ಬೆಂಗಳೂರು:ಶಾಸಕರ ಅಸಮಾಧಾನ ಸ್ಫೋಟದ ಸುಳಿವು ಸಿಗುತ್ತಿದ್ದಂತೆ ಎಚ್ಷೆತ್ತುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸತತ ಮೂರನೇ ದಿನವೂ ಜಿಲ್ಲಾವಾರು ಶಾಸಕರು ಮತ್ತು ಸಚಿವರ ಸಭೆ ನಡೆಸಿ ಶಾಸಕರು ಹಾಗೂ ಸಚಿವರ ನಡುವೆ ಸಮನ್ವಯತೆ ಮೂಡಿಸುವ ಪ್ರಯತ್ನ ನಡೆಸಿದ್ದಾರೆ. ಅನುದಾನ ಕೊರತೆಯ ಬಗ್ಗೆಯೂ ಮಾಹಿತಿ ನೀಡಿ ಮಿತಿಯೊಳಗೆ ಬೇಡಿಕೆ ತನ್ನಿ ಎನ್ನುವ ಸಲಹೆ ನೀಡಿದ್ದಾರೆ. ಈ ವರ್ಷ ಹೆಚ್ಚು ಅನುದಾನದ ನಿರೀಕ್ಷೆ ಇಟ್ಟುಕೊಳ್ಳದೇ, ಗ್ಯಾರಂಟಿ ಯೋಜನೆಗಳ ಸಮರ್ಪಕ ಜಾರಿಗೆ ಆದ್ಯತೆ ನೀಡಬೇಕು ಎಂದು ಸಿಎಂ ಸೂಚಿಸಿದ್ದಾರೆ.
ಕೆಲ ಸಚಿವರ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿ ಶಾಸಕರು ಮುಖ್ಯಮಂತ್ರಿಗಳಿಗೆ ಬರೆದಿದ್ದರು ಎನ್ನಲಾದ ಪತ್ರ ಬಹಿರಂಗವಾಗಿತ್ತು. ಇದರ ಬೆನ್ನಲ್ಲೇ ಶಾಸಕಾಂಗ ಪಕ್ಷದ ಸಭೆ ನಡೆಸಿ ಸಮಸ್ಯೆ ಸರಿಪಡಿಸುವ ಪ್ರಯತ್ನ ನಡೆಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸತತ ಮೂರನೇ ದಿನ (ಬುಧವಾರ) ಜಿಲ್ಲಾವಾರು ಸ್ವಪಕ್ಷೀಯ ಶಾಸಕರ ಸರಣಿ ಸಭೆ ನಡೆಸಿದ್ದಾರೆ.
ಶಾಸಕರಿಗೆ ಸಿಎಂ ಸಲಹೆ:ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಅಪರಾಹ್ನದಿಂದ ಆರಂಭಗೊಂಡ ಸಭೆ ಸಂಜೆವರೆಗೂ ಸುದೀರ್ಘವಾಗಿ ನಡೆಯಿತು. ಕೊಡಗು, ಮಂಡ್ಯ, ದಾವಣಗೆರೆ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳ ಕಾಂಗ್ರೆಸ್ ಶಾಸಕರ ಸಭೆಯನ್ನು ಜಿಲ್ಲಾವಾರು ಪ್ರತ್ಯೇಕವಾಗಿ ನಡೆಸಿದರು. ಆಯಾ ಜಿಲ್ಲೆಗಳ ಶಾಸಕರ ಕ್ಷೇತ್ರದಲ್ಲಿ ಆಗಬೇಕಾದ ಕೆಲಸಗಳು, ಶಾಸಕರ ಜೊತೆ ಸಚಿವರ ಸ್ಪಂದನೆ, ತುರ್ತು ಬೇಡಿಕೆ, ಅನುದಾನ ಲಭ್ಯತೆ ವಿಚಾರವಾಗಿ ಸಾಕಷ್ಟು ಚರ್ಚೆ ನಡೆಸಲಾಗಿದೆ. ಪ್ರಮುಖವಾಗಿ ಸಚಿವರ ವರ್ತನೆ ಸರಿಪಡಿಸುವ ಭರವಸೆಯನ್ನು ಶಾಸಕರಿಗೆ ಸಿಎಂ ಸಿದ್ದರಾಮಯ್ಯ ನೀಡಿದ್ದು, ಸಚಿವರಿಂದ ಸಕಾರಾತ್ಮಕ ಸ್ಪಂದನೆ ಸಿಗದಿದ್ದರೆ ತಮ್ಮ ಗಮನಕ್ಕೆ ತರುವಂತೆ ಸೂಚಿಸಿದ್ದಾರೆ.