ಬೆಂಗಳೂರು: ಪತ್ನಿ ಅನಾರೋಗ್ಯದಿಂದ ಆಸ್ಪತ್ರೆ ಸೇರಿರುವ ಹಿನ್ನೆಲೆ ಅವರ ಆರೋಗ್ಯ ವಿಚಾರಿಸಿದ ಬಳಿಕ ಸಿಎಂ ಸಿದ್ದರಾಮಯ್ಯ ದೆಹಲಿ ಪ್ರಯಾಣ ಬೆಳೆಸಿದ್ದಾರೆ. ಪಕ್ಷದ ಹೈಕಮಾಂಡ್ ನಾಯಕರ ಭೇಟಿಗಾಗಿ ಸಿದ್ದರಾಮಯ್ಯ ನಿನ್ನೆಯೇ ತೆರಳಬೇಕಿತ್ತು. ಆದರೆ ನಿನ್ನೆ ವಿವಿಧ ಕಾರ್ಯಕ್ರಮ ಎದುರಾದ ಹಿನ್ನೆಲೆ ಇಂದಿಗೆ ಮುಂದೂಡಿದ್ದರು. ಬೆಳಗ್ಗೆ ಪ್ರಯಾಣ ಬೆಳೆಸಬೇಕಿತ್ತು. ಆದರೆ ತೀವ್ರ ಜ್ವರದ ಕಾರಣ ನಿನ್ನೆ ರಾತ್ರಿ ಸಿಎಂ ಪತ್ನಿ ಪಾರ್ವತಿ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪಾರ್ವತಿ ಸಿದ್ದರಾಮಯ್ಯ ಅವರ ಆರೋಗ್ಯ ಸ್ಥಿರ.. ಸದ್ಯ ಪಾರ್ವತಿ ಅವರಿಗೆ ಎಂಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಬೆಳಗ್ಗೆ ಸಿದ್ದರಾಮಯ್ಯ ಅವರು ಆಸ್ಪತ್ರೆಗೆ ಭೇಟಿ ನೀಡಿ ಪತ್ನಿ ಆರೋಗ್ಯ ವಿಚಾರಿಸಿದರು. ಈ ಹಿನ್ನೆಲೆ ಇವರ ದಿಲ್ಲಿ ಪ್ರವಾಸ ಮಧ್ಯಾಹ್ನಕ್ಕೆ ಮುಂದೂಡಿಕೆಯಾಗಿದೆ. ವೈದ್ಯರ ಬಳಿ ಪತ್ನಿಯ ಆರೋಗ್ಯದ ಮಾಹಿತಿ ಪಡೆದ ಬಳಿಕ ಸಿದ್ದರಾಮಯ್ಯ ದಿಲ್ಲಿಗೆ ಪ್ರಯಾಣ ಬೆಳೆಸಿದ್ದಾರೆ. ಪಾರ್ವತಿ ಅವರ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಇಂದು ಸಂಜೆ ಐಸಿಯುನಿಂದ ವಾರ್ಡ್‌ಗೆ ಸ್ಥಳಾಂತರಿಸಲಾಗುತ್ತದೆ. ಆತಂಕ ಪಡುವ ಅಗತ್ಯ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಪಾರ್ವತಿ ಅವರು ಜ್ವರದ ಜತೆ ತೀವ್ರ ಉಸಿರಾಟದ ಸಮಸ್ಯೆಯಿಂದಲೂ ಬಳಲುತ್ತಿದ್ದರು. ಆರೋಗ್ಯ ಬಿಗಡಾಯಿಸುತ್ತಿರುವುದನ್ನು ಗಮನಿಸಿ ನಿನ್ನೆ ಸಂಜೆ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಅಲ್ಲಿಂದಲೇ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ತೆರಳಿರುವ ಸಿದ್ದರಾಮಯ್ಯ ಅವರು ವಿಶೇಷ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
ರಾಷ್ಟ್ರಪತಿ ಸೇರಿದಂತೆ ಕೇಂದ್ರದ ವಿವಿಧ ಇಲಾಖೆ ಸಚಿವರ ಭೇಟಿ.. ರಾಷ್ಟ್ರಪತಿ, ಕೇಂದ್ರ ಸರ್ಕಾರದ ವಿವಿಧ ಇಲಾಖೆ ಸಚಿವರನ್ನು ಸಿದ್ದರಾಮಯ್ಯ ಭೇಟಿ ಮಾಡಲಿದ್ದಾರೆ. 'ಅನ್ನಭಾಗ್ಯ' ಅಕ್ಕಿ ವಿಚಾರವಾಗಿ ಎದುರಾಗಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಈ ಪ್ರಯಾಣ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಜತೆ ಸಚಿವರಾದ ಜಮೀರ್ ಅಹ್ಮದ್ ಖಾನ್, ಬೈರತಿ ಸುರೇಶ್ ಮುಂತಾದವರು ತೆರಳಿದ್ದಾರೆ.
ಚರ್ಚೆಗೆ ಗ್ರಾಸವಾಗಿರುವ ಅನ್ನಭಾಗ್ಯ ಅಕ್ಕಿ ವಿಚಾರ..ಕಾಂಗ್ರೆಸ್ ಪಕ್ಷ ಚುನಾವಣೆ ಪೂರ್ವದಲ್ಲಿ ರಾಜ್ಯದ ಜನರಿಗೆ ಐದು ಗ್ಯಾರಂಟಿಗಳನ್ನು ಘೋಷಿಸಿತ್ತು. ಇದರಲ್ಲಿ ಅನ್ನಭಾಗ್ಯ ಯೋಜನೆಯೂ ಒಂದು.ಈಗಾಗಲೇ ಭಾರತೀಯ ಆಹಾರ ನಿಗಮವು ರಾಜ್ಯ ಸರ್ಕಾರಕ್ಕೆ ಅಕ್ಕಿಯನ್ನು ಪೂರೈಸಲು ಸಾಧ್ಯವಿಲ್ಲ ಎಂದು ಪತ್ರ ಬರೆದಿದೆ. ರಾಜ್ಯದ ಜನರಿಗೆ ಉಚಿತ ಅಕ್ಕಿ ವಿತರಿಸಲು 2.38 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಅಗತ್ಯವಿದ್ದು, ಕೇಂದ್ರ ಸರ್ಕಾರ ಇದರಲ್ಲಿ ರಾಜಕೀಯ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ.
ಬಿಜೆಪಿ ನಾಯಕರಿಂದ ಸಮರ್ಥನೆ..ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಎಲ್ಲದಕ್ಕೂ ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರದ ಕಡೆ ಬೆರಳು ಮಾಡುತ್ತಾರೆ. ಈಗಾಗಲೇ ಕೇಂದ್ರ ಸರ್ಕಾರದಿಂದ ಐದು ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗ್ತಿದೆ. ಹಾಗಾಗಿ ರಾಜ್ಯ ಸರ್ಕಾರ ಇನ್ನೂ 10 ಕೆಜಿ ಅಕ್ಕಿಯನ್ನು ಸೇರಿಸಿ ಜನತೆಗೆ ವಿತರಿಸಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಪಕ್ಷದ ವಿವಿಧ ನಾಯಕರು ಹೇಳುತ್ತಿದ್ದಾರೆ.ಅಲ್ಲದೆ, ಎಫ್ಸಿಐನಲ್ಲಿ ಇಂತಿಷ್ಟು ಅಕ್ಕಿ ಸಂಗ್ರಹ ಇರಲೇಬೇಕೆಂಬ ನಿಯಮ ಇದೆ. ಅದನ್ನು ಮೀರಿ ಅವರು ಉಚಿತ ಅಕ್ಕಿ ಪೂರೈಸಲು ಸಾಧ್ಯವಿಲ್ಲ ಎಂದು ಹುಬ್ಬಳ್ಳಿಯಲ್ಲಿಂದು ಕೇಂದ್ರ ಸಚಿವ ಜೋಶಿ ಸಮರ್ಥಿಸಿಕೊಂಡಿದ್ದಾರೆ. ಈಗ ಕೇಂದ್ರ ನೀಡುತ್ತಿರುವ ಐದು ಕೆಜಿ ಅಕ್ಕಿ ಬಗ್ಗೆ ರಾಜ್ಯ ಸರ್ಕಾರ ಯಾಕೆ ಜನರಿಗೆ ಹೇಳುತ್ತಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ಉತ್ತರ ಕನ್ನಡ: ವಿಷಕಾರಿ ಹಣ್ಣಿನ ಬೀಜ ತಿಂದ 10 ಹೆಚ್ಚು ಮಕ್ಕಳು ಅಸ್ವಸ್ಥ