ಬೆಂಗಳೂರು : ಕೃಷಿ ಪಂಪ್ಸೆಟ್ಗೆ ಇನ್ನು ಮುಂದೆ ನಿರಂತರ 7 ತಾಸು ತ್ರಿಫೇಸ್ ವಿದ್ಯುತ್ ಪೂರೈಕೆ ಮಾಡಲು ನಿರ್ಧರಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಇಂಧನ ಇಲಾಖೆ ಪರಿಶೀಲನೆ ನಡೆಸಿ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮೂರು ವಾರಗಳ ಹಿಂದೆ ಇಂಧನ ಇಲಾಖೆಯಲ್ಲಿ ಪರಿಶೀಲನೆ ಮಾಡಲಾಗಿತ್ತು. ಆಗಲೇ ಕೃಷಿ ಪಂಪ್ಸೆಟ್ಗೆ ಏಳು ಗಂಟೆ ವಿದ್ಯುತ್ ಕೊಡುತ್ತೇವೆ ಎಂದು ಭರವಸೆ ಕೊಟ್ಟಿದ್ದೆವು. ಆಗ ನಮಗೆ ಐದು ಗಂಟೆ ವಿದ್ಯುತ್ ಕೊಟ್ಟರೆ ಸಾಕು ಎಂದು ಕೆಲವರು ಹೇಳಿದ್ದರು. ಅದರ ಪ್ರಕಾರ ಐದು ಗಂಟೆ ವಿದ್ಯುತ್ ಕೊಡಲು ಸೂಚಿಸಿದ್ದೆ. ಬಳಿಕ ಐದು ಗಂಟೆ ಸಾಕಾಗಲ್ಲ ಏಳು ಗಂಟೆ ಕೊಡಬೇಕು ಎಂದು ಕೆಲವರು ಆಗ್ರಹಿಸಿದ್ದಾರೆ. ಅದರಂತೆ ಯಾದಗಿರಿ, ಕೊಪ್ಪಳ, ರಾಯಚೂರಿನಲ್ಲಿ ಏಳು ಗಂಟೆ ವಿದ್ಯುತ್ ಕೊಡಲು ಸೂಚನೆ ನೀಡಿದ್ದೆ. ಈಗ ವಿದ್ಯುತ್ ಉತ್ಪಾದನೆಯಲ್ಲಿ ಸುಧಾರಣೆಯಾಗಿದ್ದು, ರಾಜ್ಯದ ಉಳಿದ ಎಲ್ಲಾ ಕಡೆಯೂ ಏಳು ಗಂಟೆ ವಿದ್ಯುತ್ ಕೊಡಲು ನಿರ್ಧರಿಸಿದ್ದೇವೆ ಎಂದು ಸಿಎಂ ಇದೇ ವೇಳೆ ಸ್ಪಷ್ಟಪಡಿಸಿದರು.
ರಾಯಚೂರು, ಬಳ್ಳಾರಿ ಉಷ್ಣವಿದ್ಯುತ್ ಘಟಕಗಳಲ್ಲಿ ಹೆಚ್ಚಿನ ವಿದ್ಯುತ್ ಉತ್ಪಾದನೆ ಆಗುತ್ತಿದೆ. ಸುಮಾರು 1,000 ಮೆ.ವಾ.ರಷ್ಟು ವಿದ್ಯುತ್ ಉತ್ಪಾದನೆ ಹೆಚ್ಚಾಗಿದೆ. 2,400 ಮೆ.ವ್ಯಾ.ರಿಂದ 3,200 ಮೆ.ವ್ಯಾ. ವರೆಗೆ ವಿದ್ಯುತ್ ಉತ್ಪಾದನೆ ಹೆಚ್ಚಾಗಿದೆ. 450 ಮೆ.ವ್ಯಾ. ಕೊ ಜೆನ್ ರಿಂದ ವಿದ್ಯುತ್ ಲಭ್ಯವಾಗುತ್ತಿದೆ. ಉತ್ತರ ಪ್ರದೇಶ, ಪಂಜಾಬ್ ಮತ್ತು ಹಿಮಾಚಲ ಪ್ರದೇಶಗಳಿಂದ ವಿನಿಮಯ ರೂಪದಲ್ಲಿ ವಿದ್ಯುತ್ ಪಡೆಯಲಾಗುತ್ತಿದೆ ಎಂದು ಸಿಎಂ ಮಾಹಿತಿ ನೀಡಿದರು.
7 ಗಂಟೆ ನಿರಂತರ ವಿದ್ಯುತ್ಗಾಗಿ 600 ಮೆ.ವ್ಯಾ/ಗಂಟೆ ವಿದ್ಯುತ್ ಅಗತ್ಯ:ವಿವಿಧ ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿ ರೈತರ ಅಗತ್ಯತೆಗನುಗುಣವಾಗಿ ಐದರಿಂದ ಏಳು ಗಂಟೆಗಳ ಅವಧಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ರಾಜ್ಯಾದ್ಯಂತ ಐಪಿ ಸೆಟ್‌ಗಳಿಗೆ ನಿರಂತರ ಏಳು ಗಂಟೆಗಳ ಅವಧಿಗೆ ವಿದ್ಯುತ್ ಒದಗಿಸಲು 600 ಮೆಗಾವ್ಯಾಟ್/ಗಂಟೆ ಹಾಗೂ ಪ್ರತಿದಿನಕ್ಕೆ 14 ಮಿಲಿಯನ್ ಯುನಿಟ್‌ಗಳ ಅಗತ್ಯವಿದೆ.
ಸರ್ಕಾರದ ಮೇಲೆ ಹೆಚ್ಚಿನ ಹೊರೆಯಾಗದಂತೆ ನಿತ್ಯ ಏಳು ತಾಸು ವಿದ್ಯುತ್ ನೀಡಲು ಇಂದಿನ ಸಭೆಯಲ್ಲಿ ನಿರ್ಧರಿಸಲಾಗಿದೆ. ಇದಕ್ಕಾಗಿ ಸುಮಾರು 1500 ಕೋಟಿ ರೂ. ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಅನುದಾನದ ಉಳಿತಾಯ, ಮರು ಹಂಚಿಕೆ ಮೂಲಕ ಈ ವೆಚ್ಚ ಭರಿಸಲಾಗುವುದು. ಬಜೆಟ್ನಲ್ಲಿ ಸುಮಾರು 13,000 ಕೋಟಿ ರೂ. ಇಂಧನ ಇಲಾಖೆಗೆ ಹಂಚಿಕೆ ಮಾಡಲಾಗಿತ್ತು. ಈಗ ವಿದ್ಯುತ್ ಖರೀದಿಗಳ ಮೂಲಕ ಇನ್ನೂ ಸ್ವಲ್ಪ ಹೆಚ್ಚು ವೆಚ್ಚ ಆಗಬಹುದು ಎಂದು ಇದೇ ವೇಳೆ ಸಿಎಂ ತಿಳಿಸಿದರು.