ಬೆಂಗಳೂರು:ಆರ್ಥಿಕತೆಯ ಚಲನಶೀಲತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಐದು ಗ್ಯಾರಂಟಿ ಯೋಜನೆಗಳ ಮೂಲಕ ಸಾರ್ವತ್ರಿಕ ಮೂಲ ಆದಾಯದ ಪರಿಕಲ್ಪನೆಯನ್ನು ಪರಿಚಯಿಸುತ್ತಿರುವ ಮೊದಲ ರಾಜ್ಯ ಕರ್ನಾಟಕವಾಗಿದೆ. ಇದು ಕರ್ನಾಟಕದ ಮಾದರಿ ಅಭಿವೃದ್ಧಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು. ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ಯುನಿವರ್ಸಲ್ ಮೂಲ ಆದಾಯದ ಪರಿಕಲ್ಪನೆ ಅಡಿ ಬಜೆಟ್ ಅನ್ನು ಅನುಷ್ಠಾನ ಮಾಡುತ್ತೇವೆ. ಎಲ್ಲ ಬಡ ಮತ್ತು ಮಧ್ಯಮ ವರ್ಗದವರಿಗೆ ಹಣ ವೃದ್ಧಿಗೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.
ಬಿಜೆಪಿ ಯಾವತ್ತೂ ವಿಪಕ್ಷ ಸ್ಥಾನದಲ್ಲಿ ಇರಬೇಕು:ಬಿಜೆಪಿಯವರು ಯಾವತ್ತೂ ಅಧಿಕಾರಕ್ಕೆ ಬರಬಾರದು, ಅವರು ಯಾವತ್ತೂ ವಿರೋಧ ಪಕ್ಷದಲ್ಲೇ ಇರಬೇಕು. ಬಿಜೆಪಿ ಮುಕ್ತ ಕರ್ನಾಟಕ ಅಂತ ನಾನು ಹೇಳಲ್ಲ. ಅವರು ಕೋಮುವಾದಿ ಆಗಿರುವುದರಿಂದ, ವಿಛಿದ್ರಕಾರಿ ಶಕ್ತಿಗಳಾಗಿರುವುದರಿಂದ, ಧರ್ಮ ಧರ್ಮಗಳ ಮಧ್ಯೆ ದ್ವೇಷ ಉಂಟು ಮಾಡುವುದರಿಂದ, ಅವರು ಯಾವತ್ತೂ ಅಧಿಕಾರಕ್ಕೆ ಬರಬಾರದು ಎಂಬುದು ನಮ್ಮ ಆಶಯ. ಅವರು ಯಾವತ್ತೂ ವಿರೋಧ ಪಕ್ಷದಲ್ಲೇ ಇರಬೇಕು ಎಂದರು.
ಈ ಹಿಂದಿನದ್ದು ಚುನಾವಣೆಗೋಸ್ಕರ ಮಂಡಿಸಿದ ಬಜೆಟ್. ಬಜೆಟ್ನ್ನು ಯಾರೆಲ್ಲ ಟೀಕೆ ಮಾಡಿದ್ದಾರೆ ಹಾಗೂ ಸ್ವಾಗತ ಮಾಡಿದ್ದಾರೆ, ಅದೆಲ್ಲವನ್ನೂ ನಾನು ಸ್ವಾಗತ ಮಾಡುತ್ತೇನೆ. ಮೊದಲ ಬಾರಿಗೆ ವಿಪಕ್ಷ ಸದಸ್ಯರಿಲ್ಲದೇ ಉತ್ತರ ಕೊಡುವ ಪರಿಸ್ಥಿತಿ ನಿರ್ಮಾಣವಾಗಿದೆ. 14 ಬಜೆಟ್ ಮಂಡಿಸಿ ಇದೇ ಮೊದಲ ಬಾರಿಗೆ ಈ ರೀತಿ ಆಗಿದೆ. ಇದು ಬಹಳ ದುಃಖದ ಸಂಗತಿಯಾಗಿದೆ. ರಾಜ್ಯದ ಇತಿಹಾಸದಲ್ಲಿ ರಾಜ್ಯಪಾಲರ ಭಾಷಣ ಹಾಗೂ ಆಯವ್ಯಯ ಬಹಳ ಪ್ರಮುಖವಾಗಿದೆ. ಇವೆರಡೂ ವಿಷಯಗಳ ಮೇಲೆ ವಿಪಕ್ಷ ನಾಯಕನಿಲ್ಲದೆ ಚರ್ಚೆ ನಡೆದಿರುವುದು ಇದೇ ಮೊದಲ ಸಲ ಎಂದು ಟೀಕಿಸಿದರು.
ಕೇಂದ್ರದಲ್ಲಿ ಅಧಿಕಾರಕ್ಕೆ ಇರುವಂತವರು, ಎರಡು ಬಾರಿ ಆಡಳಿತದಲ್ಲಿದ್ದರು. ವಿಪಕ್ಷ ನಾಯಕನ ಆಯ್ಕೆ ಮಾಡದೇ ಆ ಪಕ್ಷ ರಾಜಕೀಯವಾಗಿ ದಿವಾಳಿಯಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾದ ವಿಷಯ. ಬಿಜೆಪಿಗೆ ಪ್ರಜಾಪ್ರಭುತ್ವ, ಸಂವಿಧಾನದ ಮೇಲೆ ನಂಬಿಕೆ ಇಲ್ಲ. ರಾಜ್ಯಪಾಲರ ಭಾಷಣದ ಮೇಲೆ ಹಾಗೂ ಬಜೆಟ್ ಮೇಲೆ ಚರ್ಚಿಸಿ ಅದರ ತಪ್ಪಿನ ಬಗ್ಗೆ ಹೇಳಬೇಕಾಗಿತ್ತು. ಅದ್ಯಾವುದೂ ಮಾಡದೇ ಕೇವಲ ಪ್ರತಿಭಟನೆ, ಗಲಾಟೆಯನ್ನೇ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ವಿರೋಧ, ಪ್ರತಿಭಟನೆ ಮಾಡುವುದು ಅವರ ಹಕ್ಕು. ಆದರೆ ವಿರೋಧಕ್ಕಾಗಿ ವಿರೋಧ ಮಾಡುವುದಲ್ಲ ಎಂದು ಸಿಎಂ ಟೀಕಾಪ್ರಹಾರ ನಡೆಸಿದರು.
ಕಾಂಗ್ರೆಸ್ನ 32 ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿದ್ದಾರೆ. ಆದರೆ, ಬಿಜೆಪಿಯಲ್ಲಿ 22 ಶಾಸಕರು ಮಾತ್ರ ಮಾತನಾಡಿದ್ದಾರೆ. ರಾಜ್ಯದ ಆಗುಹೋಗಿನ ಬಗ್ಗೆ ಇವರಿಗೆ ಕಾಳಜಿ ಇಲ್ಲ. ಕರ್ತವ್ಯಕ್ಕಿಂತ ಅವರಿಗೆ ರಾಜಕೀಯವೇ ಹೆಚ್ಚಾಗಿದೆ. ಅವರು ಎಷ್ಟೇ ರಾಜಕೀಯ ಮಾಡಿದರೂ ನಾವು ಹೆದರಲ್ಲ. ಜನರು ಕೊಟ್ಟ ಮ್ಯಾಂಡೇಟ್ ಬಗ್ಗೆ ಅವರಿಗೆ ಗೌರವ ಇಲ್ಲ. ನಾವು ಐದು ಗ್ಯಾರಂಟಿಗಳನ್ನು ಜಾರಿ ಮಾಡಿರುವುದು ಅವರಿಗೆ ಹೊಟ್ಟೆ ಉರಿಯಾಗಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಹೆಚ್ಡಿಕೆ ಸುಳ್ಳು ಹೇಳಿದ್ದಾರೆಂದ ಸಿಎಂ:2015ರಲ್ಲಿ ಬೆಂಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಿತು. ಅನಂತ್ ಕುಮಾರ್ ಅವರು ಸಭೆಗೆ ಬರುವವರನ್ನು ರಾಜ್ಯದ ಅತಿಥಿಗಳೆಂದು ಮಾಡಿ ಅಂತ ಕೇಳಿಕೊಂಡರು. ನಿರ್ಮಲಾ ಸೀತಾರಾಮನ್, ಥಾವರ್ ಚಂದ್ ಗೆಹ್ಲೋಟ್ ಮುಂತಾದವರನ್ನು ರಾಜ್ಯದ ಅತಿಥಿಗಳು ಅಂತ ಮಾಡಿದ್ದೆವು. ಆಗ ಅವರೆಲ್ಲ ದೇಶದ ವಿಚಾರ ಚರ್ಚೆ ಮಾಡಲು ಬಂದಿದ್ದರಾ? ಇಲ್ಲ. ಅವರೆಲ್ಲ ಪಕ್ಷದ ವಿಚಾರದ ಬಗ್ಗೆ ಚರ್ಚೆ ಮಾಡಿ ಹೋದರು ಎಂದು ಸಿಎಂ ತಿರುಗೇಟು ನೀಡಿದರು.