ETV Bharat Karnataka

ಕರ್ನಾಟಕ

karnataka

ETV Bharat / state

ಪ್ರಜಾಪ್ರಭುತ್ವ, ಸಮಾಜವಾದ, ಜಾತ್ಯತೀತತೆ ನೆಹರು ಬದುಕಿನ ಮೌಲ್ಯಗಳು: ಸಿದ್ದರಾಮಯ್ಯ ಸ್ಮರಣೆ - Siddaramaiah on Jawaharlal Nehru

ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದ್ದಾರೆ.

Jawaharlal Nehru Birth Anniversary
ಜವಾಹರಲಾಲ್ ನೆಹರು ಪ್ರತಿಮೆಗೆ ಸಿಎಂ ನಮನ
author img

By ETV Bharat Karnataka Team

Published : Nov 14, 2023, 2:22 PM IST

ನೆಹರು ಸ್ಮರಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: 'ಆಧುನಿಕ ಭಾರತ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದವರು ಜವಾಹರಲಾಲ್ ನೆಹರು. ಅವರ ದೂರದೃಷ್ಟಿಯ ಫಲವನ್ನು ಆಗಿನ-ಈಗಿನ ಪೀಳಿಗೆಯವರು ಅನುಭವಿಸುತ್ತಿದ್ದಾರೆ. ಮುಂದಿನ ಪೀಳಿಗೆಯವರೂ ಅನುಭವಿಸುತ್ತಾರೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ 134ನೇ ಜನ್ಮ ದಿನೋತ್ಸವದ ಅಂಗವಾಗಿ ವಿಧಾನಸೌಧದಲ್ಲಿರುವ ಪ್ರತಿಮೆಗೆ ಸಿಎಂ ಸಿದ್ದರಾಮಯ್ಯ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಅವರು, ಪ್ರಜಾಪ್ರಭುತ್ವ-ಸಮಾಜವಾದ-ಜಾತ್ಯಾತೀತತೆ ನೆಹರು ಬದುಕಿನ ಮೌಲ್ಯಗಳು. ಭಾರತದಲ್ಲಿ ಈ ಮೌಲ್ಯಗಳನ್ನು ನೆಲೆಯೂರಿಸಲು ಪ್ರಧಾನಮಂತ್ರಿಯಾಗಿ ನೆಹರು ಅವರು ಬಹಳ ಶ್ರಮಿಸಿದರು. ಈ ಮೌಲ್ಯಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ನೆಹರು ಅವರಿಗೆ ನಾವು ಸಲ್ಲಿಸುವ ಅರ್ಥಪೂರ್ಣ ಶ್ರದ್ಧಾಂಜಲಿ ಎಂದು ತಿಳಿಸಿದರು.

in article image
ಜವಾಹರಲಾಲ್ ನೆಹರು ಪ್ರತಿಮೆಗೆ ಸಿಎಂ ನಮನ

ಆಧುನಿಕ ಭಾರತದ ಶಿಲ್ಪಿ; ಮಕ್ಕಳ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಕಾರಣಕ್ಕೆ ದೇಶದ ಮಕ್ಕಳ ಪಾಲಿಗೆ 'ಚಾಚಾ ನೆಹರು' ಆದರು. ಸ್ವಾತಂತ್ರ್ಯ ಹೋರಾಟದಲ್ಲಿ 9 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದರು. ಸ್ವಾತಂತ್ರ್ಯ ನಂತರದಲ್ಲಿ ದೇಶದ ಪ್ರಧಾನಿಯಾಗಿ ಆಧುನಿಕ ಭಾರತದ ಶಿಲ್ಪಿ ಎನಿಸಿಕೊಂಡರು. ಪ್ರಧಾನಿ ಆಗಿ ವಿರೋಧ ಪಕ್ಷದವರು ಮಾತಾಡುವಾಗ ಸಹನೆಯಿಂದ ಕೇಳಿಸಿಕೊಳ್ಳುತ್ತಿದ್ದರು. ವಿರೋಧ ಪಕ್ಷದವರ ಮಾತಿಗೆ ಗೌರವ ಕೊಡುತ್ತಿದ್ದ ಘನತೆಯ ವ್ಯಕ್ತಿತ್ವ ಅವರದ್ದಾಗಿತ್ತು ಎಂದು ಸ್ಮರಿಸಿದರು. ಹಲವು ಯೋಜನೆಗಳನ್ನು ಜಾರಿಗೆ ತಂದರು. ಕೊನೆ ಕ್ಷಣದವರೆಗೂ ಪ್ರಜಾಪ್ರಭುತ್ವ, ಜಾತ್ಯತೀತ ತತ್ವ, ಸಮಾಜವಾದದ ಮೌಲ್ಯಗಳನ್ನು ಜನಮಾನಸಕ್ಕೆ ವಿಸ್ತರಿಸಲು ಶ್ರಮಿಸಿದರು ಎಂದು ತಿಳಿಸಿದರು. ಈ ಸಂದರ್ಭ ಡಿಸಿಎಂ ಡಿ.ಕೆ ಶಿವಕುಮಾರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರು ಉಪಸ್ಥಿತರಿದ್ದರು.

ಜವಾಹರಲಾಲ್ ನೆಹರು ಸ್ಮರಿಸಿದ ಸಿಎಂ ಸಿದ್ದರಾಮಯ್ಯ

ಹೆಚ್​​ಡಿಕೆಗೆ ಹೊಟ್ಟೆಕಿಚ್ಚು: ಒಂದು ಕೋಟಿಗೂ ಅಧಿಕ ಮಹಿಳೆಯರು ಬಸ್​ಗಳಲ್ಲಿ ಉಚಿತ ಪ್ರಯಾಣ ಮಾಡಿದ್ದಾರೆ. ಇದು ಸಾಧನೆ ಅಲ್ವಾ?. ಈ ಸಾಧನೆಗಳನ್ನು ಹೆಚ್​ಡಿಕೆ ಅವರಿಗೆ ಸಹಿಸಲು ಆಗುತ್ತಿಲ್ಲ. ಈ ಕಾರಣಕ್ಕೇ ಪರದಾಡುತ್ತಿದ್ದಾರೆ ಎಂದು ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ನೆಹರು ಜನ್ಮದಿನಾಚರಣೆ: ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಜವಾಹರಲಾಲ್ ನೆಹರು ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್​ ನಾಯಕರು ಭಾಗವಹಿಸಿ, ನೆಹರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಕೆಪಿಸಿಸಿ ಕಚೇರಿಯಲ್ಲಿ ನೆಹರು ಜನ್ಮದಿನಾಚರಣೆ

ಬಳಿಕ ಮಾತನಾಡಿದ ಮುಖ್ಯಮಂತ್ರಿ, ಶಿಕ್ಷಣ ಸಂಸ್ಥೆಗಳು, ವಿಜ್ಞಾನ-ಸಂಶೋಧನಾ ಸಂಸ್ಥೆಗಳು, ತಂತ್ರಜ್ಞಾನ, ವಿಶ್ವ ವಿದ್ಯಾಲಯಗಳ ಸ್ಥಾಪನೆ, ಕೃಷಿ ಅಭಿವೃದ್ಧಿ ಸೇರಿದಂತೆ ಹಲವು ಯೋಜನೆಗಳು ನೆಹರು ಅವರ ದೂರದೃಷ್ಟಿಯ ಸಾಧನೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ವೇಳೆ ಇಲ್ಲಿ ಏನೇನೂ ಇರಲಿಲ್ಲ. ಶಿಕ್ಷಣ ಸಂಸ್ಥೆಗಳು, ನೀರಾವರಿ ವ್ಯವಸ್ಥೆಗಳು ಇರಲಿಲ್ಲ. ಆದರೆ ದೇಶದ ಮೊದಲ ಪ್ರಧಾನಿಯಾಗಿ ಆರ್ಥಿಕವಾಗಿ, ಸಾಮಾಜಿಕವಾಗಿ, ಪ್ರಜಾಪ್ರಭುತ್ವವಾದಿ ದೇಶವಾಗಿ ಭಾರತವನ್ನು ಕಟ್ಟಿ ನಿಲ್ಲಿಸಿದವರು ನೆಹರು ಎಂದು ಉದಾಹರಣೆಗಳ ಸಮೇತ ವಿವರಿಸಿದರು. ಶಿಕ್ಷಣ ಸಂಸ್ಥೆಗಳು, ವಿಜ್ಞಾನ - ಸಂಶೋಧನಾ ಸಂಸ್ಥೆಗಳು, ತಾಂತ್ರಿಕ ಕಾಲೇಜುಗಳು, ವೈದ್ಯಕೀಯ ಅಧ್ಯಯನ ಸಂಸ್ಥೆಗಳು, ಅಣೆಕಟ್ಟುಗಳು, ಆಸ್ಪತ್ರೆಗಳು ಸೇರಿ ಆಧುನಿಕ ಭಾರತದ ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲಾ ಕ್ಷೇತ್ರಗಳನ್ನೂ ವಿಶ್ವಮಟ್ಟದ ಗುಣಮಟ್ಟದಲ್ಲಿ ಆಗಿನ ಕಾಲಕ್ಕೇ ಸ್ಥಾಪಿಸಿದ್ದರು ಎಂದು ಸ್ಮರಿಸಿದರು.

ಬಿಜೆಪಿಯವರು ಸ್ವಾತಂತ್ರ್ಯ ಹೋರಾಟದ ಫಲಾನುಭವಿಗಳು ಅಷ್ಟೇ. ಇವರ್ಯಾರೂ ದೇಶದ ಸ್ವಾತಂತ್ರ್ಯಕ್ಕಾಗಿ ಅಪ್ಪಿ ತಪ್ಪಿಯೂ ಹೋರಾಡಿದವರಲ್ಲ. ಒಬ್ಬೇ ಒಬ್ಬ ಬಿಜೆಪಿ ಪರಿವಾರದ ಸದಸ್ಯ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಜೈಲು ಸೇರಿಲ್ಲ ಎಂದು ವ್ಯಂಗ್ಯವಾಡಿದರು. ಬಿಜೆಪಿಗರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲ ಎನ್ನುವ ಕೀಳರಿಮೆ ಮತ್ತು ಅಳುಕಿನಿಂದ, ಸ್ವಾತಂತ್ರ್ಯ ಹೋರಾಟಗಾರರಾಗಿ 9 ವರ್ಷ ಜೈಲುವಾಸ ಅನುಭವಿಸಿ 17 ವರ್ಷ ದೇಶದ ಪ್ರಧಾನಿ ಆಗಿದ್ದ ನೆಹರು ಅವರನ್ನು ಆಡಿಕೊಳ್ಳುವುದನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು.

ಇದನ್ನೂ ಓದಿ:ಇಂದು ಮಕ್ಕಳ ದಿನಾಚರಣೆ: ಚಾಚಾ ನೆಹರು ಕುರಿತ ಆಸಕ್ತಿದಾಯಕ ವಿಷಯಗಳ ಬಗ್ಗೆ ತಿಳಿಯಿರಿ

ಪ್ರಜಾಪ್ರಭುತ್ವ ಮತ್ತು ಸಂವಿಧಾನದಲ್ಲಿ ನೆಹರು ಅವರಿಗೆ ಅಪಾರ ನಂಬಿಕೆ ಇತ್ತು‌. 17 ವರ್ಷಗಳ ಕಾಲ ಪ್ರಧಾನಿ ಆಗಿದ್ದ ನೆಹರು ಅವರು ಚರ್ಚೆ, ಸಂವಾದದಲ್ಲಿ ನಂಬಿಕೆ ಇಟ್ಟುಕೊಂಡಿದ್ದರು. ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಕಟು ಟೀಕೆಗಳನ್ನೂ ಅತ್ಯಂತ ಸಹನೆಯಿಂದ ಸ್ವೀಕರಿಸುತ್ತಿದ್ದರು. ಅಷ್ಟು ದೊಡ್ಡ ವ್ಯಕ್ತಿತ್ವ ನೆಹರು ಅವರದ್ದಾಗಿತ್ತು. ವಿಶ್ವ ಮಟ್ಟದಲ್ಲಿ ಭಾರತ ತಲೆ ಎತ್ತಿ ನಿಲ್ಲಲು ನೆಹರು ಅವರು ಭಾರತ ದೇಶಕ್ಕೆ ಹಾಕಿದ ಭದ್ರ ಬುನಾದಿಯೇ ಕಾರಣ ಎಂದು ಮೆಚ್ಚುಗೆ ಸೂಚಿಸಿದರು. ಇನ್ನು ನೆಹರು ಈ ದೇಶದ ಹೃದಯವಂತಿಕೆಯ ಅಗ್ರಗಣ್ಯ ನಾಯಕ ಎಂದು ಬಣ್ಣಿಸಿದರು.

ಇದನ್ನೂ ಓದಿ:ಬೆಂಗಳೂರಲ್ಲಿ ಮತ್ತೆ ಹುಸಿ ಬಾಂಬ್ ಕರೆ: ಕಂಪನಿಯನ್ನು ಬೆಚ್ಚಿಬೀಳಿಸಿದ ಮಹಿಳಾ ಮಾಜಿ ಉದ್ಯೋಗಿ!

ಈ ಸಂದರ್ಭ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಸಿಡಬ್ಲ್ಯೂಸಿ ಸದಸ್ಯ ಬಿ.ಕೆ ಹರಿಪ್ರಸಾದ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಸೀರ್ ಅಹಮದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ABOUT THE AUTHOR

...view details