ಕರ್ನಾಟಕ

karnataka

ETV Bharat / state

ಸಂವಿಧಾನದ ಮೂಲಸ್ಪೂರ್ತಿಗೆ ವಿರುದ್ಧವಾಗದ ಎಲ್ಲ ಅಭಿವ್ಯಕ್ತಿಗಳ ಪರವಾಗಿದ್ದೇವೆ: ಸಿಎಂ ಸಿದ್ದರಾಮಯ್ಯ - etv bharat kannada

ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಕೆಲಸಗಳ ಜೊತೆ ಸರ್ಕಾರ ಸದಾ ನಿಲ್ಲುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Etv Bharatcm-siddaramaiah-reaction-on-freedom-of-expression-in-state
ಸಂವಿಧಾನದ ಮೂಲಸ್ಪೂರ್ತಿಗೆ ವಿರುದ್ಧವಾಗದ ಎಲ್ಲ ಅಭಿವ್ಯಕ್ತಿಗಳ ಪರವಾಗಿದ್ದೇವೆ: ಸಿಎಂ ಸಿದ್ದರಾಮಯ್ಯ

By ETV Bharat Karnataka Team

Published : Dec 1, 2023, 3:48 PM IST

ಬೆಂಗಳೂರು: "ರಾಜ್ಯ ಸರ್ಕಾರವು ಸಂವಿಧಾನದ ಮೂಲ ಆಶಯಗಳಡಿ ನಡೆಸುವ ಚಟುವಟಿಕೆಗಳನ್ನು ನಿಲ್ಲಿಸುವ ಅಥವಾ ತಡೆಯುವ ಯಾವುದೇ ಕೆಲಸವನ್ನು ಮಾಡುವುದಿಲ್ಲ" ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಬೆಂಗಳೂರು ರಂಗಶಂಕರದಲ್ಲಿ ಪ್ಯಾಲೆಸ್ಟೈನ್​ ಪರವಾದ ಕಾರ್ಯಕ್ರಮಕ್ಕೆ ಪೊಲೀಸರು ಅನುಮತಿ ನೀಡಿರಲಿಲ್ಲ. ಪ್ಯಾಲೆಸ್ಟೈನ್​ ಪರವಾದ ಕವಿಗೋಷ್ಠಿ, ನಾಟಕ ಹಾಗೂ ಓದು ಕಾರ್ಯಕ್ರಮಕ್ಕೆ ಅನುಮತಿ ನೀಡದ ಕಾರಣ ರದ್ದುಗೊಳಿಸಲಾಗಿತ್ತು. ಕಾರ್ಯಕ್ರಮ ರದ್ದುಗೊಂಡಿರುವುದನ್ನು ಕಾರ್ಯಕ್ರಮ ಆಯೋಜಕರು ಫೇಸ್​ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು.

ಈ ಸಂಬಂಧ ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿರುವ ಸಿಎಂ ಸಿದ್ದರಾಮಯ್ಯ, "ಕಥೆ, ಕಾವ್ಯ, ನಾಟಕ, ಸಂಗೀತ ಮುಂತಾದ ಸೃಜನಶೀಲ ಅಭಿವ್ಯಕ್ತಿಯನ್ನು ಯಾವುದೇ ಕಾರಣಕ್ಕೂ ತಡೆಯುವ ಕೆಲಸವನ್ನು ಮಾಡುವುದಿಲ್ಲ. ನಾವು ಸಂವಿಧಾನದ ಮೂಲಸ್ಪೂರ್ತಿಗೆ ವಿರುದ್ಧವಾಗದಂತೆ ನಡೆಯುವ ಎಲ್ಲ ಅಭಿವ್ಯಕ್ತಿಗಳ ಪರವಾಗಿದ್ದೇವೆ. ಕೆಳಹಂತದ ಪೊಲೀಸ್ ಅಧಿಕಾರಿಗಳ ತಪ್ಪು ತಿಳಿವಳಿಕೆಯ ಕಾರಣಕ್ಕೆ ಒಂದೆರಡು ಅನಾವಶ್ಯಕವಾದ ಗೊಂದಲಗಳು ನಿರ್ಮಾಣವಾಗಿವೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಈ ಕುರಿತು ಯಾವುದೇ ಗೊಂದಲಗಳು ಸೃಷ್ಟಿಯಾಗದಂತೆ ನೋಡಿಕೊಳ್ಳಬೇಕು ಎಂದು ನಾನು ಪೊಲೀಸ್ ಮಹಾನಿರ್ದೇಶಕರಿಗೆ ಸೂಕ್ತ ಸೂಚನೆಗಳನ್ನು ನೀಡಿರುತ್ತೇನೆ" ಎಂದಿದ್ದಾರೆ.

"ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಕೆಲಸಗಳ ಜೊತೆ ಸರ್ಕಾರವು ಸದಾ ನಿಲ್ಲುತ್ತದೆ ಎಂಬುದನ್ನು ತಿಳಿಯ ಸಬಯಸುತ್ತೇನೆ. ಆದ್ದರಿಂದ ಯಾವುದೇ ರೀತಿಯ ಗೊಂದಲಗಳನ್ನು ಸೃಷ್ಟಿಸಬಾರದು ಎಂದು, ಅಭಿವ್ಯಕ್ತಿ ಸ್ವಾತಂತ್ರ್ಯದ ವಿಚಾರದಲ್ಲಿ ಆತಂಕಿತ ಆಗಬಾರದೆಂದು ನಾಡಬಾಂಧವರಲ್ಲಿ ವಿನಂತಿಸುತ್ತೇನೆ" ಎಂದು ಕೋರಿದ್ದಾರೆ.

ಇದನ್ನೂ ಓದಿ:ಬಾಂಬ್ ಬೆದರಿಕೆ ಕಳವಳಕಾರಿ, ದುಷ್ಟರ ಹೆಡೆಮುರಿ ಕಟ್ಟಬೇಕು: ಹೆಚ್.ಡಿ.ಕುಮಾರಸ್ವಾಮಿ

ಅನುಮತಿ ಪಡೆಯದೇ ಪ್ರತಿಭಟನೆ ನಡೆಸುತ್ತಿದ್ದವರ ವಿರುದ್ಧ ಎಫ್​ಐಆರ್:​ ಇತ್ತೀಚಿಗೆ, ಪ್ಯಾಲೆಸ್ಟೈನ್​ಗೆ ಬೆಂಬಲ ಸೂಚಿಸಿ ಬೆಂಗಳೂರಿನಲ್ಲಿ ಮೌನ ಪಾದಯಾತ್ರೆ ಮಾಡುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದವರ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್​ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಸೈಂಟ್ ಮಾರ್ಕ್ಸ್ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಅನುಮತಿ ಪಡೆಯದೇ ಪ್ರತಿಭಟನೆ ನಡೆಸುವ ಮೂಲಕ ಸಾರ್ವಜನಿಕರ ಓಡಾಟಕ್ಕೆ ಅಡ್ಡಿಪಡಿಸುತ್ತಿರುವ ಆರೋಪದಡಿ ಪ್ರತಿಭಟನಾಕಾರರ ವಿರುದ್ಧ ಪ್ರಕರಣ ದಾಖಲಾಗಿತ್ತು.

ಇಸ್ರೇಲ್ ಹಾಗೂ ಹಮಾಸ್ ನಡುವಿನ ಸಂಘರ್ಷದಲ್ಲಿ ಪ್ಯಾಲೆಸ್ಟೈನ್​ಗೆ ಬೆಂಬಲ ಸೂಚಿಸಿ ನಗರದ ಸೇಂಟ್​ ಮಾರ್ಕ್ಸ್ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಪ್ರತಿಭಟನಾಕಾರರು ಒಗ್ಗೂಡಿದ್ದರು. ಕಲ್ಲಂಗಡಿ ಹಣ್ಣನ್ನು ತಮ್ಮ ಸಂಕೇತವನ್ನಾಗಿಟ್ಟುಕೊಂಡು ಪ್ಯಾಲೆಸ್ಟೈನ್ ಪರ ಭಿತ್ತಿಪತ್ರಗಳು ಮತ್ತು ಫಲಕಗಳೊಂದಿಗೆ ಮೌನ ಪಾದಯಾತ್ರೆ ನಡೆಸುತ್ತಿದ್ದರು. ಸ್ಥಳಕ್ಕೆ ತೆರಳಿದ್ದ ಪೊಲೀಸರು ಅನುಮತಿ ಪಡೆದುಕೊಳ್ಳದೇ ಪ್ರತಿಭಟನೆ ನಡೆಸದಂತೆ ಸೂಚಿಸಿದ್ದರು. ಆದರೂ ಪ್ರತಿಭಟನೆ ಕೈಬಿಡದ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 149 (ಕಾನೂನು ಬಾಹಿರವಾಗಿ ಒಗ್ಗೂಡುವಿಕೆ), 188 (ಸರ್ಕಾರಿ ಅಧಿಕಾರಿಯ ಆದೇಶ ಪಾಲಿಸದಿರುವುದು), 283 (ಪಾದಚಾರಿ ಮಾರ್ಗಕ್ಕೆ ಅಡ್ಡಪಡಿಸುವುದು), ಮತ್ತು 290 (ಸಾರ್ವಜನಿಕರಿಗೆ ತೊಂದರೆ) ತಂದ ಆರೋಪದಡಿ ಕಬ್ಬನ್ ಪಾರ್ಕ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ABOUT THE AUTHOR

...view details