ಬೆಂಗಳೂರು: 8 ಬಾರಿ ದಸರಾ ಅಂಬಾರಿ ಹೊತ್ತಿದ್ದ ಅರ್ಜುನ ಸಾವಿಗೀಡಾಗಿರುವುದು ದುರದೃಷ್ಟಕರ. ಘಟನೆ ಬಗ್ಗೆ ಸಂಪೂರ್ಣ ತನಿಖೆ ಮಾಡುವಂತೆ ಸೂಚಿಸಲಾಗಿದೆ. ಅರ್ಜುನ ಆನೆ ಪ್ರಾಣ ಕಳೆದುಕೊಂಡ ಸ್ಥಳದಲ್ಲಿಯೇ ಸ್ಮಾರಕ ನಿರ್ಮಾಣ ಮಾಡಲಾಗುವುದು ಹಾಗೂ ಹೆಗ್ಗಡದೇವನಕೋಟೆಯಲ್ಲಿಯೂ ಸ್ಮಾರಕವಾಗಬೇಕೆಂದು ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಡಾ. ಬಿ.ಆರ್. ಅಂಬೇಡ್ಕರ್ ಅವರ 67 ನೇ ಮಹಾಪರಿನಿರ್ವಾಣದ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲರೂ ಸಂವಿಧಾನದ ಧ್ಯೇಯೋದ್ದೇಶಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ ಎಂದರು.
ಪ್ರತಿಯೊಬ್ಬರೂ ಸಂವಿಧಾನವನ್ನು ಅರ್ಥ ಮಾಡಿಕೊಂಡರೆ, ಅದೇ ನಾವು ಅಂಬೇಡ್ಕರ್ ಅವರಿಗೆ ಸಲ್ಲಿಸುವ ಗೌರವ. ಅಂಬೇಡ್ಕರ್ ಅವರು ಇನ್ನೂ ಬದುಕಿರಬೇಕಿತ್ತು. ಅವರು ಇದ್ದಿದ್ದರೆ ಸಮಾನತೆಯ ಪರವಾಗಿ ಇನ್ನಷ್ಟು ಹೋರಾಟಗಳಾಗುತ್ತಿತ್ತು. ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತಿತ್ತು. ಸಂವಿಧಾನದ ಕರ್ತೃ ಅಂಬೇಡ್ಕರ್ ಅವರು ದೇಶದ ಸಂವಿಧಾನವನ್ನು ಬಹಳ ಶ್ರಮ ವಹಿಸಿ ವಿವಿಧ ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ಭಾರತದ ವ್ಯವಸ್ಥೆಗೆ ಎಂಥ ಸಂವಿಧಾನ ಬೇಕು ಎಂದು ಚಿಂತಿಸಿ ಸಂವಿಧಾನ ನೀಡಿದ್ದಾರೆ ಎಂದು ಹೇಳಿದರು.
ಸಾಮಾಜಿಕ ನ್ಯಾಯದ ಹಕ್ಕು, ಅಸಮಾನತೆಯನ್ನು ತೊಡೆದುಹಾಕುವ ಅಂಶ ಜಗತ್ತಿನ ಯಾವ ಸಂವಿಧಾನದಲ್ಲಿಯೂ ನೋಡಲು ಸಾಧ್ಯವಿಲ್ಲ. ಎಲ್ಲಾ ಜಾತಿ, ವರ್ಗ ಮತ್ತು ಬಡವರಿಗೆ ನ್ಯಾಯ ದೊರೆತಿದ್ದರೆ, ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರಾಗಿದ್ದರೆ ಅದಕ್ಕೆ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸೇರಿಸಿದ ಅಂಶಗಳೇ ಕಾರಣ. ಸಮಾಜದ ಕಟ್ಟ ಕಡೆಯ ಮನುಷ್ಯನಿಗೂ ಶ್ರೀಮಂತರಿಗೂ ಒಂದೇ ಕಾನೂನು. ಅದಕ್ಕೆ 14 ನೇ ಪರಿಚ್ಛೇದದಲ್ಲಿ ಕಾನೂನಿನ ಮುಂದೆ ಎಲ್ಲರೂ ಸಮಾನರು, ಎಲ್ಲರಿಗೂ ಕಾನೂನಿನ ರಕ್ಷಣೆಯಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಸ್ಮರಿಸಿದರು.