ಕರ್ನಾಟಕ

karnataka

ETV Bharat / state

ಇಸ್ರೋಕ್ಕೆ ಭೇಟಿ ನೀಡಿದ ಸಿಎಂ..'ಸರ್ಕಾರದಿಂದಲೇ ವಿಜ್ಞಾನಿಗಳಿಗೆ ಗೌರವ ಕಾರ್ಯಕ್ರಮ' ಎಂದ ಸಿದ್ದರಾಮಯ್ಯ - ಸಿಎಂ ಸಿದ್ದರಾಮಯ್ಯ ಇಸ್ರೋ ಕೇಂದ್ರಕ್ಕೆ ಭೇಟಿ

CM Siddaramaiah visited the ISRO centre: ಚಂದ್ರಯಾನ -3 ಯಶಸ್ವಿಯಾದ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಗುರುವಾರ ಇಸ್ರೋ ಕೇಂದ್ರಕ್ಕೆ ಭೇಟಿ ನೀಡಿ ವಿಜ್ಞಾನಿಗಳನ್ನು ಅಭಿನಂದಿಸಿದರು.

CM Siddaramaiah visited the ISRO centre
CM Siddaramaiah visited the ISRO centre

By ETV Bharat Karnataka Team

Published : Aug 24, 2023, 12:10 PM IST

Updated : Aug 24, 2023, 10:59 PM IST

ಇಸ್ರೋಕ್ಕೆ ಭೇಟಿ ನೀಡಿದ ಸಿಎಂ

ಬೆಂಗಳೂರು:ಇಸ್ರೋದ ಮಹೋನ್ನತ ಸಾಧನೆಗೆ ಇಡೀ ವಿಶ್ವವೇ ಅಭಿನಂದಿಸಿ ಕೊಂಡಾಡುತ್ತಿದೆ. ಇದೀಗ ಸಿಎಂ ಸಿದ್ದರಾಮಯ್ಯ ಪೀಣ್ಯದಲ್ಲಿರುವ ಇಸ್ರೋ ಕೇಂದ್ರಕ್ಕೆ ಭೇಟಿ ನೀಡಿದರು. ಚಂದ್ರಯಾನ-3 ಯಶಸ್ಸಿಗೆ ಕಾರಣರಾದ ಇಸ್ರೋ ಅಧ್ಯಕ್ಷ ಸೋಮನಾಥ ಸೇರಿದಂತೆ ಅಲ್ಲಿಯ ವಿಜ್ಞಾನಿಗಳು, ಸಿಬ್ಬಂದಿ ವರ್ಗದವರನ್ನು ಸನ್ಮಾನಿಸಿ ಗೌರವಿಸಿದರು. ಇಸ್ರೋ ಅಧ್ಯಕ್ಷರಿಗೆ ಸಿಎಂ ಸಿದ್ದರಾಮಯ್ಯ ಮೈಸೂರು ಪೇಟಾ ತೊಡಿಸಿ ಅಭಿನಂದನೆ ಸಲ್ಲಿಸಿದರು. ಜತೆಗೆ ಸಿಹಿ ಹಂಚಿ ಸಂಭ್ರಮಿಸಿದರು.

ಬಳಿಕ ಇಸ್ರೋ ಸಾಧನೆ ಕುರಿತು ಸಿಎಂ ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದರು. 'ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳಕ್ಕೆ ಕಾಲಿಡುವ ಮೂಲಕ ಇತಿಹಾಸ ನಿರ್ಮಾಣವಾಗಿದೆ. ಚಂದ್ರಯಾನ-3 ಯಶಸ್ವಿ ನಮಗೆಲ್ಲಾ ಹೆಮ್ಮೆ ತರುವಂತಹ ವಿಚಾರ. ನಾನು ಕೂಡ ವಿಕ್ರಮ್​ ರೋವರ್ ಲ್ಯಾಂಡಿಂಗ್ ವೀಕ್ಷಣೆ ಮಾಡಿದ್ದೇನೆ. ಬಹಳ ಖುಷಿ ಆಯಿತು, ಜೊತೆಗೆ ಹೆಮ್ಮೆ ಅನ್ನಿಸುತ್ತಿದೆ. ಇದೊಂದು ದೊಡ್ಡ ಸಾಧನೆ, ಹಲವು ವರ್ಷಗಳಿಂದ ವಿಜ್ಞಾನಿಗಳು ಶ್ರಮ ಪಡುತ್ತಿದ್ದಾರೆ' ಎಂದರು.

ಸಿದ್ದರಾಮಯ್ಯ ಇಸ್ರೋಕ್ಕೆ ಭೇಟಿ ನೀಡಿ ಅಭಿನಂದಿಸಿದ ಕ್ಷಣ

'ಅಂದಾಜು 500 ವಿಜ್ಞಾನಿಗಳ ಪರಿಶ್ರಮದ ಫಲ ಚಂದ್ರಯಾನ-3 ಯಶಸ್ಸು. ನಮ್ಮ ನೌಕೆ 3,84,000 ಸಾವಿರ ಕಿ‌ಮೀ ದೂರ ಕ್ರಮಿಸಿ ವಿಕ್ರಮ ಮೆರೆದಿದೆ. ವೈಯಕ್ತಿಕವಾಗಿ ನನಗೆ ಬಹಳ ಸಂತೋಷ ತಂದಿದೆ. ಚಂದ್ರಯಾನ-3 ಸಾಧನೆ ಐತಿಹಾಸಿಕವಾಗಿದ್ದು, ಈ ಸಾಧನೆಯಿಂದ ಇಡೀ ಜಗತ್ತು ಭಾರತದ ಕಡೆ ನೋಡುವಂತಾಗಿದೆ. ರಷ್ಯಾ, ಅಮೆರಿಕ, ಚೀನಾ, ಮಾತ್ರ ಚಂದ್ರನ ಅಂಗಳ ತಲುಪಿದ್ದವು. ಈಗ ಭಾರತ ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವ ತಲುಪಿದೆ. ನಾವೆಲ್ಲರೂ ಇಸ್ರೋದ ಈ ಸಾಧನೆಯಿಂದ ಖುಷಿ ಪಡಬೇಕಿದೆ ಎಂದರು.

ಇಸ್ರೋ ವಿಜ್ಞಾನಿಗಳಿಗೆ ಸರ್ಕಾರದಿಂದ ಸನ್ಮಾನ:ಇಸ್ರೋಸಾಧನೆ ಕುರಿತು ಹೆಮ್ಮೆಯ ಮಾತನಾಡಿದ ಮುಖ್ಯಮಂತ್ರಿಗಳು, ಇಸ್ರೋ ಅಧ್ಯಕ್ಷರಿಗೆ ಹಾಗೂ ವಿಜ್ಞಾನಿಗಳಿಗೆ ಸರ್ಕಾರದ ವತಿಯಿಂದ ಗೌರವಿಸಲಾಗುತ್ತದೆ ಎಂದು ತಿಳಿಸಿದರು. ವಿಧಾನಸೌಧದ ಬಾಂಕ್ವೆಟ್ ಹಾಲ್​ನಲ್ಲಿ ಸರ್ಕಾರದಿಂದ ಕಾರ್ಯಕ್ರಮ ಆಯೋಜಿಸಿ ಗೌರವ ಸಲ್ಲಿಸಲಾಗುತ್ತದೆ. ಇಸ್ರೋ ತಂಡವನ್ನು ಸನ್ಮಾನಿಸಲು ನಾವು ವಿಶೇಷ ಸಮಾರಂಭ ಮಾಡುತ್ತೇವೆ ಎಂದರು.

ಸಿದ್ದರಾಮಯ್ಯ ಇಸ್ರೋಕ್ಕೆ ಭೇಟಿ ನೀಡಿ ಅಭಿನಂದಿಸಿದ ಕ್ಷಣ

ಸಿಎಂಗೆ ಸಚಿವ ಬೋಸರಾಜು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಸಾಥ್​ ನೀಡಿದರು. ಇನ್ನು ನಿನ್ನೆಯೇ(ಬುಧವಾರ) ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಇಸ್ರೋಗೆ ಭೇಟಿ ನೀಡಿ ಅಭಿನಂದಿಸಿದ್ದರು. ಇಸ್ರೋ ಅಧ್ಯಕ್ಷ ಸೋಮನಾಥ್, ಯು ಆರ್ ರಾವ್ ಬಾಹ್ಯಕಾಶ ಕೇಂದ್ರದ ನಿರ್ದೇಶಕ ಶಂಕರನ್, ಯೋಜನೆ ನಿರ್ದೇಶಕ ವೀರಮುತ್ತು, ಸಹಾಯಕ ಯೋಜನೆ ನಿರ್ದೇಶಕಿ ಕಲ್ಪನಾ, ಯಂತ್ರ ನಿರ್ವಹಣೆ ನಿರ್ದೇಶಕ ಶ್ರೀಕಾಂತ್ ಮತ್ತಿತರ ವಿಜ್ಞಾನಿಗಳನ್ನು ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಪುಷ್ಪಮಾಲೆ ಹಾಕಿ ಡಿ.ಕೆ.ಶಿವಕುಮಾರ್​ ಗೌರವ ಅರ್ಪಿಸಿದ್ದರು.

ಇದನ್ನೂ ಓದಿ:'ಇಡೀ ದೇಶವೇ ಹೆಮ್ಮೆ ಪಡುತ್ತಿದೆ': ಚಂದ್ರಯಾನ 3 ಯಶಸ್ಸಿಗೆ ಸಲ್ಮಾನ್​ ಖಾನ್​ ಅಭಿನಂದನೆ

ಐತಿಹಾಸಿಕ ದಿನ: ಸ್ಪೀಕರ್ ಯುಟಿ ಖಾದರ್

ಚಂದ್ರಯಾನ 3 ಸಕ್ಸಸ್ ಹಿನ್ನೆಲೆಯಲ್ಲಿ ಸ್ಪೀಕರ್ ಯುಟಿ ಖಾದರ್ ಅವರು ಕೂಡ ಇಂದು ಇಸ್ರೋಗೆ ಭೇಟಿ ನೀಡಿ, ಎಲ್ಲಾ ವಿಜ್ಞಾನಿಗಳನ್ನು ಅಭಿನಂದಿಸಿದರು. ಬಳಿಕ ಮಾತನಾಡಿದ ಅವರು, ಭಾರತ ದೇಶಕ್ಕೆ ಇದೊಂದು ಐತಿಹಾಸಿಕ ದಿನ. ವರಮಹಾಲಕ್ಷ್ಮಿ ಹಬ್ಬಕ್ಕೆ ಬಹು ದೊಡ್ಡ ಕೊಡುಗೆ ಸಿಕ್ಕಿದೆ. ಈ ಯಶಸ್ಸು ಭವಿಷ್ಯದ ತಲೆಮಾರಿಗೆ ಮತ್ತು ಸಂಶೋಧನೆಗೆ ಪ್ರಯೋಜನ ಆಗಲಿದೆ. ಇಸ್ರೋ ಮುಂದಿನ ಕನಸಿಗೆ ಯಶಸ್ಸು ಸಿಗಲಿ. ವಿಧಾನಸೌಧದಲ್ಲಿ ವಿಜ್ಞಾನಿಗಳಿಗೆ ಗೌರವ ಸಲ್ಲಿಸುವ ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

Last Updated : Aug 24, 2023, 10:59 PM IST

ABOUT THE AUTHOR

...view details