ಬೆಂಗಳೂರು:ಶಾಲೆಗಳಿಗೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಇ-ಮೇಲ್ ಕಳುಹಿಸಿದವರನ್ನು ಪತ್ತೆ ಹಚ್ಚಲು ಪೊಲೀಸರಿಗೆ ಸೂಚಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ಬೆಂಗಳೂರಿನ ಶಾಲೆಗಳಿಗೆ ಬೆದರಿಕೆ ಇ-ಮೇಲ್ ಬಂದಿರುವ ಬಗ್ಗೆ ಪ್ರತಿಕ್ರಿಯಿಸಿ, ಪೊಲೀಸರ ಜೊತೆ ಈಗಾಗಲೇ ಮಾತನಾಡಿದ್ದೇನೆ. ಎಲ್ಲಾ ಶಾಲೆಗಳನ್ನು ಪರಿಶೀಲನೆ ನಡೆಸಲು ತಿಳಿಸಿದ್ದೇನೆ. ಎಚ್ಚರದಿಂದ ಇರಲು ಹೇಳಿದ್ದೇನೆ. ಈ ರೀತಿ ಬೆದರಿಕೆ ಹಾಕಿದವರನ್ನು ಪತ್ತೆ ಹಚ್ಚಲು ಸೂಚಿಸಿದ್ದೇನೆ ಎಂದರು. ಈ ಹಿಂದೆಯೂ ಇಂಥ ಬೆದರಿಕೆಗಳು ಬಂದಿದ್ದವು. ಆದರೆ ಈ ಬಗ್ಗೆ ಎಚ್ಚರದಿಂದ ಇರಲು ತಿಳಿಸಿದ್ದೇನೆ ಎಂದು ತಿಳಿಸಿದರು.
ಡಿಸಿಎಂ ಡಿಕೆಶಿ ಪ್ರತಿಕ್ರಿಯೆ:ಕೆಲವು ಕಿಡಿಗೇಡಿಗಳು ಈ ರೀತಿ ಮಾಡುತ್ತಿದ್ದಾರೆ. ಆದರೆ ಇದನ್ನು ನಾವು ನಿರ್ಲಕ್ಷ್ಯ ಮಾಡೋದಕ್ಕೆ ಆಗಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಬಾಂಬ್ ಬೆದರಿಕೆ ಕರೆ ಬಂದ ಸದಾಶಿವನಗರದ ನ್ಯೂ ಅಕಾಡೆಮಿ ನರ್ಸರಿ ಶಾಲೆಗೆ ಭೇಟಿ ನೀಡಿದ ಡಿ.ಕೆ.ಶಿವಕುಮಾರ್ ಶಾಲೆಯವರು ಹಾಗೂ ಪೊಲೀಸರಿಂದ ಮಾಹಿತಿ ಪಡೆದರು.
ಬಳಿಕ ಮಾತನಾಡಿ, ನಾನು ಮನೆಯಲ್ಲಿ ಟ್ರೆಡ್‌ಮಿಲ್ ಮಾಡ್ತಿದ್ದಾಗ ಟಿವಿಯಲ್ಲಿ ನ್ಯೂಸ್ ನೋಡಿದೆ. ನಮ್ಮ ಮನೆ ಎದುರಿನ ಶಾಲೆ ಅಂತ ನ್ಯೂಸ್ ಬರ್ತಿತ್ತು. ನೋಡಿ ಗಾಬರಿ ಆಯ್ತು. ತಕ್ಷಣ ಬಂದು ಪೊಲೀಸರ ಜೊತೆ ಮಾತನಾಡಿದೆ. ಇ-ಮೇಲ್ ಮೂಲಕ ಮೆಸೇಜ್ ಬಂದಿದೆ ಎಂದರು. ಹೀಗಾಗಿ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಮೇಲ್ನೋಟಕ್ಕೆ ಇದು ಫೇಕ್ ಅಂತ ಕಾಣುತ್ತಿದೆ. ಒಮ್ಮೊಮ್ಮೆ ಸೀರಿಯಸ್ ಆಗಿ ಪ್ರಯತ್ನ ಮಾಡ್ತಾರೆ. ಹಾಗಾಗಿ ಯಾವುದನ್ನೂ ನಿರ್ಲಕ್ಷ್ಯ ಮಾಡಬಾರದು. ಪೊಲೀಸರು ಎಲ್ಲಾ ರೀತಿಯಲ್ಲೂ ಪರಿಶೀಲನೆ ನಡೆಸಿದ್ದಾರೆ. ನಮ್ಮ ಸೈಬರ್ ಕ್ರೈಂ ಪೊಲೀಸರು ಸಮರ್ಥರಿದ್ದಾರೆ. ಬೆದರಿಕೆ ಹಾಕಿದವರು ಯಾರು ಅನ್ನೋದನ್ನು ಪತ್ತೆ ಮಾಡುತ್ತಾರೆ ಎಂದರು.
ಬೆಂಗಳೂರು ಹಬ್ಬದ ವೇಳೆ ಬೆದರಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಹಬ್ಬ ಮಾಡೋರು ಮಾಡಬೇಕು. ಊಟ ಮಾಡೋರು ಮಾಡಬೇಕು. ಕಚೇರಿಗೆ ಹೋಗುವವರು ಹೋಗಲೇಬೇಕು. ಶಾಲೆಗೆ ಮಕ್ಕಳು ಹೋಗಲೇಬೇಕು. ಕೆಲವರು ಕಿಡಿಗೇಡಿಗಳು ಈ ರೀತಿ ಮಾಡ್ತಾರೆ. ಆದರೆ ನಾವು ನಿರ್ಲಕ್ಷ್ಯ ಮಾಡಬಾರದು ಅಷ್ಟೇ ಎಂದು ತಿಳಿಸಿದರು.
ಇದನ್ನೂ ಓದಿ:ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಬೆದರಿಕೆ: ಮೂಲ ಪತ್ತೆ ಹಚ್ಚುವವರೆಗೂ ಬಿಡುವುದಿಲ್ಲ- ಗೃಹ ಸಚಿವ ಜಿ.ಪರಮೇಶ್ವರ್