ಬೆಂಗಳೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಅವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಮುಂದಿನ ವರ್ಷ ಪಠ್ಯಪುಸ್ತಕ ಪರಿಷ್ಕರಣೆಗೆ ಸಮಿತಿ ರಚಿಸಲು ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ತಿಳಿಸಿದರು. ಸಹಕಾರ ಕೃಷಿ ಕುರಿತು ಪರಿಶೀಲನೆಗೆ ಸಿಪಿಐ ಮುಖಂಡ ಸಾತಿ ಸುಂದರೇಶ್ ನೇತೃತ್ವದ ನಿಯೋಗವು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿತು.
ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದ ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ರಾಜ್ಯದಲ್ಲಿ ಸಹಕಾರಿ ಕೃಷಿಗೆ ಪ್ರೋತ್ಸಾಹ ನೀಡುವ ಬಗ್ಗೆ ಅಧ್ಯಯನ ನಡೆಸಿ, ವರದಿ ಪಡೆಯಬಹುದಾಗಿದ್ದು ಇದನ್ನು ಯಾವ ವಲಯಗಳಲ್ಲಿ ವಿಸ್ತರಿಸಬಹುದು ಎಂಬ ಆಯಾಮಗಳನ್ನೂ ಪರಿಶೀಲಿಸಬಹುದು ಎಂದು ಸಲಹೆ ನೀಡಿದರು. ಈ ವೇಳೆ ಸಹಕಾರ ಕೃಷಿಗೆ ಸಂಬಂಧಿಸಿದಂತೆ ವಿಸ್ತೃತ ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿಗಳು ತಿಳಿಸಿದರು. ಕಾರ್ಮಿಕರಿಗೆ ಬೆಲೆಯೇರಿಕೆಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಸೂಕ್ತವಾದ ಕನಿಷ್ಠ ವೇತನ ನೀಡುವುದು, ಮಹಿಳೆಯರಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಅವಕಾಶ ನೀಡಿರುವ ತಿದ್ದುಪಡಿಯನ್ನು ವಾಪಸ್ ಪಡೆಯಲು ನಿಯೋಗ ಮನವಿ ಮಾಡಿತು. ನಿಯೋಗದಲ್ಲಿ ಸಿದ್ದನಗೌಡ ಪಾಟೀಲ್, ಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು.
ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದ ಸಿಪಿಐ ಮುಖಂಡ ಸಾತಿ ಸುಂದರೇಶ್ ನೇತೃತ್ವದ ನಿಯೋಗ ಎನ್ಪಿಎಸ್ ರದ್ದು - ಸಂಪುಟ ಸಭೆಯಲ್ಲಿ ಚರ್ಚೆ: ಹಳೇ ಪಿಂಚಣಿ ಯೋಜನೆಯ ಜಾರಿಗೆ ಸಂಬಂಧಿಸಿದಂತೆ ಸಚಿವ ಸಂಪುಟದಲ್ಲಿ ಚರ್ಚಿಸಿ ಬಜೆಟ್ನಲ್ಲಿ ಘೋಷಿಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು. ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವಂತೆ ಕೋರಿ ಕರ್ನಾಟಕ ರಾಜ್ಯ ಸರ್ಕಾರಿ ಎನ್ಪಿಎಸ್ ನೌಕರರ ಸಂಘ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳ ನಿಯೋಗವು ಇಂದು ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದ ವಿವಿಧ ಸಂಘಟನೆಗಳ ಪದಾಧಿಕಾರಿಗಳ ನಿಯೋಗ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಲು ನೌಕರರು ಕೆಲಸ ಮಾಡಬೇಕು ಎಂದು ತಿಳಿಸಿದ ಅವರು, ಪ್ರಾಮಾಣಿಕವಾಗಿ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡಬೇಕೆಂದರು. ಮಾಜಿ ವಿಧಾನ ಪರಿಷತ್ ಸದಸ್ಯ ವಿ.ಎಸ್ ಉಗ್ರಪ್ಪ ಅವರು ಮಾತನಾಡಿ, 1/4/2006 ರಲ್ಲಿ ಎನ್ಪಿಎಸ್ ಜಾರಿಯಾಗಿದೆ. 2.98 ಲಕ್ಷ ನೌಕರರು ಇದರ ವ್ಯಾಪ್ತಿಗೆ ಒಳಪಡುತ್ತಾರೆ. ಪಿಂಚಣಿ ಮೊತ್ತವನ್ನು ಎನ್ಎಸ್ಡಿಎಲ್ ನಲ್ಲಿ ಠೇವಾಣಿ ಇಡಲಾಗಿದೆ. ಈ ಮೊತ್ತ ಬಳಕೆ ಮಾಡಿ ಇವರು ನಿವೃತ್ತಿಯಾಗುವ ವೇಳೆಗೆ ಲಭ್ಯವಾಗುವಂತೆ ಜಿಪಿಎಫ್ ನಲ್ಲಿ ಇಡಬಹುದು. ವೋಟ್ ಫಾರ್ ಒಪಿಎಸ್ ನಲ್ಲಿ ಭಾಗಿಯಾದವರ ಮೇಲೆ ಕೈಗೊಂಡಿರುವ ಶಿಸ್ತಿನ ಕ್ರಮ ಕೈಬಿಡುವ ಕುರಿತು ಸರ್ಕಾರ ತೀರ್ಮಾನಿಸಬೇಕು ಎಂದು ವಿವರಿಸಿದರು.
ರಾಜಸ್ಥಾನ, ಛತ್ತೀಸ್ಗಡದಲ್ಲಿ ಎನ್ಪಿಎಸ್ ರದ್ದಾಗಿದ್ದು, ಕರ್ನಾಟಕದಲ್ಲಿಯೂ ಅದನ್ನು ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು. ಎನ್ಪಿಎಸ್ ರದ್ದು ಮಾಡುವುದರಿಂದ ಯೋಜನೆಯಡಿ ಲಭ್ಯವಿರುವ ಒಟ್ಟು 19 ಸಾವಿರ ಕೋಟಿ ಹಣವನ್ನು ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ದೊರೆಯಲಿದೆ. ನೌಕರರ ಪಾಲಿನ 9 ಸಾವಿರ ಕೋಟಿ ಜಿಪಿಎಫ್ಗೆ ಪರಿವರ್ತನೆ ಮಾಡಿಕೊಳ್ಳುಬಹುದು ಹಾಗೂ ಸರ್ಕಾರದ 10 ಸಾವಿರ ಕೋಟಿ ರೂ.ಗಳು ಸರ್ಕಾರದ ಪಾಲನ್ನು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಳಕೆ ಮಾಡಿಕೊಳ್ಳಬಹುದು ಎಂದು ಕರ್ನಾಟಕ ರಾಜ್ಯ ಎನ್ಪಿಎಸ್ ನೌಕರರ ಸಂಘದ ಅಧ್ಯಕ್ಷ ಶಾಂತಾರಾಂ ತೇಜ ತಿಳಿಸಿದರು.
ಮಾಜಿ ಸಚಿವ ವಿ.ಎಸ್.ಉಗ್ರಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಕೆ.ಪಿ.ಟಿ.ಸಿಎಲ್, ಆರೋಗ್ಯ, ಜಲಮಂಡಳಿ, ಕಂದಾಯ ಇಲಾಖೆ ನೌಕರರ ಸಂಘ ಸೇರಿದಂತೆ ಹಲವು ಸಂಘಟನೆಗಳ ನೂರಕ್ಕೂ ಹೆಚ್ಚು ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ:ಸರ್ಕಾರಿ ಆಸ್ಪತ್ರೆಗೆ ಜನ ಬರಬೇಕೋ ಬೇಡ್ವೋ: ಮೂರು ತಿಂಗಳಲ್ಲಿ ವ್ಯವಸ್ಥೆ ಸರಿಪಡಿಸುವಂತೆ ಸಿಎಂ ಸೂಚನೆ