ಬೆಂಗಳೂರು: ನಮ್ಮ ಸರ್ಕಾರ ದೇವರು ಧರ್ಮದ ವಿಚಾರದಲ್ಲಿ ಕೃತ್ಯ ಎಸಗುವವರನ್ನು ಸಹಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸುತ್ತಾ, ಶಿವಮೊಗ್ಗದಲ್ಲಿ ನಡೆಯುತ್ತಿದ್ದ ಮೆರವಣಿಗೆ ವೇಳೆ, ರಾಗಿ ಗುಡ್ಡದಲ್ಲಿ ಯಾರೋ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ. ಈ ಸಂಬಂಧ ನಡೆದ ಘಟನೆ ಭಾಗವಾಗಿ 40ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಪೊಲೀಸರ ಮೇಲೂ ಕಲ್ಲು ತೂರಾಟ ನಡೆಸಲಾಗಿದೆ.
ಯಾವುದೇ ಧಾರ್ಮಿಕ ಕಾರ್ಯಕ್ರಮದಲ್ಲಿ ಬೇರೆಯವರು ಅವರ ಕಾರ್ಯಕ್ಕೆ ದಕ್ಕೆ ತರುವಂತದ್ದು, ಕಲ್ಲು ತೂರಾಟ ನಡೆಸುವುದು ಕಾನೂನು ಬಾಹಿರ ಚಟುವಟಿಕೆ. ಇಂತಹ ಚಟುವಟಿಕೆಯನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ, ಹತ್ತಿಕ್ಕುತ್ತೇವೆ. ಪೊಲೀಸರು ಸೂಕ್ತ ಸಮಯದಲ್ಲಿ ತ್ವರಿತ ಕ್ರಮ ತೆಗೆದುಕೊಂಡಿದ್ದಾರೆ. ಶಾಂತಿ ನೆಲೆಸಲು ನಾವು ಎಲ್ಲ ಪ್ರಯತ್ನಗಳನ್ನು ಮಾಡಿದ್ದೇವೆ. ಲಾಠಿ ಚಾರ್ಜ್ ಬಳಿಕ ಶಿವಮೊಗ್ಗ ನಗರದ ರಾಗಿಗುಡ್ಡ ಪ್ರದೇಶದಲ್ಲಿ ಶಾಂತಿ ನೆಲೆಸಿದೆ. ಪೊಲೀಸರ ಕ್ರಮದಿಂದ ಪರಿಸ್ಥಿತಿ ಶಾಂತವಾಗಿದೆ ಎಂದು ಅವರು ತಿಳಿಸಿದರು.
ಮಹಾತ್ಮ ಗಾಂಧಿ, ಲಾಲ್ ಬಹದ್ದೂರು ಶಾಸ್ತ್ರಿಗೆ ಗೌರವ ನಮನ:ಸಿಎಂ ಸಿದ್ದರಾಮಯ್ಯ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದೂರ ಶಾಸ್ತ್ರಿ ಜನ್ಮ ದಿನದ ನಿಮಿತ್ತ ಮಹಾನ್ ನಾಯಕರಿಬ್ಬರಿಗೆ ಗೌರವ ನಮನ ಸಲ್ಲಿಸಿದರು. ಜಗತ್ತಿನ 148 ದೇಶಗಳಲ್ಲಿ ಗಾಂಧೀಜಿ ಅವರ ಪ್ರತಿಮೆಗಳಿವೆ. ಸತ್ಯ, ಅಹಿಂಸಾ ತತ್ವ ಪ್ರತಿಪಾದಕರು. ಎಲ್ಲರೂ ಶಾಂತಿಯುತವಾಗಿ ಸಹಬಾಳ್ವೆ ನಡೆಸಬೇಕೆಂದು ಬಯಸಿದವರು. ಗಾಂಧೀಜಿ ವಿಶ್ವ ನಾಯಕರು ಎಂದು ಸಿದ್ದರಾಮಯ್ಯ ಬಣ್ಣಿಸಿದ್ದಾರೆ.