ಬೆಂಗಳೂರು: ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರ ಸ್ಪಷ್ಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸಿಎಂ, ಗಜೇಂದ್ರ ಸಿಂಗ್ ಶೇಖಾವತ್ ಅವರೇ, ನರೇಂದ್ರ ಮೋದಿ ನೇತೃತ್ವದ ನಿಮ್ಮ ಸರ್ಕಾರಕ್ಕೆ ಮುಖಭಂಗವಾಗುವುದನ್ನು ತಪ್ಪಿಸುವ ಸಲುವಾಗಿ ತಾವು ವ್ಯರ್ಥ ಕಸರತ್ತು ಮಾಡುತ್ತಿದ್ದೀರಿ. ಜನತೆಯ ಬಾಯಾರಿಕೆಯನ್ನು ತಣಿಸಬೇಕಾದ ಕೇಂದ್ರ ಸರ್ಕಾರ ಬದಲಿಗೆ ತನ್ನ ಸುಳ್ಳುಗಳ ದಾಹ ತಣಿಸಿಕೊಳ್ಳಲು ಮುಂದಾಗಿ ನೀರಿನ ವಿಚಾರದಲ್ಲಿ ಕ್ಷುಲ್ಲಕ ರಾಜಕಾರಣ ನಡೆಸಿರುವುದು ಬೇಸರದ ಸಂಗತಿ. ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿರುವುದು ನೀವು ಮತ್ತು ನಿಮ್ಮ ಸರ್ಕಾರ ಎಂದು ಟೀಕಿಸಿದ್ದಾರೆ.
ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಕರ್ನಾಟಕದ ವಿರುದ್ಧ ದ್ವೇಷ ಸಾಧಿಸುವಂತೆ ನಿರಂತರವಾಗಿ ಅನ್ಯಾಯ ಮಾಡಲಾಗುತ್ತಿದೆ. ರಾಜ್ಯದ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯಲು ಉತ್ತರ ಕೊಡಿ. ಮೋದಿ ಎಂಬ ಅಭಿಯಾನವನ್ನು ಪ್ರಾರಂಭಿಸಿ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಐದು ಪ್ರಶ್ನೆಗಳನ್ನು ಕೇಳಿದ್ದೆ. ಅವುಗಳಲ್ಲಿ ಎರಡು ಪ್ರಶ್ನೆಗಳಿಗಷ್ಟೇ ಉತ್ತರಿಸಿರುವ ಸಚಿವರು ಉಳಿದಂತೆ ನೀಡಿರುವ ಉತ್ತರಗಳಿಗೂ ನಮ್ಮ ಪ್ರಶ್ನೆಗಳಿಗೂ ಸಂಬಂಧವೇ ಇಲ್ಲ ಎಂದು ತಿಳಿಸಿದ್ದಾರೆ.
ರಾಜ್ಯಕ್ಕೆ ಸಂಬಂಧಿಸಿದ ನೀರಾವರಿ ಯೋಜನೆಗಳು ಹೇಗೆ ಕೇಂದ್ರ ಬಿಜೆಪಿ ಸರ್ಕಾರದ ತಿರಸ್ಕಾರ, ಅವಗಣನೆಯಿಂದಾಗಿ ಧೂಳು ಹಿಡಿಯುತ್ತಿವೆ ಎನ್ನುವುದನ್ನು ಮತ್ತೊಮ್ಮೆ ವಾಸ್ತವಾಂಶಗಳ ಮೂಲಕ ನಿಮ್ಮ ಮುಂದಿರಿಸುತ್ತಿದ್ದೇನೆ. ತಾವು ವಿಷಯವನ್ನು ಸರಿಯಾಗಿ ಗ್ರಹಿಸಿ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಕೇಂದ್ರ ಸರ್ಕಾರದ ನಿರ್ಲಕ್ಷ್ಯದ ಧೋರಣೆ ಮತ್ತು ಉದ್ದೇಶಪೂರ್ವಕವಾದ ಅನ್ಯಾಯವನ್ನು ಸರಿಪಡಿಸುತ್ತಿರಿ ಎಂದು ಭಾವಿಸುತ್ತೇನೆ ಎಂದು ಸಿಎಂ ವಾಗ್ದಾಳಿ ನಡೆಸಿದ್ದಾರೆ.
ಕೃಷ್ಣಾ ಮತ್ತು ಕಾವೇರಿ ಎಂಬ ಎರಡು ಜೀವನದಿಗಳು ಕರ್ನಾಟಕದ ಎರಡು ಕಣ್ಣುಗಳು. ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತಕ್ಕಾಗಿ ಕರ್ನಾಟಕ ರಾಜ್ಯಕ್ಕೆ 130 ಟಿಎಂಸಿ ನೀರು ಹಂಚಿಕೆಯಾಗಿದೆ. ಈ ಪ್ರಮಾಣದ ನೀರನ್ನು ಬಳಕೆಗೆ ಲಭ್ಯವಾಗಿಸಬೇಕೆಂದರೆ ಆಲಮಟ್ಟಿ ಜಲಾಶಯದ ಎತ್ತರವನ್ನು ಸಮುದ್ರ ಮಟ್ಟದಿಂದ ಪ್ರಸಕ್ತ ಇರುವ 519.60 ಅಡಿಯಿಂದ 524.256 ಅಡಿಗಳಿಗೆ ಏರಿಸಬೇಕಾಗಿದೆ. ಯೋಜನೆಯ ಮೂರನೇ ಹಂತದ ಅನುಷ್ಠಾನದಿಂದ ಬರಪೀಡಿತ ಉತ್ತರ ಕರ್ನಾಟಕದ 5.94 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಸಾಧ್ಯವಾಗಲಿದೆ.
ವಿಪರ್ಯಾಸವೆಂದರೆ, ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ - 2 ತೀರ್ಪು ಘೋಷಿಸಿ ಒಂದು ದಶಕವೇ ಕಳೆದರೂ ತೀರ್ಪಿನ ಗೆಜೆಟ್ ಸೂಚನೆಯನ್ನು ಕೇಂದ್ರ ಸರ್ಕಾರ ಹೊರಡಿಸಿಲ್ಲ. ಇದಕ್ಕಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ಸೂಕ್ತ ಅರ್ಜಿ ದಾಖಲಿಸುವಂತೆ ರಾಜ್ಯ ಸರ್ಕಾರವು ಹಲವು ಬಾರಿ ಕೇಂದ್ರಕ್ಕೆ ಮನವಿ ಮಾಡಿದ ಹೊರತಾಗಿಯೂ ಈ ಕುರಿತು ಕೇಂದ್ರ ಮುಂದಾಗಿಲ್ಲ. ಇದು ಯೋಜನೆಯ ಜಾರಿಗೆ ತೊಡಕಾಗಿ ಪರಿಣಮಿಸಿದೆ ಎಂದು ಸಿಎಂ ವಿವರಿಸಿದ್ದಾರೆ.