೆ ತಾಳೆ ಆಗಲ್ಲ. ನಮ್ಮಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರ ಸಂಖ್ಯೆ ಹೆಚ್ಚಾಗಿದೆ. ಸಣ್ಣ ರೈತರಿಗೆ ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತದೆ. ಈಗ ಘೋಷಿಸಿರುವ ಬರ ತಾಲೂಕು ಅಂತಿಮವಲ್ಲ. ಇನ್ನಷ್ಟು ಹೆಚ್ಚುವ ‌ಸಾಧ್ಯತೆ‌ ಇದೆ. ಮಳೆ‌ ಕೊರತೆ ಮುಂದುವರಿದಿದೆ. 41 ತಾಲೂಕುಗಳ ಪೈಕಿ ಈಗ 15 ತಾಲೂಕು ಬರ ಪೀಡಿತವಾಗುವ ಸಾಧ್ಯತೆ ಇದೆ. ಸೋಮವಾರ ಅದರ ಬಗ್ಗೆ ಅಂತಿಮ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.‌

ರಾಜ್ಯದ ಹವಾಮಾನ ಇಲಾಖೆ ಹಾಗೂ ಕೇಂದ್ರ ಹವಾಮಾನ‌ ಇಲಾಖೆ ಅಂಕಿ ಅಂಶದಲ್ಲಿ ವ್ಯತ್ಯಾಸ ಇದೆ. ಅದನ್ನು ಅವರ ಗಮನಕ್ಕೆ ತಂದಿದ್ದೇವೆ.‌ ಇನ್ನು 34 ಸಾಧಾರಣ ಬರ ತಾಲೂಕುಗಳ ಪೈಕಿ ಕೆಲ ತಾಲೂಕುಗಳು ತೀವ್ರ ಬರ ಪೀಡಿತ ಆಗುವ ಸಾಧ್ಯತೆ ಇದೆ. ಅಂಕಿ ಅಂಶ ಅಧ್ಯಯನ ಮಾಡಿ ಮುಂದಿನ‌ ವಾರ ಅದನ್ನು ಅಂತಿಮ ಮಾಡುತ್ತೇವೆ ಎಂದರು.

ಇದನ್ನೂ ಓದಿ: ಬರದಿಂದ 30,432 ಕೋಟಿ ರೂ ನಷ್ಟ: NDRFನಡಿ 4,860 ಕೋಟಿ ರೂ ಪರಿಹಾರ ಕೋರಲು ಸಂಪುಟ ತೀರ್ಮಾನ

ABOUT THE AUTHOR

...view details