ಬೆಂಗಳೂರು :ಮೆಟ್ರೋ ಲೋಕಾರ್ಪಣೆ ವರ್ಚುವಲ್ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಇಂಗ್ಲಿಷ್ನಲ್ಲಿ ಭಾಷಣ ಮಾಡಲು ನಿರಾಕರಿಸಿ, ಕನ್ನಡದಲ್ಲೇ ಮಾತನಾಡಿದರು. ಉತ್ತರ ಪ್ರದೇಶದಿಂದ ವರ್ಚುವಲ್ ಮೂಲಕ ಪ್ರಧಾನಿ ಮೋದಿ ಕೃಷ್ಣರಾಜಪುರ ದಿಂದ ಬೈಯಪ್ಪನಹಳ್ಳಿ ಹಾಗೂ ಕೆಂಗೇರಿಯಿಂದ ಚಲ್ಲಘಟ್ಟದವರೆಗೆ ಎರಡು ವಿಸ್ತರಣೆಗಳ ಪೂರ್ವ-ಪಶ್ಚಿಮ ಕಾರಿಡಾರ್ ಅನ್ನು ಅಧಿಕೃತವಾಗಿ ಶುಕ್ರವಾರ ಲೋಕಾರ್ಪಣೆ ಮಾಡಿದರು. ಈ ವೇಳೆ ವರ್ಚುವಲ್ ಮೂಲಕ ಗೃಹ ಕಚೇರಿ ಕೃಷ್ಣಾದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಿಎಂ ಸಿದ್ದರಾಮಯ್ಯ ಕನ್ನಡದಲ್ಲೇ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಭಾಷಣ ಪ್ರಾರಂಭಿಸುವ ಮುನ್ನ ಸಿಎಂ ಸಿದ್ದರಾಮಯ್ಯನವರು, ನಾನು ಇಂಗ್ಲಿಷ್ನಲ್ಲಿ ಭಾಷಣ ಮಾಡಲು ಆಗುವುದಿಲ್ಲ ಎಂದು ಹೇಳಿ ಕನ್ನಡದಲ್ಲೇ ಮಾತು ಪ್ರಾರಂಭಿಸಿದರು. ಇದಕ್ಕೂ ಮುನ್ನ ವರ್ಚುವಲ್ ಡಿಸ್ಪ್ಲೇನಲ್ಲಿ ನಿಮ್ಮ ಫೋಟೋ ಹಾಕಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸಿಎಂ ಅವರಿಗೆ ಹೇಳಿದರು. ಈ ವೇಳೆ ಸಿಎಂ ಸಿದ್ದರಾಮಯ್ಯನವರು ಎಲ್ಲಿದೆ? ಎಂದು ಕೇಳಿದರು. ಬಳಿಕ ಪರದೆ ಮೇಲೆ ತಮ್ಮ ಫೋಟೋ ಬಂದಿರುವುದನ್ನು ಗಮನಿಸಿದರು.
ಇದಕ್ಕೂ ಮುನ್ನ ಅಧಿಕಾರಿಯೊಬ್ಬರು ಯಾವ ಭಾಷೆಯಲ್ಲಿ ಮಾತನಾಡುತ್ತೀರಾ ಎಂದು ಸಿಎಂ ಬಳಿ ಕೇಳಿದಾಗ ಉತ್ತರಿಸಿದ ಸಿದ್ದರಾಮಯ್ಯ, "ನಾನು ಕನ್ನಡಲ್ಲೇ ಮಾತನಾಡುತ್ತೇನೆ, ಕರ್ನಾಟಕದಿಂದ ಮಾತನಾಡುತ್ತಿರುವುದು. ಅವರಿಗಾಗಿ ಇಂಗ್ಲಿಷ್ನಲ್ಲಿ ಭಾಷಣ ಮಾಡಲು ಆಗುವುದಿಲ್ಲ" ಎಂದು ಹೇಳಿ ಮಾತೃ ಭಾಷೆಯಲ್ಲೇ ಕಾರ್ಯಕ್ರಮ ಉದ್ದೇಶಿಸಿ ಭಾಷಣ ಮಾಡಿದರು.
ಇದನ್ನೂ ಓದಿ :ನಮೋ ಭಾರತ್ ಕ್ಷಿಪ್ರ ರೈಲು ಸೇವೆಗೆ ಪ್ರಧಾನಿ ಮೋದಿ ಚಾಲನೆ : ರ‍್ಯಾಪಿಡ್ ಎಕ್ಸ್ ರೈಲಿನ ವಿಶೇಷತೆ ಏನು ?