ಕರ್ನಾಟಕ

karnataka

ETV Bharat / state

ತುರ್ತಾಗಿ ಉನ್ನತ ಮಟ್ಟದ ಸಭೆ ಕರೆದು, ಬರ ಪರಿಹಾರ ನೀಡಲು ಪ್ರಧಾನಿಗೆ ಒತ್ತಾಯಿಸಿದ್ದೇವೆ: ಸಿಎಂ - etv bharat kannada

ತುರ್ತಾಗಿ ಉನ್ನತ ಮಟ್ಟದ ಸಭೆ ನಡೆಸಿ, ಬರ ಪರಿಹಾರ ಒದಗಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒತ್ತಾಯಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

CM Siddaramaiah spoke after meeting Prime Minister Modi
ಸಿಎಂ ಸಿದ್ದರಾಮಯ್ಯ

By ETV Bharat Karnataka Team

Published : Dec 19, 2023, 3:13 PM IST

Updated : Dec 19, 2023, 6:34 PM IST

ತುರ್ತಾಗಿ ಉನ್ನತ ಮಟ್ಟದ ಸಭೆ ಕರೆದು, ಬರ ಪರಿಹಾರ ನೀಡಲು ಪ್ರಧಾನಿಗೆ ಒತ್ತಾಯಿಸಿದ್ದೇವೆ: ಸಿಎಂ

ನವದೆಹಲಿ/ಬೆಂಗಳೂರು: ಗೃಹ ಸಚಿವ ಅಮಿತ್ ಶಾ ನೇತೃತ್ವದ ಹೈ ಪವರ್ ಸಮಿತಿ ಸಭೆಯನ್ನು ತುರ್ತಾಗಿ ನಡೆಸಿ, ಶೀಘ್ರ ಬರ ಪರಿಹಾರ ಒದಗಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒತ್ತಾಯಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಪ್ರಧಾನಿ ಭೇಟಿ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, "ರಾಜ್ಯಕ್ಕೆ ಬರ ಪರಿಹಾರ ಸಿಗಬೇಕು ಎಂದರೆ ಗೃಹ ಸಚಿವ ಅಮಿತ್ ಶಾ ನೇತೃತ್ವದ ಹೈ ಪವರ್ ಕಮಿತಿ ಸಭೆ ನಡೆಯಬೇಕು. ಆದರೆ, ನಾವು ಇದುವರೆಗೂ ಮೂರು ಬಾರಿ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರೂ ಪ್ರಾಥಮಿಕ ಸಭೆಯನ್ನೇ ನಡೆಸಿಲ್ಲ. ಆದ್ದರಿಂದ ತುರ್ತಾಗಿ ಸಭೆ ನಡೆಸಿ ಶೀಘ್ರ ಬರ ಪರಿಹಾರ ಬಿಡುಗಡೆಗೊಳಿಸಲು ಸೂಚಿಸಬೇಕು ಎಂದು ಪ್ರಧಾನಿ ಅವರಿಗೆ ಮನವಿ ಮಾಡಿದ್ದೇವೆ" ಎಂದು ಹೇಳಿದರು.

"ನಾವು ಮುಖ್ಯವಾಗಿ ಐದು ಒತ್ತಾಯಗಳನ್ನು ಮಂಡಿಸಿ ಮನವಿ ಮಾಡಿದ್ದೇವೆ. ನಮ್ಮ ಮನವಿಯನ್ನು ಸಮಾಧಾನದಿಂದ ಕೇಳಿಸಿಕೊಂಡು ಪ್ರಧಾನಿ ಅವರು ಸ್ಪಂದಿಸಿದ್ದಾರೆ. ಸ್ಪಂದನೆಗೆ ತಕ್ಕಂತೆ ಶೀಘ್ರ ಪರಿಹಾರವನ್ನು ಅವರಿಂದ ನಿರೀಕ್ಷಿಸಿದ್ದೇವೆ" ಎಂದರು. "ನರೇಗಾ ಕೆಲಸವನ್ನು 150 ದಿನಗಳವರೆಗೆ ಹೆಚ್ಚಿಸಬೇಕು. ಭದ್ರಾ ಮೇಲ್ದಂಡೆಗೆ ಕೊಟ್ಟ ಮಾತಿನಂತೆ ಹಣ ಬಿಡುಗಡೆ ಮಾಡಬೇಕು. ಮಹದಾಯಿ ಯೋಜನೆಗೆ ಪರಿಸರ ಕ್ಲಿಯರೆನ್ಸ್ ಶೀಘ್ರವಾಗಿ ನೀಡಬೇಕು. ಮೇಕೆದಾಟು ಯೋಜನೆ ಕಾರ್ಯಾರಂಭಕ್ಕೆ ಅನುಮತಿಸಬೇಕು ಎಂಬ ಐದು ಬೇಡಿಕೆಗಳ ಈಡೇರಿಕೆಗೆ ಮನವಿ ಮಾಡಿದ್ದೇವೆ" ಎಂದು ತಿಳಿಸಿದರು.

"ಬರ ಪರಿಹಾರ ಸಂಬಂಧ ಇವತ್ತಿನವರೆಗೂ ಹೈಲೆವೆಲ್ ಕಮಿಟಿ ಮೀಟಿಂಗ್ ಮಾಡಿಲ್ಲ. ಇದರಿಂದ ರಾಜ್ಯದ ರೈತರ ಸಂಕಷ್ಟಕ್ಕೆ ಕೇಂದ್ರದಿಂದ ಬರಬೇಕಾದ ಪರಿಹಾರ ಬರುತ್ತಿಲ್ಲ ಎಂದು ಹೇಳಿದ್ದೇವೆ. ಪ್ರಧಾನಿ ನಮ್ಮ ಮನವಿಯನ್ನು ಸಮಾಧಾನದಿಂದ ಕೇಳಿದರು. ಅಮಿತ್ ಶಾ ಅವರಿಗೆ ಸೂಚನೆ ನೀಡಲು ಮನವಿ ಮಾಡಿದ್ದೇವೆ. ಬರ ಪರಿಸ್ಥಿತಿಯಲ್ಲಿ ನರೇಗಾ ಕೆಲಸವನ್ನು 100 ರಿಂದ 150 ದಿನಗಳಿಗೆ ಕಡ್ಡಾಯವಾಗಿ ಹೆಚ್ಚಿಸಲು ಕಾನೂನಿನಲ್ಲಿ ಅವಕಾಶವಿದೆ. ಅದರಂತೆ ಹೆಚ್ಚಿಸಲು 3 ತಿಂಗಳ ಹಿಂದೆಯೇ ನಾವು ಕೇಂದ್ರಕ್ಕೆ ಈ ಮನವಿಯನ್ನು ಮಾಡಿದ್ದೇವೆ. ಈ ಮನವಿ ಈಡೇರಿಲ್ಲ. ಈ ಬಗ್ಗೆಯೂ ತುರ್ತಾಗಿ ತೀರ್ಮಾನ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದೇವೆ" ಎಂದು ಮಾಹಿತಿ ನೀಡಿದರು.

"ಮಹದಾಯಿ ವಿಚಾರದಲ್ಲಿ ಈಗಾಗಲೇ ಗೆಜೆಟ್ ಕೂಡ ಆಗಿದೆ. ಬೇರೆ ಅಡೆ ತಡೆ ಏನೂ ಇಲ್ಲ. ಪರಿಸರ ಕ್ಲಿಯರೆನ್ಸ್ ಮಾತ್ರ ಬಾಕಿ ಇದೆ. ಇದನ್ನು ಕೇಂದ್ರವೇ ಕೊಡಬೇಕು. ಇದುವರೆಗೂ ಕೊಟ್ಟಿಲ್ಲ. ಟೆಂಡರ್ ಕರೆದು ಎಸ್ಟಿಮೇಟ್ ಕೂಡ ಆಗಿದೆ. ಕೇಂದ್ರ ಕ್ಲಿಯರೆನ್ಸ್ ಕೊಟ್ಟ ಕೂಡಲೇ ಕೆಲಸ ಶುರು ಮಾಡಬಹುದು. ಆದ್ದರಿಂದ ಬೇಗ ಕ್ಲಿಯರೆನ್ಸ್ ಕೊಡಿಸುವಂತೆ ಒತ್ತಾಯಿಸಿದ್ದೇವೆ. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ನಲ್ಲಿ 5,300 ಕೋಟಿ ರೂ. ಘೋಷಿಸಿದ್ದರು‌. ಇವರ ಘೋಷಣೆ ಆಧಾರದಲ್ಲಿ ಹಿಂದಿನ‌ ಮುಖ್ಯಮಂತ್ರಿ ಬೊಮ್ಮಾಯಿ ಅವರು ಕೂಡ 5,300 ಕೋಟಿ ರೂ. ಘೋಷಿಸಿದ್ದರು. ಇವತ್ತಿನವರೆಗೂ ಒಂದು ರೂಪಾಯಿ ಕೂಡ ಬಂದಿಲ್ಲ. ಇದು ಕೇಂದ್ರ ಮತ್ತು ಹಿಂದಿನ ಬಿಜೆಪಿ ಸರ್ಕಾರದ ಕಮಿಟ್ ಮೆಂಟ್. ನೀವೇ ಕೊಟ್ಟಿರುವ ಮಾತಿನಂತೆ ಹಣ ಬಿಡುಗಡೆ ಮಾಡಿ ಎಂದು ಆಗ್ರಹಿಸುತ್ತಿದ್ದೇವೆ" ಎಂದು ಹೇಳಿದರು.

"ಮೇಕೆದಾಟು, ಕುಡಿಯುವ ನೀರಿನ ಯೋಜನೆ, ರಾಜ್ಯದ ಗಡಿಯ ಒಳಗೆ ನಿರ್ಮಾಣ ಆಗುವ ಯೋಜನೆ, ತಮಿಳುನಾಡು ಸರ್ಕಾರ ರಾಜಕೀಯ ಕಾರಣಕ್ಕೆ ತಕರಾರು ಮಾಡುತ್ತಿದೆ. ಇದರಿಂದ ತಮಿಳುನಾಡಿಗೆ ಹೆಚ್ಚು ಅನುಕೂಲ. ನಮಗೆ ಕುಡಿಯುವ ನೀರಿನ ಜೊತೆಗೆ 400 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಆಗುತ್ತದೆ. ವಿದ್ಯುತ್ ಉತ್ಪಾದನೆ ಬಳಿಕ ಈ ನೀರು ಕೂಡ ತಮಿಳುನಾಡಿಗೆ ಹೋಗುತ್ತದೆ. ಇದರಿಂದಲೂ ಅವರಿಗೆ ಅನುಕೂಲ. ಮೇಕೆದಾಟು ಆದರೆ ಬೆಂಗಳೂರು ಮತ್ತು ರಾಮನಗರ ಜಿಲ್ಲೆಗೆ ಕುಡಿಯುವ ನೀರಿಗೆ ಅನುಕೂಲ ಆಗತ್ತದೆ. ಆದ್ದರಿಂದ ಮೇಕೆದಾಟುಗೆ ಬೇಗ ಅನುಮತಿ ಕೊಡಿಸುವಂತೆ ಪ್ರಧಾನಿಗಳ ಗಮನಕ್ಕೆ ತಂದಿದ್ದೇವೆ" ಎಂದು ತಿಳಿಸಿದರು.

''ಸಂಸತ್ತಿನ ಇತಿಹಾದಲ್ಲೇ ಮೊದಲ ಬಾರಿಗೆ 141 ಸಂಸದರನ್ನು ಒಂದೇ ಬಾರಿಗೆ ಅಮಾನತ್ತು ಮಾಡಿದ ಉದಾಹರಣೆ ಇಲ್ಲ. 141 ಮಂದಿ ಸಂಸದರನ್ನು ಅಮಾನತ್ತು ಮಾಡಿರುವುದು ಸರ್ವಾಧಿಕಾರವನ್ನೂ ಮೀರಿದ ಕ್ರಮ. ಇದನ್ನು ಪ್ರಜಾಪ್ರಭುತ್ವ ಅಂತ ಕರೆಯಲು ಸಾಧ್ಯವಿಲ್ಲ'' ಎಂದು ಸಿಎಂ ಇದೇ ವೇಳೆ ಟೀಕಿಸಿದರು.

ಇದನ್ನೂ ಓದಿ:ಪ್ರಧಾನಿ ಮೋದಿ ಭೇಟಿಯಾದ ಸಿಎಂ ಸಿದ್ದರಾಮಯ್ಯ: 12,577.86 ಕೋಟಿ ತುರ್ತು ಬರ ಪರಿಹಾರಕ್ಕೆ ಮನವಿ

Last Updated : Dec 19, 2023, 6:34 PM IST

ABOUT THE AUTHOR

...view details