ಬೆಂಗಳೂರು : ಎಷ್ಟೇ ರಾಜಕೀಯ ಶಕ್ತಿ ಹೊಂದಿದ್ದರೂ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದು ಖಚಿತ ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. ಹೆಚ್ಬಿಆರ್ ಲೇಔಟ್ನಲ್ಲಿ ನೂತನವಾಗಿ ನಿರ್ಮಿಸಿರುವ ಬ್ಯಾರೀಸ್ ಸೌಹಾರ್ದ ಭವನವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಆಡಳಿತದಲ್ಲಿ ಯಾರೂ ಕಾನೂನು ಕೈಗೆತ್ತಿಕೊಳ್ಳಲು ಅವಕಾಶವಿಲ್ಲ. ಎಲ್ಲ ಜಾತಿ, ಧರ್ಮದವರಿಗೂ ಅವರ ಸಂವಿಧಾನಬದ್ದ ಹಕ್ಕುಗಳನ್ನು ಆಚರಿಸಲು ಅವಕಾಶವಿದೆ. ಇದಕ್ಕೆ ಯಾರೇ ತೊಂದರೆ ಕೊಟ್ಟರೂ ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಂವಿಧಾನದ ಮೌಲ್ಯವನ್ನು ತನ್ನ ಮೌಲ್ಯವಾಗಿ ಆಚರಿಸುತ್ತಿರುವ ಏಕೈಕ ರಾಷ್ಟ್ರೀಯ ಪಕ್ಷ ಕಾಂಗ್ರೆಸ್. ಭಾರತದ ವೈವಿಧ್ಯತೆ ಮತ್ತು ಏಕತೆಯನ್ನು ಇತರ ದೇಶಗಳಲ್ಲಿ ಕಾಣಲು ಸಾಧ್ಯವಿಲ್ಲ. ಭಿನ್ನ ಸಂಸ್ಕೃತಿಗಳ ನಡುವೆ ಸಮನ್ವಯ, ಸೌಹಾರ್ದ ಇಲ್ಲದೇ ಹೋದರೆ ಆ ದೇಶದಲ್ಲಿ, ಆ ಸಮಾಜದಲ್ಲಿ ನೆಮ್ಮದಿ ಇರಲು ಸಾಧ್ಯವಿಲ್ಲ. ನೆಮ್ಮದಿ ಇಲ್ಲದ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದರು.
ಮೊಯ್ದೀನ್ ಅವರು ಸೌಹಾರ್ದತೆಯಲ್ಲಿ ನಂಬಿಕೆ ಇಟ್ಟುಕೊಂಡಿದ್ದರು. ಪರಸ್ಪರ ಅಪನಂಬಿಕೆ ಮತ್ತು ದ್ವೇಷವನ್ನು ಬಿತ್ತುವವರು ಈ ದೇಶದ ಅವನತಿಗೆ ಕಾರಣ ಆಗುತ್ತಾರೆ. ನಮ್ಮ ಸಂವಿಧಾನ ಜಾತ್ಯತೀತತೆ, ಸೌಹಾರ್ದತೆ ಎತ್ತಿ ಹಿಡಿದಿದೆ. ಭಾರತದಲ್ಲಿ ಜಾತ್ಯತೀತ ಮೌಲ್ಯವನ್ನು ಮತ್ತು ಸಂವಿಧಾನದ ಮೌಲ್ಯವನ್ನು ತನ್ನ ಮೌಲ್ಯವಾಗಿ ಆಚರಿಸುತ್ತಿರುವ ಏಕೈಕ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಎಂದು ವಿವರಿಸಿದರು.
ಈಗ ಎಲ್ಲಿ ಹೋಯ್ತು ಜಾತ್ಯತೀತ ಮೌಲ್ಯ :ಜಾತ್ಯತೀತ ಜನತಾದಳದ ಸಂಸ್ಥಾಪಕ ಸದಸ್ಯರಲ್ಲಿ ನಾನು ಒಬ್ಬ. ಬದುಕಿರುವವರೆಗೂ ಬಿಜೆಪಿ ಜತೆ ಸೇರುವುದಿಲ್ಲ ಎಂದು ದೇವೇಗೌಡರು ಹೇಳಿದ್ದರು. ಈಗ ಅದೇ ದೇವೇಗೌಡರು ಬಿಜೆಪಿ ಜತೆ ಕೈಜೋಡಿಸುತ್ತಿದ್ದಾರೆ. ಈಗ ಎಲ್ಲಿ ಹೋಯಿತು ಅವರ ಜಾತ್ಯತೀತ ಮೌಲ್ಯ ಎಂದು ಪ್ರಶ್ನಿಸಿದರು.
ಎಲ್ಲಾ ಧರ್ಮ, ಜಾತಿಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಸರ್ಕಾರ..ಡಿಕೆಶಿ :ಎಲ್ಲ ಧರ್ಮ, ಜಾತಿಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಸರ್ಕಾರ ನಮ್ಮದು ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲ ಧರ್ಮದವರನ್ನು ಕಾಂಗ್ರೆಸ್ ಸರ್ಕಾರ ಕಾಪಾಡುತ್ತದೆ. ರಾಜ್ಯದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಶೈಕ್ಷಣಿಕ ಬೆಳವಣಿಗೆಗೆ ಬ್ಯಾರಿ ಭಾಷಿಕ ಸಮುದಾಯ ಸಾಕಷ್ಟು ಕೊಡುಗೆ ನೀಡಿದೆ ಎಂದು ಅಭಿಪ್ರಾಯಪಟ್ಟರು.