ಬೆಂಗಳೂರು: ಉದ್ಘಾಟನೆ ಆದಾಗಿನಿಂದ ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ ವೇ ಸುದ್ದಿಯಾಗುತ್ತಲೇ ಇದೆ. ಇತ್ತೀಚೆಗಷ್ಟೇ ಈ ಹೆದ್ದಾರಿಯಲ್ಲಿ ದ್ವಿಚಕ್ರ, ತ್ರಿಚಕ್ರ ವಾಹನಗಳು, ಟ್ರ್ಯಾಕ್ಟರ್ನಂತಹ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶ ಹೊರಡಿಸಿತ್ತು. ಇಲ್ಲಿನ ಅಪಘಾತ ಸ್ಥಳಗಳ ವೀಕ್ಷಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ನಡೆಸಲಿದ್ದಾರೆ. ಹೆದ್ದಾರಿಯಲ್ಲಿ ಅಪಘಾತ ನಡೆಯುವ ಸ್ಥಳಗಳು, ರಸ್ತೆ ಅಪಘಾತ ತಡೆಗೆ ಹೆದ್ದಾರಿ ಪ್ರಾಧಿಕಾರ ಮತ್ತು ಪೊಲೀಸ್ ಇಲಾಖೆ ತೆಗೆದುಕೊಂಡ ಕ್ರಮಗಳು, ಹೆದ್ದಾರಿ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ಹಾಗೂ ರಸ್ತೆ ಸಂಚಾರ ಮಾಡುವ ಪ್ರಯಾಣಿಕರ ಸೌಲಭ್ಯಗಳ ಕುಂದು ಕೊರತೆಯೂ ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ಸಿಎಂ ಪರಿಶೀಲನೆ ಮಾಡಲಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಗ್ಗೆ 10.30ಕ್ಕೆ ಬೆಂಗಳೂರಿನಿಂದ ರಸ್ತೆ ಮಾರ್ಗದಲ್ಲಿಯೇ ಭದ್ರತೆಯೊಂದಿಗೆ ತೆರಳಿ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇ ವೀಕ್ಷಣೆ ಮಾಡಲಿದ್ದಾರೆ. ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಮುಂತಾದೆಡೆ ಹೆದ್ದಾರಿ ಪರಿಶೀಲಿಸಲಿದ್ದಾರೆ. ಬೆಂಗಳೂರಿನಿಂದ 93 ಕಿಲೋ ಮೀಟರ್ ಅಂತರದಲ್ಲಿರುವ ಮಂಡ್ಯದ ಅಮರಾವತಿ ಹೋಟೆಲ್ ಸಮೀಪ ಹಾಗೂ ಗಣಂಗೂರು ಟೋಲ್ ಪ್ಲಾಜಾ ಸಮೀಪ ಸಿಎಂ ಸಿದ್ದರಾಮಯ್ಯ ಖುದ್ದಾಗಿ ಪರಿಶೀಲನೆ ಕೈಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಹಾಗೂ ಕಾಂಗ್ರೆಸ್ ಪಕ್ಷದ ಶಾಸಕರು, ಮುಖಂಡರುಗಳು ಹಾಜರಿರಲಿದ್ದಾರೆ.