ಶ್ರೀರಾಮನ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡಲು ಹೊರಟಿದ; ಸಿದ್ದರಾಮಯ್ಯ ಬೆಂಗಳೂರು :ಇದೇ ಜ. 22 ರಂದು ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಲ್ಲಾನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಜರುಗಲಿದೆ. ಇದಕ್ಕೂ ಮುನ್ನ ಕಾರ್ಯಕ್ರಮಕ್ಕೆ ಆಹ್ವಾನದ ವಿಚಾರವಾಗಿ ಮತ್ತು ಅದರಲ್ಲಿ ಪಾಲ್ಗೊಳ್ಳುವ ಬಗ್ಗೆ ರಾಜಕೀಯ ನಾಯಕರಲ್ಲಿ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ.
ಯಾರೂ ಶ್ರೀರಾಮಚಂದ್ರನ ವಿರುದ್ಧವಾಗಿಲ್ಲ. ಬಿಜೆಪಿ ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಳ್ಳಲು ಹೊರಟಿದೆ. ಶ್ರೀರಾಮಚಂದ್ರನನ್ನು ದೊಡ್ಡ ರಾಜಕೀಯ ವಿಷಯವಾಗಿ ಮಾಡಿಕೊಂಡಿರುವುದನ್ನು ನಾವು ವಿರೋಧಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುಣ್ಯತಿಥಿಯ ಅಂಗವಾಗಿ ಇಂದು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ನಾವೆಲ್ಲರೂ ಶ್ರೀ ರಾಮಚಂದ್ರರಾಮನ ಭಕ್ತರೇ. ಬಿಜೆಪಿ ರಾಜಕೀಯವಾಗಿ ಮಾತನಾಡುತ್ತಿದ್ದು, ಅದಕ್ಕೆ ಔಷಧಿ ಇಲ್ಲ ಎಂದರು. ಬಳಿಕ ಅಯೋಧ್ಯೆ ರಾಮಮಂದಿರ ಉದ್ಘಾಟನೆಯ ಬಗ್ಗೆ ಪಕ್ಷದ ನಿಲುವನ್ನು ಸ್ವಾಗತಿಸಿರುವ ಬಗ್ಗೆ ಪ್ರತಿಕ್ರಿಯಿಸಿ, ಪಕ್ಷದ ತೀರ್ಮಾನವೇ ನಮ್ಮ ತೀರ್ಮಾನ. ನಾವು ರಾಮಚಂದ್ರನನ್ನು ಪೂಜಿಸಿ, ಭಜಿಸಿ, ರಾಮಮಂದಿರವನ್ನು ಕಟ್ಟಿದ್ದೇವೆ. ದೇವರ ಹೆಸರಲ್ಲಿ ರಾಜಕೀಯಕ್ಕೆ ವಿರೋಧವಾಗಿದ್ದೇವೆ ಅಷ್ಟೇ ಎಂದು ಹೇಳಿದ್ದಾರೆ.
ದೇವಸ್ಥಾನಗಳಲ್ಲಿ ಪೂಜೆಗೆ ಸೂಚಿಸಿಲ್ಲ :ಸರ್ಕಾರದ ವತಿಯಿಂದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಲು ನಾನು ಸೂಚಿಸಿಲ್ಲ. ಬಿಜೆಪಿಯವರು ಅಯೋಧ್ಯೆಗೆ ಏಕೆ ಹೋಗುತ್ತಾರೆ. ಶ್ರೀ ರಾಮಚಂದ್ರ ಇಲ್ಲಿ ಇಲ್ಲವೇ, ನಮ್ಮಲ್ಲಿರುವ ಶ್ರೀರಾಮನಿಗೆ ಬೆಲೆ ಇಲ್ಲವೇ ಎಂದು ಪ್ರಶ್ನಿಸಿದ ಸಿಎಂ ಇಲ್ಲಿಯೂ ಪೂಜೆ ನಡೆಯಲಿದೆ ಎಂದರು. ಇದೇ ವೇಳೆ ಗ್ಯಾರಂಟಿ ಸಮಿತಿ ವಿಚಾರಕ್ಕೆ ಬಿಜೆಪಿ ಆಕ್ಷೇಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಲು ಸಿದ್ದರಾಮಯ್ಯ ನಿರಾಕರಿಸಿದರು.
ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ಹೊಗಳಿದ ಸಿಎಂ :ರೈಲ್ವೆ ದುರಂತವಾದಾಗ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ರಾಜೀನಾಮೆ ನೀಡಿ ಸಾರ್ವಜನಿಕ ಜೀವನದಲ್ಲಿ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದರು. ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ ನಂತರ ದೇಶದ ಪ್ರಧಾನಿ ಆಗಿದ್ದವರು. ಜೈ ಜವಾನ್ ಜೈ ಕಿಸಾನ್ ಎಂದು ಕರೆ ಕೊಟ್ಟವರು. ಆಹಾರ ಸ್ವಾವಲಂಬನೆ ಆಗದಿದ್ದ ಸಂದರ್ಭದಲ್ಲಿ ಇಡೀ ದೇಶದ ಜನ ಒಂದು ದಿನದ ಉಪವಾಸ ಮಾಡಲು ಕರೆ ಕೊಟ್ಟಿದ್ದ ಅವರು ಅಲ್ಪಾವಧಿ ಪ್ರಧಾನ ಮಂತ್ರಿ ಆಗಿದ್ದರೂ ಆಹಾರ ಸ್ವಾವಲಂಬನೆಗೆ ಪ್ರಯತ್ನ ಮಾಡಿದರು. ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಿ ಗೆದ್ದಿದ್ದರು. ಅತ್ಯಂತ ಪ್ರಾಮಾಣಿಕ ರಾಜಕಾರಣಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರು. ಅವರ ಪುಣ್ಯತಿಥಿಯನ್ನು ಇಡೀ ದೇಶದಲ್ಲಿ ಆಚರಿಸಲಾಗುತ್ತಿದೆ. ಅವರಿಗೆ ಗೌರವ ನಮನ ಸಲ್ಲಿಸಲಾಗಿದೆ ಎಂದು ಶಾಸ್ತ್ರಿ ಕುರಿತು ಸಿದ್ದರಾಮಯ್ಯ ಗುಣಗಾನ ಮಾಡಿದರು.
ಇದನ್ನೂ ಓದಿ :ಅಯೋಧ್ಯೆಯಲ್ಲಿ ನಡೆಯುತ್ತಿರುವುದು ಕಾಂಗ್ರೆಸ್ ಪಕ್ಷದ ಚುನಾವಣಾ ರ್‍ಯಾಲಿ ಅಲ್ಲ: ಪ್ರಹ್ಲಾದ ಜೋಶಿ