ಬೆಂಗಳೂರು: "ರಾಮಭಕ್ತ ಎಂದು ಸಮಾಜದೆದುರು ನಕಲಿ ವೇಷ ತೊಟ್ಟು ಮೆರೆಯುವ ಶ್ರೀಕಾಂತ್ ಪೂಜಾರಿ ಕಾನೂನಿನ ದೃಷ್ಟಿಯಲ್ಲಿ ಒಬ್ಬ ಸಮಾಜಘಾತುಕ ವ್ಯಕ್ತಿ. ತನ್ನ ಅಪರಾಧ ಕೃತ್ಯಗಳಿಂದ ರಕ್ಷಣೆ ಸಿಗಲಿ ಎಂಬ ಕಾರಣಕ್ಕೆ ಧರ್ಮರಕ್ಷಣೆ ನಾಟಕವಾಡುವ ಇಂಥವರನ್ನು ಬಂಧಿಸದೆ, ರಾಜಾರೋಷವಾಗಿ ತಿರುಗಾಡಲು ಬಿಟ್ಟರೆ ಶ್ರೀರಾಮಚಂದ್ರನೂ ಕ್ಷಮಿಸಲಾರ" ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಶ್ರೀಕಾಂತ್ ಪೂಜಾರಿ ವಿರುದ್ಧದ ಪ್ರಕರಣಗಳ ಪಟ್ಟಿಯನ್ನು ಟ್ಯಾಗ್ ಮಾಡಿರುವ ಸಿಎಂ, "ಅಕ್ರಮ ಸಾರಾಯಿ ಮಾರಾಟ, ದೊಂಬಿ, ಮಟಕಾ, ಜೂಜಾಟ ಮುಂತಾದ 16 ಸಮಾಜ ಘಾತುಕ ಕೃತ್ಯಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ವ್ಯಕ್ತಿಯ ಪರವಾಗಿ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ನಾಯಕರು, ಈತನ ಎಲ್ಲಾ ಅಪರಾಧ ಕೃತ್ಯಗಳಿಗೆ ತಮ್ಮ ಪಕ್ಷದ ಬೆಂಬಲವಿದೆ ಎಂಬುದನ್ನು ಬಹಿರಂಗವಾಗಿ ಹೇಳಲಿ ಅಥವಾ ಪ್ರತಿಭಟನೆ ಕೈಬಿಟ್ಟು ಸಾರ್ವಜನಿಕವಾಗಿ ಕ್ಷಮೆ ಕೋರಲಿ" ಎಂದು ಆಗ್ರಹಿಸಿದ್ದಾರೆ.
"ಕಳೆದ 2023ನೇ ಸಾಲಿನಲ್ಲಿ ಹುಬ್ಬಳ್ಳಿ – ಧಾರವಾಡ ಕಮಿಷನರೇಟ್ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ, ಕಳ್ಳತನ, ಸುಲಿಗೆ, ವಂಚನೆ, ದೊಂಬಿ ಮುಂತಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ ಎಲ್ಪಿಸಿ (ಕಾನೂನು ವಿಚಾರಣಾ ಪ್ರಮಾಣಪತ್ರ) ಪ್ರಕರಣಗಳಲ್ಲಿ ಒಟ್ಟು 36 ಜನರನ್ನು ದಸ್ತಗಿರಿ ಮಾಡಲಾಗಿದೆ. ಇದರಲ್ಲಿ ಶ್ರೀಕಾಂತ್ ಪೂಜಾರಿ 32ನೇ ವ್ಯಕ್ತಿ. ಈತನನ್ನು ಹಿಂದೂ ಕಾರ್ಯಕರ್ತ ಎಂಬ ಕಾರಣಕ್ಕೆ ಹೊರಗಡೆ ಬಿಡಬೇಕೋ? ಅಥವಾ ಆರೋಪಿ ಎಂಬ ಕಾರಣಕ್ಕೆ ಬಂಧಿಸಬೇಕೋ? ಬಿಜೆಪಿ ಪ್ರತಿಭಟನೆ ನಡೆಸುತ್ತಿರುವುದು ನಮ್ಮ ಸರ್ಕಾರದ ವಿರುದ್ಧವಲ್ಲ, ದೇಶದ ಕಾನೂನು ಮತ್ತು ಸಂವಿಧಾನದ ವಿರುದ್ಧ. ಅಪರಾಧ ಕೃತ್ಯಗಳಲ್ಲಿ ತೊಡಗುವವರು ಧರ್ಮರಕ್ಷಕರು ಎಂದು ಹೇಳಿಕೊಂಡು ಕೊಲೆ, ಸುಲಿಗೆಗಳಿಗೆ ಇಳಿದರೆ ಅದನ್ನೂ ಬಿಜೆಪಿ ನಾಯಕರು ಬೆಂಬಲಿಸುತ್ತಾರೆಯೇ?" ಎಂದು ಪ್ರಶ್ನಿಸಿದ್ದಾರೆ.
"ರಾಮಮಂದಿರದ ಉದ್ಘಾಟನೆ ವೇಳೆ ಶ್ರೀಕಾಂತ್ ಪೂಜಾರಿಯ ಬಂಧನವಾಗಿರುವುದು ಕಾಕತಾಳೀಯ ಅಷ್ಟೆ. ಹಳೆಯ ಪ್ರಕರಣಗಳನ್ನು ಪರಿಶೀಲನೆ ನಡೆಸುವ ವೇಳೆ ಪೊಲೀಸರು ಇತರೆ 36 ಜನರ ಜೊತೆಗೆ ಇವರನ್ನು ಕೂಡ ಬಂಧಿಸಿದ್ದಾರೆ. ಇದರಲ್ಲಿ ಪ್ರತೀಕಾರವೂ ಇಲ್ಲ, ತುಷ್ಟೀಕರಣವೂ ಇಲ್ಲ. ಕಾನೂನು ಪಾಲನೆ ಮಾಡಬೇಕು, ಮಾಡಿದ್ದಾರೆ" ಎಂದು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ:ಹುಬ್ಬಳ್ಳಿ ಹಿಂದೂ ಕಾರ್ಯಕರ್ತನ ಬಂಧನ ಖಂಡಿಸಿ ಬೆಳಗಾವಿಯಲ್ಲೂ ಬಿಜೆಪಿ ಪ್ರತಿಭಟನೆ