ಬೆಂಗಳೂರು:ರಣದೀಪ್ ಸಿಂಗ್ಸುರ್ಜೇವಾಲ ಅವರು ಬೆಂಗಳೂರಿಗೆ ಆಗಮಿಸಿದ್ದು, ಅವರ ನೇತೃತ್ವದಲ್ಲಿ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನಕ್ಕೆ ಮೊದಲನೇ ಹಂತದಲ್ಲಿ ಶಾಸಕರನ್ನು ಆಯ್ಕೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಸುರ್ಜೇವಾಲ ರಾಜ್ಯಕ್ಕೆ ಭೇಟಿ ನೀಡಿರುವ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯಿಸಿ, ಇವತ್ತು ಸುರ್ಜೇವಾಲ ಬಂದಿದ್ದಾರೆ. ನಿಗಮ ಮಂಡಳಿ ಇವತ್ತೇ ಫೈನಲ್ ಆಗುತ್ತಾ, ಏನು ಆಗುತ್ತೋ ಗೊತ್ತಿಲ್ಲ. ಮೊದಲ ಹಂತದಲ್ಲಿ ಶಾಸಕರನ್ನು ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ಮಾಡಬೇಕು ಎಂಬ ವಿಚಾರ ಇದೆ. ಎರಡನೇ ಹಂತದಲ್ಲಿ ಕಾರ್ಯಕರ್ತರಿಗೆ, ಮಾಜಿ ಶಾಸಕರಿಗೆ ಮಾಡಬೇಕು ಎಂಬುದು ಇದೆ ಎಂದರು.
ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಬರಪರಿಹಾರ ಅನುದಾನದ ಬಗ್ಗೆ ಹೆಚ್ ಡಿ ಕುಮಾರಸ್ವಾಮಿಯವರಿಗೆ ಮಾಹಿತಿ ಇಲ್ಲ. ಕುಮಾರಸ್ವಾಮಿ ಮಾತು ನಂಬಿಕೊಂಡು ನೀವು ಪ್ರಶ್ನೆ ಕೇಳಿದ್ರೆ ಹೇಗೆ. ಬರಪರಿಹಾರದ ಕಾಮಗಾರಿಗಳಿಗೆ ಎಲ್ಲಾ ಜಿಲ್ಲಾಧಿಕಾರಿಗಳ ಪಿ.ಡಿ.ಖಾತೆಯಲ್ಲಿ ಸುಮಾರು 800 ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಲಾಗಿದೆ. ಇದನ್ನು ಕುಡಿಯುವ ನೀರು, ಮೇವು ಸೇರಿದಂತೆ ಇತರ ಬರಪರಿಹಾರ ಕಾರ್ಯಗಳಿಗೆ ವಿನಿಯೋಗಿಸಲಾಗುತ್ತದೆ. ಕೇಂದ್ರ ಸರ್ಕಾರಕ್ಕೆ ಬರಪರಿಹಾರ ಕೋರಿ ಮನವಿ ಸಲ್ಲಿಸಿದ್ದರೂ, ಅಲ್ಲಿಂದ ಯಾವುದೇ ರೀತಿಯ ಪರಿಹಾರ ಇನ್ನೂ ತಲುಪಿಲ್ಲ ಎಂದು ತಿಳಿಸಿದರು.