ಬೆಂಗಳೂರು: "ಮುಂದಿನ ಐದು ವರ್ಷಗಳಲ್ಲಿ ಭಾರತ ಹಾಗೂ ಕರ್ನಾಟಕ ಏಡ್ಸ್ ಮುಕ್ತ ದೇಶ, ರಾಜ್ಯ ಆಗಲಿ. ಈ ದಿಕ್ಕಿನಲ್ಲಿ ಎಲ್ಲರೂ ಒಟ್ಟಾಗಿ ಕಾರ್ಯಪ್ರವೃತ್ತರಾಗಬೇಕು" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಆಯೋಜಿಸಲಾಗಿದ್ದ ವಿಶ್ವ ಏಡ್ಸ್ ದಿನ 2023 ಮತ್ತು 25ನೇ ರಜತ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, "ಇಂದು ವಿಶ್ವ ಏಡ್ಸ್ ದಿನ. ಈ ಸಾಂಕ್ರಾಮಿಕ ರೋಗ ತಡೆಯುವ ಜವಾಬ್ದಾರಿ ಎಲ್ಲರ ಮೇಲಿದೆ. ಈ ರೋಗ 1986ರಲ್ಲಿ ಭಾರತದಲ್ಲಿ ಹಾಗೂ 1987ರಲ್ಲಿ ಕರ್ನಾಟಕದಲ್ಲಿ ಪತ್ತೆಯಾಗಿತ್ತು" ಎಂದರು.
"ಇತ್ತಿಚಿನ ದಿನಗಳಲ್ಲಿ ಹೆಚ್ಐವಿ ಪೀಡಿತರ ಹಾಗೂ ಅದರ ಹರಡುವಿಕೆಯೂ ಕಡಿಮೆಯಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆ. ನಮ್ಮ ಸಮಾಜವನ್ನು ಹೆಚ್ಐವಿ ಮುಕ್ತ ಸಮಾಜವನ್ನಾಗಿ ಮಾಡಬೇಕು. ಇದಕ್ಕಾಗಿ ಜನರಲ್ಲಿ ಮತ್ತು ಯುವಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಬೇಕು. 2015 - 2020ರವರೆಗೆ ಏಡ್ಸ್ ಪೀಡಿತರ ಸಂಖ್ಯೆಯನ್ನು ಸೊನ್ನೆಗೆ ತನ್ನಿ ಎಂಬ ಘೋಷವಾಕ್ಯವಿತ್ತು. ಆದರೆ, ಈ ಗುರಿಯನ್ನು ಇನ್ನೂ ಸಾಧಿಸಲಾಗಿಲ್ಲ. ಈ ಘೋಷಣೆಯನ್ನು ಕಾರ್ಯರೂಪಕ್ಕೆ ತರುವುದು ಕೇವಲ ಆರೋಗ್ಯ ಇಲಾಖೆಯ ಹೊಣೆಯಾಗಿರದೇ, ಇಡೀ ಸಮಾಜದ ಹೊಣೆಯಾಗಿದೆ" ಎಂದು ಹೇಳಿದರು.
"ಈ ಸಾಂಕ್ರಾಮಿಕ ರೋಗ ಪೂರ್ಣ ವಾಸಿಯಾದರೆ ಏಡ್ಸ್ ಪೀಡಿತರು ನೆಮ್ಮದಿಯ ಜೀವನ ನಡೆಸಲು ಸಾಧ್ಯ. ಐದಾರು ವರ್ಷಗಳಲ್ಲಿ ಏಡ್ಸ್ ಪೀಡಿತರ ಸಂಖ್ಯೆ ಸೊನ್ನೆಗೆ ಬರಲಿ ಎಂದು ಹಾರೈಸುತ್ತೇನೆ. ಭಾರತ ಏಡ್ಸ್ ಪ್ರಕರಣಗಳಲ್ಲಿ ವಿಶ್ವದಲ್ಲಿಯೇ 3ನೇ ಸ್ಥಾನದಲ್ಲಿದೆ. ನಾವು ಹೆಚ್ಚು ಜಾಗೃತರಾಗುವುದು ಅವಶ್ಯ. ರೋಗಿಗಳೊಂದಿಗೆ ಮಾತನಾಡಿದರೆ ರೋಗ ಬರುತ್ತದೆ ಎಂದು ಕೆಲವರಿಗೆ ತಪ್ಪು ತಿಳಿವಳಿಕೆಗಳಿವೆ. ಆದರೆ, ಹಾಗಾಗುವುದಿಲ್ಲ. ಹೆಚ್ಚಾಗಿ ರಕ್ತದ ಮೂಲಕವಾಗಿ ಹರಡುತ್ತದೆ. ಇದು ಜನರಿಗೆ ಗೊತ್ತಿರಬೇಕು" ಎಂದರು.