ಬೆಂಗಳೂರು: ಕರ್ನಾಟಕ ರಾಜ್ಯಕ್ಕೆ 15 ನೇ ಹಣಕಾಸು ಆಯೋಗದ ಮಧ್ಯಂತರ ವರದಿಯಲ್ಲಿ ಉಲ್ಲೇಖಿಸಿರುವ 5,495 ಕೋಟಿ ರೂ.ಗಳ ನ್ಯಾಯಸಮ್ಮತ ವಿಶೇಷ ಅನುದಾನವನ್ನು ನೀಡದೇ ಇರುವುದರಿಂದ ರಾಜ್ಯವು ನಷ್ಟ ಅನುಭವಿಸುತ್ತಿದ್ದು, ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ಕಾರಣ ಎಂದು ನೂತನವಾಗಿ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಆರೋಪಿಸಿದ್ದಾರೆ.
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಗಂಟೆಗಳ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "15ನೇ ಹಣಕಾಸು ಆಯೋಗದ ಮಧ್ಯಂತರ ವರದಿಯಲ್ಲಿ ಕರ್ನಾಟಕಕ್ಕೆ 5,495 ಕೋಟಿ ರೂ. ವಿಶೇಷ ಅನುದಾನ ನೀಡಬೇಕು ಎಂದು ಶಿಫಾರಸು ಮಾಡಲಾಗಿದೆ. ಆದರೆ, ಅದನ್ನು ಈ ಹಿಂದಿನ ಬಿಜೆಪಿ ಸರ್ಕಾರವು ಪಡೆದುಕೊಂಡಿಲ್ಲ, ಹಣ ಪಡೆಯುವ ಪ್ರಯತ್ನವನ್ನೇ ನಡೆಸಿಲ್ಲ. ರಾಜ್ಯಕ್ಕೆ ಇದಕ್ಕಿಂತ ಹೆಚ್ಚು ಹಾನಿ ಮಾಡಿದ ಸರ್ಕಾರ ಇದೆಯಾ?" ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ :ಕಾಂಗ್ರೆಸ್ ಕುಂಟು ನೆಪಗಳ ವಿರುದ್ಧ ಅಧಿವೇಶನದಲ್ಲಿ ಧ್ವನಿ ಎತ್ತುತ್ತೇವೆ : ಮಾಜಿ ಸಿಎಂ ಬೊಮ್ಮಾಯಿ..!
"ಕೇಂದ್ರ ಹಣಕಾಸು ಸಚಿವೆ ಹಾಗೂ ಕರ್ನಾಟಕದ ರಾಜ್ಯಸಭಾ ಸದಸ್ಯೆಯೂ ಆಗಿರುವ ನಿರ್ಮಲಾ ಸೀತಾರಾಮನ್ ಅವರು ಈ ವಿಶೇಷ ಅನುದಾನವನ್ನು ಅಂತಿಮ ವರದಿಯಿಂದ ತೆಗೆದು ಹಾಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಂದ ರಾಜ್ಯವು ಭಾರಿ ನಷ್ಟ ಅನುಭವಿಸಿತು" ಅವರು ದೂರಿದರು.