ಬೆಂಗಳೂರು: ಸಾಹಿತಿಗಳಿಗೆ ಬೆದರಿಕೆ ಪತ್ರ ಬರೆದ ಆರೋಪಿ ಬಂಧಿಸಲಾಗಿದ್ದು, ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಫೇಸ್ಬುಕ್ ಪೋಸ್ಟ್ ಮಾಡಿದ್ದಾರೆ. ನಾಡಿನ ಹಿರಿಯ ಸಾಹಿತಿಗಳು, ಬರಹಗಾರರು, ರಾಜಕೀಯ ನಾಯಕರು, ಧರ್ಮ ಗುರುಗಳಿಗೆ ಪತ್ರಗಳ ಮೂಲಕ ಜೀವ ಬೆದರಿಕೆ ಒಡ್ಡುತ್ತಿದ್ದ ದಾವಣಗೆರೆ ಮೂಲದ ಶಿವಾಜಿ ರಾವ್ ಜಾಧವ್ ಎಂಬ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ. ಆರೋಪಿಯ ಜೊತೆ ಯಾವುದೇ ಸಂಘಟನೆ ಅಥವಾ ವ್ಯಕ್ತಿಗಳು ಶಾಮೀಲಾಗಿದ್ದರೂ ಅವರನ್ನು ಪತ್ತೆಹಚ್ಚಿ ಕಾನೂನಿನ ಕೈಗಳಿಗೆ ಒಪ್ಪಿಸುವ ಮೂಲಕ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ ಎಂದಿದ್ದಾರೆ.
ನಾಡಿನ ಪ್ರತಿ ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲು ನಮ್ಮ ಸರ್ಕಾರ ಬದ್ಧವಿದೆ. ಸಮಾಜಮುಖಿ ಧ್ವನಿ ಅಡಗಿಸಲು ಯತ್ನಿಸುವ ದುಷ್ಟ ಶಕ್ತಿಗಳೆಡೆಗೆ ನಮ್ಮದು 'ಜೀರೊ ಟಾಲರೆನ್ಸ್' ಎಂದು ತಿಳಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಸಾಹಿತಿಗಳಾದ ಕುಂ. ವೀರಭಧ್ರಪ್ಪ, ಬಿ ಟಿ ಲಲಿತಾ ನಾಯಕ್, ಕೆ ಮರುಳಸಿದ್ದಪ್ಪ, ಡಾ .ಜಿ ರಾಮಕೃಷ್ಣ, ಪ್ರೊ. ಎಸ್ ಜಿ ಸಿದ್ದರಾಮಯ್ಯ, ಬಂಜಗೆರೆ ಜಯಪ್ರಕಾಶ್, ವಿಮಲಾ, ಶ್ರೀಪಾದ ಭಟ್, ಸುರೇಂದ್ರ ರಾವ್ ಸೇರಿದಂತೆ ಕೆಲ ಸಾಹಿತಿಗಳಿಗೆ ಅನಾಮಧೇಯವಾಗಿ ಕೊಲೆ ಬೆದರಿಕೆ ಪತ್ರಗಳು ಬರುತ್ತಿದ್ದವು. ಈ ಸಂಬಂಧ ಸಾಹಿತಿಗಳ ನಿಯೋಗ ಗೃಹ ಸಚಿವ ಪರಮೇಶ್ವರ್ ಅವರನ್ನು ಭೇಟಿಯಾಗಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.