ಬೆಂಗಳೂರು: ಬರಗಾಲದ ಘೋಷಣೆ ಮತ್ತು ಪರಿಹಾರಕ್ಕೆ ಸಂಬಂಧಿಸಿದ ಕೇಂದ್ರ ಸರ್ಕಾರದ ಬರ ನಿರ್ವಹಣೆ ಕೈಪಿಡಿ 2020 ಮಾನದಂಡಗಳಲ್ಲಿನ ಸಮಸ್ಯೆಗಳ ಕಾರಣದಿಂದಾಗಿಯೇ ಬರಗಾಲ ಘೋಷಣೆ ವಿಳಂಬವಾಗಿದೆ. ಈ ಮಾನದಂಡಗಳನ್ನು ಬದಲಾವಣೆ ಮಾಡದಿದ್ದರೆ ಬರಪೀಡಿತ ಪ್ರದೇಶದದಲ್ಲಿ ಪರಿಹಾರ ಕಾರ್ಯಗಳನ್ನು ನಡೆಸಿ ನೊಂದ ಜನರಿಗೆ ನೆರವಾಗಲು ಸಾಧ್ಯವಾಗದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಬಿಜೆಪಿ ಆರೋಪಕ್ಕೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬರ ಘೋಷಣೆಗೆ ಅಗತ್ಯವಾಗಿರುವ ಮಾನದಂಡಗಳನ್ನು ಮರುಪರಿಶೀಲಿಸಬೇಕಾದ ಅನಿವಾರ್ಯತೆಯನ್ನು ವಿವರಿಸಿ ಕೇಂದ್ರ ಕೃಷಿ ಸಚಿವರಾದ ನರೇಂದ್ರ ಸಿಂಗ್ ತೋಮರ್ ಅವರಿಗೆ ಹಿಂದೆಯೇ ಪತ್ರ ಬರೆದಿದ್ದರೂ ಕೇಂದ್ರ ಸರ್ಕಾರದಿಂದ ಇಲ್ಲಿಯವರೆಗೆ ಉತ್ತರ ಬಂದಿಲ್ಲ. ಮಾನದಂಡಗಳಲ್ಲಿನ ಬದಲಾವಣೆ ಕೇವಲ ಕರ್ನಾಟಕ ರಾಜ್ಯದ ದೃಷ್ಟಿಯಿಂದ ಮಾತ್ರವೇ ಅಲ್ಲ, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಒಕ್ಕೂಟವಾದ ಭಾರತ ಗಣರಾಜ್ಯದ ಹಿತದೃಷ್ಟಿಯಿಂದಲೂ ಅತ್ಯಗತ್ಯವಾಗಿರುತ್ತದೆ ಎಂದಿದ್ದಾರೆ.
ಬರಘೋಷಣೆಯ ಮಾನದಂಡಗಳ ಪರಿಷ್ಕರಣೆಗಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡಹೇರಬೇಕಾಗಿರುವ ರಾಜ್ಯದ ಬಿಜೆಪಿ ನಾಯಕರು ಆ ಕೆಲಸವನ್ನು ಮಾಡದೆ ರಾಜ್ಯದ ಬರ ಪರಿಸ್ಥಿತಿಯ ರಾಜಕೀಯ ಲಾಭ ಪಡೆಯುವ ದುರುದ್ದೇಶದಿಂದ ಸರ್ಕಾರದ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಕರ್ನಾಟಕ ವೈವಿಧ್ಯಮಯವಾದ 14 ಕೃಷಿ-ಹವಾಮಾನ ವಲಯಗಳನ್ನು ಹೊಂದಿದ್ದು, ಪ್ರತಿಯೊಂದು ವಲಯವೂ ತನ್ನದೇ ಆದ ಸವಾಲುಗಳನ್ನು ಹೊಂದಿದೆ. ಪ್ರಸಕ್ತ ಇರುವ ಮಾನದಂಡಗಳು ಎಲ್ಲ ವಲಯಗಳಿಗೂ ಏಕರೂಪವಾಗಿದ್ದು, ಇದು ಬರ ಘೋಷಣೆಗೆ ಅಗತ್ಯವಾದ ಸೂಕ್ಷ್ಮಗಳು ಮತ್ತು ಬದಲಾವಣೆಗಳನ್ನು ಒಳಗೊಳ್ಳುವುದಿಲ್ಲ. ಹಾಗಾಗಿ, ವಲಯವಾರು ನಿರ್ದಿಷ್ಟವಾದ ಸೂಚ್ಯಂಕಗಳನ್ನು ಬರ ಘೋಷಣೆಗೆ ರೂಪಿಸುವುದು ಅಗತ್ಯವಾಗಿರುತ್ತದೆ ಎಂದು ತಿಳಿಸಿದ್ದಾರೆ.
ಪ್ರಸಕ್ತ ಬರ ಘೋಷಣೆಯ ಮಾನದಂಡಗಳು ಹವಾಮಾನ ಶಾಸ್ತ್ರೀಯ, ಕೃಷಿ ಹಾಗೂ ಜಲಶಾಸ್ತ್ರೀಯ ಬರಗಳ ಸೂಚ್ಯಂಕಗಳನ್ನು ತನ್ನ ಮಾನದಂಡಗಳಲ್ಲಿ ಕ್ರೋಢೀಕರಿಸಿಕೊಂಡಿದೆ. ಆದರೆ, ಸದಾಕಾಲವೂ ಇದು ಅನ್ವಯಯೋಗ್ಯವೆಂದೇನೂ ಅಲ್ಲ. ಹವಾಮಾನ ಶಾಸ್ತ್ರೀಯ ಬರವನ್ನು ಪರಿಗಣಿಸಿಯೇ ನೋಡುವುದಾದರೆ, ಮುಂಗಾರಿನಲ್ಲಿ ಆರಂಭದಲ್ಲಿ ಮಳೆ ಕೊರತೆ ಇದ್ದದ್ದು ಆನಂತರ ಪ್ರಬಲ ಮಾರುತಗಳ ಪರಿಣಾಮ ಸುಧಾರಿಸಬಹುದು. ಇತ್ತೀಚಿನ ವರ್ಷಗಳಲ್ಲಿ ಇದು ಹೆಚ್ಚು ಘಟಿಸಿದೆ ಎಂದಿದ್ದಾರೆ.
ಆಗಸ್ಟ್-ಸೆಪ್ಟೆಂಬರ್ ಅವಧಿಯಲ್ಲಿ ಮಳೆ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ, ಮುಂಗಾರು ಆರಂಭದಲ್ಲಿ ಮಳೆ ಕೊರತೆಯ ಕಾರಣಕ್ಕೆ ಬಿತ್ತನೆ ಪ್ರಮಾಣ ಇಳಿಕೆಯಾಗಿರುತ್ತದೆ. ಪರಿಣಾಮ ಬೆಳೆಯಲ್ಲಿ ಕೊರತೆಯುಂಟಾಗಿ ಕೃಷಿ ಆಧರಿತ ಬರದ ಸನ್ನಿವೇಶ ಉದ್ಭವಿಸುತ್ತದೆ. ಅದರೆ, ಇದೇ ವೇಳೆ ಸುಧಾರಿಸಿದ ಮಳೆಯ ಮಾರುತಗಳಿಂದಾಗಿ ಹವಾಮಾನ ಮತ್ತು ಜಲಶಾಸ್ತ್ರೀಯ ಬರ ಕಾಣದೆ ಹೋಗಬಹುದು. ಈ ಸೂಕ್ಷ್ಮವನ್ನು ಬರ ಘೋಷಣೆಗೆ ಕಡ್ಡಾಯವಾಗಿರುವ ಮಾನದಂಡಗಳು ಒಳಗೊಳ್ಳಬೇಕಾಗಿದೆ ಎಂದು ತಿಳಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆಯು ದೇಶಾದ್ಯಂತ ಶೇ.10 ಮಳೆಯ ಕೊರತೆಯನ್ನೂ ಸಹ ಬರದ ವರ್ಷ ಎಂದು ತೀರ್ಮಾನಿಸಿ ಘೋಷಿಸುತ್ತದೆ. ಆದರೆ, ಮಾನದಂಡಗಳ ಪ್ರಕಾರ ರಾಜ್ಯಗಳು ಬರ ಘೋಷಣೆಯನ್ನು ಮಾಡಬೇಕಾದರೆ ಮಳೆಯ ವ್ಯತ್ಯಯ ಸೂಚ್ಯಂಕವು ಶೇ.60ಕ್ಕಿಂತ ಹೆಚ್ಚಿರಬೇಕು ಎನ್ನಲಾಗಿದೆ. ನಾವು ಈ ಎರಡರ ನಡುವಿನ ಅಂತರವನ್ನು ಗಣನೆಗೆ ತೆಗೆದುಕೊಳ್ಳಬೇಕಾಗಿದೆ. ಮಳೆಯ ವ್ಯತ್ಯಯ ಸೂಚ್ಯಂಕವು ಶೇ.20ರಿಂದ ಶೇ.59ರ ವರೆಗೆ ಇದ್ದರೂ ಅದು ಬರ ಘೋಷಣೆಗೆ ಅಗತ್ಯವಾದ ಕ್ರಿಯಾಕಾರಣ (ಟ್ರಿಗರ್) ಅಂಶವೆಂದು ಪರಿಗಣಿಸಬೇಕು ಎಂದು ಹೇಳಿದ್ದಾರೆ.