ಬೆಂಗಳೂರು:ನನ್ನ 40 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಹಾಗೂ 14 ಬಾರಿ ಬಜೆಟ್ ಮಂಡಿಸಿದ ಸಂದರ್ಭದಲ್ಲಿ ಇದೇ ಮೊದಲ ಬಾರಿ ವಿರೋಧ ಪಕ್ಷದ ಉಪಸ್ಥಿತಿಯಿಲ್ಲದೇ ಬಜೆಟ್ ಚರ್ಚೆಗೆ ಉತ್ತರ ನೀಡುವಂತಹ ಪರಿಸ್ಥಿತಿ ಒದಗಿ ಬಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ವಿಧಾನಸೌಧದಲ್ಲಿಂದು ಬಿಜೆಪಿಯವರು ಫ್ರೀಡಂಪಾರ್ಕ್ ನಲ್ಲಿ ಪ್ರತಿಭಟನೆ ಕೈಗೊಂಡಿರುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ವಿಧಾನಮಂಡಲದ ಅಧಿವೇಶನದಲ್ಲಿ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸುವುದು ಬಿಟ್ಟು, ಹೊರಗೆ ಹೋರಾಟ ಮಾಡುವುದರಿಂದ ಪ್ರಯೋಜನವಿಲ್ಲ ಎಂದರು
ವಿರೋಧಪಕ್ಷದವರು ಚರ್ಚೆಗಳಲ್ಲಿ ಭಾಗವಹಿಸಲಿ ಎಂದು ಮೂರು ವಾರಗಳ ಕಾಲ ಅಧಿವೇಶನವನ್ನು ನಡೆಸಲಾಯಿತು. ಆದರೆ, ವಿಧಾನಸಭೆಗೆ ಆಗಮಿಸದೇ ಗದ್ದಲದಲ್ಲೇ ಸಮಯವನ್ನು ವ್ಯರ್ಥಗೊಳಿಸಿದರು. ಅವರು ನಡವಳಿಕೆ ಸರಿಯಿರದಿದ್ದ ಕಾರಣ, ಸಭಾಧ್ಯಕ್ಷರು ಕ್ರಮ ತೆಗೆದುಕೊಂಡಿದ್ದಾರೆ. ಸಭಾಧ್ಯಕ್ಷರ ಕ್ರಮಕ್ಕೂ, ನಮಗೂ ಯಾವುದೇ ಸಂಬಂಧವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.
ಕಾಂಗ್ರೆಸ್ ಕೈಕಟ್ಟಿ ಹಾಕಿತ್ತು ಎಂಬುದು ಸುಳ್ಳು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನೈಸ್ ಹಗರಣದ ಬಗ್ಗೆ ಪ್ರಸ್ತಾಪಿಸಿರುವ ಬಗ್ಗೆ ಉತ್ತರಿಸಿ, ಕಾಂಗ್ರೆಸ್ ಸರ್ಕಾರದ ನಂತರ ಮೈತ್ರಿ ಸರ್ಕಾರ ಬಂದ ಸಂದರ್ಭದಲ್ಲಿಯೇ ಕ್ರಮ ತೆಗೆದುಕೊಳ್ಳಬಹುದಿತ್ತು. ತನಿಖೆ ನಡೆಸಲು ಕಾಂಗ್ರೆಸ್ ನವರು ಕೈಕಟ್ಟಿ ಹಾಕಿದ್ದರು ಎಂಬುದು ಸುಳ್ಳು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಾಲಮನ್ನಾ ಸೇರಿದಂತೆ ಇತರ ಕಾರ್ಯಕ್ರಮಗಳಿಗೆ ಕಾಂಗ್ರೆಸ್ ಬೆಂಬಲ ನೀಡಲಿಲ್ಲವೇ, ಕಾಂಗ್ರಸ್ ಕೈಕಟ್ಟಿ ಹಾಕಿತ್ತು ಎಂದು ರಾಜೀನಾಮೆ ನೀಡಿದರೆ?. ತಮ್ಮ ಸ್ವಯಂ ತಪ್ಪಿನಿಂದಲೇ ಅವರು ಸರ್ಕಾರ ಕಳೆದುಕೊಳ್ಳುವಂತಾಯಿತು ಎಂದು ಕುಮಾರಸ್ವಾಮಿ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು.