ಬೆಂಗಳೂರು: ನಾಳೆ ಬೆಳಗ್ಗೆ 11 ಗಂಟೆಗೆ ಪ್ರಧಾನಿಗಳ ಭೇಟಿಗೆ ಸಮಯ ನಿಗದಿಯಾಗಿದೆ. ಬರಗಾಲದ ಬಗ್ಗೆ ಪ್ರಧಾನಿಗಳ ಜೊತೆ ಚರ್ಚೆ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ನಗರದಲ್ಲಿ ಮಾತನಾಡಿದ ಅವರು, ದೆಹಲಿಗೆ ತೆರಳುತ್ತಿದ್ದೇನೆ. ಬರಗಾಲದ ಬಗ್ಗೆ ಪ್ರಧಾನಿ ಜೊತೆ ಚರ್ಚೆ ಮಾಡಲು ಸಮಯ ಕೇಳಿದ್ದೇ. ಜೊತೆಗೆ ಕಾಂಗ್ರೆಸ್ ವರ್ಕಿಂಗ್ ಕಮಿಟಿ ಮೀಟಿಂಗ್ ಇದೆ, ಅದನ್ನು ಅಟೆಂಡ್ ಮಾಡುತ್ತೇನೆ. ಜೊತೆಗೆ ಲೋಕಸಭಾ ಚುನಾವಣೆ ಬಗ್ಗೆಯೂ ಚರ್ಚೆ ಮಾಡುತ್ತೇನೆ. ಹೈಕಮಾಂಡ್ ಜೊತೆ ನಿಗಮ ಮಂಡಳಿ ನೇಮಕಾತಿ ಕುರಿತು ಚರ್ಚೆ ಮಾಡುತ್ತೇವೆ. ಈಗಾಗಲೇ ಲಿಸ್ಟ್ ಕಳಿಸಲಾಗಿದೆ ಎಂದರು.
ನೆರೆ ರಾಜ್ಯಗಳಲ್ಲಿ ಕೋವಿಡ್ ಹೆಚ್ಚಳ ಸಂಬಂಧ ಪ್ರತಿಕ್ರಿಯಿಸಿ, ಆರೋಗ್ಯ ಸಚಿವರಿಗೆ ಸಭೆ ಮಾಡಲು ಹೇಳಿದ್ದೇನೆ. ಮುಂಜಾಗ್ರತಾ ಕ್ರಮಗಳನ್ನು ತಗೆದುಕೊಳ್ಳಲು ಸೂಚಿಸಿದ್ದೇನೆ ಎಂದರು.
ಕ್ರಿಶ್ಚಿಯನ್ ಸಮುದಾಯದ ಸೇವೆ ಶ್ಲಾಘನೀಯ:ಸಾಮಾಜಿಕ ಅಸಮಾನತೆಯಿರುವ ಕಾಲಮಾನದಲ್ಲಿ ಕ್ರಿಶ್ಚಿಯನ್ ಸಮುದಾಯದ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿನ ಸೇವೆ ಶ್ಲಾಘನೀಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ನಗರದ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಲೀನಿಯರ್ ಆಕ್ಸರಲೇಟರ್ ರೆಡಿಯಷನ್ ಥೆರಪಿ ಸೇವೆ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಕ್ರಿಶ್ಚಿಯನ್ ಸಮುದಾಯ ಅತ್ಯುತ್ತಮ ಕೆಲಸ ಮಾಡಿದೆ. ಉಡುಪಿ ಹಾಗೂ ಮಂಗಳೂರಿನಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಈ ಸಮುದಾಯ ಒಳ್ಳೆಯ ಬುನಾದಿ ಹಾಕಿದೆ ಎಂದರು.