ಕರ್ನಾಟಕ

karnataka

ETV Bharat / state

ಬೆಂಗಳೂರು: ಬಿಎಂಟಿಸಿಯ 100 ಎಲೆಕ್ಟ್ರಿಕ್ ಬಸ್​ಗಳ ಸಂಚಾರಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ - ಡಿಕೆ ಶಿವಕುಮಾರ್

CM Siddaramaiah launched 100 electric buses: ಬಿಎಂಟಿಸಿಯ 100 ಎಲೆಕ್ಟ್ರಿಕ್ ಬಸ್​ಗಳ ಸಂಚಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.

CM Siddaramaiah launched 100 electric buses
ಬಿಎಂಟಿಸಿಯ 100 ಎಲೆಕ್ಟ್ರಿಕ್ ಬಸ್​ಗಳ ಸಂಚಾರಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

By ETV Bharat Karnataka Team

Published : Dec 26, 2023, 1:26 PM IST

Updated : Dec 26, 2023, 1:56 PM IST

ಬೆಂಗಳೂರು:''ವಿದ್ಯುತ್ ಚಾಲಿತ ಬಸ್​​ಗಳ ಸಂಚಾರದಿಂದ ಸಾರಿಗೆ ಸುಗಮವಾಗುವ ಜೊತೆಗೆ ಮಾತಾವರಣದಲ್ಲಿ ಮಾಲಿನ್ಯ ಕಡಿಮೆಯಾಗಲಿದೆ. ಹೊಗೆ ರಹಿತ ಸಂಚಾರ ಇರಲಿದೆ, ನ್ಯೂಸೆನ್ಸ್ ಕೂಡ ಕಡಿಮೆ ಆಗಲಿದೆ. ಈ ಎಲ್ಲ ಕಾರಣದಿಂದ ಎಲೆಕ್ಟ್ರಿಕ್ ಬಸ್ ಹೆಚ್ಚು ಜನಸ್ನೇಹಿಯಾಗಲಿವೆ'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್​ನಲ್ಲಿ ಫೇಮ್ ಇಂಡಿಯಾ ಯೋಜನೆಯಡಿ ಟಾಟಾ ಸಹಭಾಗಿತ್ವದಲ್ಲಿ ಜಿಸಿಸಿ ಮಾದರಿಯಲ್ಲಿ ಬಿಎಂಟಿಸಿಗೆ ಹಸ್ತಾಂತರ ಆದ 100 ಇವಿ ನಾನ್ ಎಸಿ ಬಸ್​ಗಳ ಸಂಚಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.

ನಂತರ ಮಾತನಾಡಿದ ಸಿಎಂ, ''ಬಿಎಂಟಿಸಿ ಮತ್ತು ಟಾಟಾ ಮೋಟಾರ್ಸ್ ಸಹಯೋಗದಲ್ಲಿ ಇವಿ ಬಸ್ ತರಲಾಗಿದೆ. ಇಂದು 100 ಇವಿ ಬಸ್​ಗಳಿಗೆ ಚಾಲನೆ ನೀಡಲಾಗಿದೆ. ಬೆಂಗಳೂರಿನ ಪ್ರಯಾಣಿಕರ ಅನುಕೂಲಕ್ಕೆ ಮಾಡಲಾಗುತ್ತಿದೆ. ಮಾರ್ಚ್ ಅಂತ್ಯದ ವೇಳೆಗೆ 1,600 ಇವಿ ಬಸ್​ಗಳು ಬಿಎಂಟಿಸಿಯಲ್ಲಿ ಸಂಚರಿಸಲಿವೆ. ಎಲ್ಲ ಬಸ್ ಧಾರವಾಡದಲ್ಲಿ ಇರುವ ಟಾಟಾ ಮೋಟಾರ್ಸ್​ನಲ್ಲಿ ತಯಾರು ಮಾಡಲಾಗುತ್ತಿದೆ. ನಮ್ಮ ರಾಜ್ಯದಲ್ಲೇ ಇವಿ ಬಸ್ ತಯಾರಾಗುತ್ತಿವೆ. ಸಾರಿಗೆ ಸುಗಮವಾಗುವ ಜೊತೆಗೆ ವಾತಾವರಣದಲ್ಲಿ ಮಾಲಿನ್ಯ ಕಡಿಮೆಯಾಗಲಿದೆ'' ಎಂದರು.

ಬಿಎಂಟಿಸಿಗೆ 100 ಇವಿ ನಾನ್ ಎಸಿ ಬಸ್​ಗಳ ಹಸ್ತಾಂತರಿಸುವ ಕಾರ್ಯಕ್ರಮಕ್ಕೆ ಸಿಎಂ ಚಾಲನೆ

''ಸದ್ಯ 6,144 ಬಸ್ ಬೆಂಗಳೂರಿನಲ್ಲಿ ಇವೆ. 40 ಲಕ್ಷ ಜನ ಪ್ರಯಾಣಿಸುತ್ತಿದ್ದಾರೆ. ಇದರಲ್ಲಿ ಮಹಿಳೆಯರೆಲ್ಲ ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಜಾತಿ, ಅಂತಸ್ತು, ಧರ್ಮ ಭೇದವಿಲ್ಲದೇ ಉಚಿತವಾಗಿ ಓಡಾಡಬಹುದು, ಬೆಂಗಳೂರು ಮಾತ್ರವಲ್ಲ. ಇಡೀ ರಾಜ್ಯದಲ್ಲಿ ಓಡಾಡಬಹುದು. 120 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಇದರಿಂದ ಬಸ್​ಗೆ ನೀಡುತ್ತಿದ್ದ ಹಣ ಉಳಿತಾಯವಾಗಲಿದೆ. ಇದು ಕಾರಲ್ಲಿ ಓಡಾಡುವವರಿಗಲ್ಲ ಬಸ್​ನಲ್ಲಿ ಓಡಾಡುವವರಿಗೆ ಉಪಯೋಗವಾಗಲಿದೆ.

ಬಿಎಂಟಿಸಿಗೆ 100 ಇವಿ ನಾನ್ ಎಸಿ ಬಸ್​ಗಳ ಹಸ್ತಾಂತರಿಸುವ ಕಾರ್ಯಕ್ರಮ ನಡೆಯಿತು

ಕಾರ್ಮಿಕರು ಮತ್ತು ಶಾಲಾ ಮಕ್ಕಳಿಗೆ ಶಕ್ತಿ ಯೋಜನೆ ಹೆಚ್ಚು ಉಪಯೋಗ ಆಗುತ್ತಿದೆ. ಹಿಂದೆ ಯಾವ ಸರ್ಕಾರವೂ ಇದನ್ನ ಮಾಡಿರಲಿಲ್ಲ. ಉಚಿತ ಪ್ರಯಾಣದ ಕಾರ್ಯಕ್ರಮ ರೂಪಿಸಿರಲಿಲ್ಲ. ವಿರೋಧ ಪಕ್ಷದವರು ಟೀಕೆಗೋಸ್ಕರ ಟೀಕೆ ಮಾಡುತ್ತಿದ್ದಾರೆ. ಅವರ ಕಾಲದಲ್ಲಿ ಯಾಕೆ ಮಾಡಲಿಲ್ಲ? ಮಹಿಳೆಯರು ಅವರಿಗೆ ಉತ್ತರ ಕೊಡಬೇಕು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಆಶೀರ್ವಾದ ಮಾಡುವ ಮೂಲಕ ಬಿಜೆಪಿಗೆ ಉತ್ತರ ಕೊಡಬೇಕು'' ಎಂದು ಮನವಿ ಮಾಡಿದರು.

ಸಿಎಂ ಸಿದ್ದರಾಮಯ್ಯ ಮಾನಾಡಿದರು.

''ಕೆಎಸ್ಆರ್​ಟಿಸಿ ಬಹಳ ಒಳ್ಳೆಯ ಕೆಲಸ ಮಾಡುತ್ತಿದೆ. ರಾಮಲಿಂಗಾರೆಡ್ಡಿ ನಾಯಕತ್ವದಲ್ಲಿ ಇಡೀ ರಾಜ್ಯದಲ್ಲಿ ಉತ್ತಮ ಕೆಲಸ ಮಾಡುತ್ತಿದೆ. ಸಾರಿಗೆ ಬಸ್​ಗಳ ಆದಾಯ ಹೆಚ್ಚಾಗಿದೆ. ಸಾರಿಗೆ ಬಸ್​ಗಳು ಲಾಭ ಮಾಡಬೇಕು ಎನ್ನುವುದು ಸರ್ಕಾರದ ಉದ್ದೇಶವಲ್ಲ. ಹಾಗಂತ ನಷ್ಟ ಆಗಬಾರದು, ನಮ್ಮ ಐದು ಗ್ಯಾರಂಟಿಗಳಲ್ಲಿ ಶಕ್ತಿ ಪ್ರಮುಖ ಯೋಜನೆ. ಇದರಿಂದ ಪ್ರತಿಯೊಬ್ಬರ ಕೈಯಲ್ಲಿ ಹಣ ಉಳಿತಾಯವಾಗಿ ಕೊಳ್ಳುವ ಶಕ್ತಿ ಹೆಚ್ಚಲಿದೆ. ವ್ಯಾಪಾರ ವಹಿವಾಟು ಹೆಚ್ಚಾಗಿ ಆರ್ಥಿಕ ಚಟುವಟಿಕೆ ಹೆಚ್ಚಿ ತೆರಿಗೆ ಹೆಚ್ಚು ಬರಲಿದೆ ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಯೋಜನೆ ತರಲಾಗಿದೆ'' ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹಿಳೆಯೊಬ್ಬರಿಗೆ ಸಸಿ ವಿತರಿಸಿದರು.

4.30 ಕೋಟಿ ಜನ ಗ್ಯಾರಂಟಿ ಯೋಜನೆಯ ಫಲಾನುಭವಿಗಳು:''ನಮ್ಮ ಗ್ಯಾರಂಟಿಗಳಿಂದ 4ರಿಂದ 5 ಸಾವಿರ ರೂ. ಪ್ರತಿ ಕುಟುಂಬದ ಕೈಸೇರಲಿದೆ. 4.30 ಕೋಟಿ ಜನ ನಮ್ಮ ಗ್ಯಾರಂಟಿಗಳ ಫಲಾನುಭವಿಗಳಿದ್ದಾರೆ. ದುರ್ಬಲರಿಗೆ ಆರ್ಥಿಕ, ಸಾಮಾಜಿಕ ಶಕ್ತಿ ನೀಡಬೇಕು, ಆಗ ಮಾತ್ರ ಅವರು ಮುಖ್ಯ ವಾಹಿನಿಗೆ ಬರಲು ಸಾಧ್ಯ. ಅದಕ್ಕೆ ಕಾರ್ಯಕ್ರಮಗಳನ್ನು ರೂಪಿಸಬೇಕು. ಈ ಕಾರಣದಿಂದ ನಾವು ಐದು ಕಾರ್ಯಕ್ರಮ ಮಾಡಿದ್ದೇವೆ'' ಎಂದರು.

ಅತಿ ಹೆಚ್ಚು ಇವಿ ಬಸ್​​ ಹೊಂದಿದ ರಾಜ್ಯ ಎಂಬ ಕೀರ್ತಿ:ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ''ಇಡೀ ದೇಶಕ್ಕೆ ಅತಿ ಹೆಚ್ಚು ಇವಿ ಬಸ್ ಹೊಂದಿದ ಕೀರ್ತಿಯನ್ನು ಇನ್ನು ಒಂದು ವರ್ಷದೊಳಗೆ ಮಾಡಲಿದ್ದೇವೆ. ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಇವಿಎಂ ಪಾಲಿಸಿ ತಂದಾಗ ಎಲ್ಲರೂ ನಗುತ್ತಿದ್ದರು. ಆದರೆ, ಇಂದು ಸಾವಿರಕ್ಕೂ ಹೆಚ್ಚು ಇವಿ ಬಸ್ ಬಂದಿವೆ. ಎಲ್ಲ ಬಸ್ ಎಮಿಷನ್ ಇಲ್ಲದೆ ಓಡಿಸುವ ಉದ್ದೇಶವಿದೆ. ಈಗ 100 ಇವಿ ಬಸ್ ನೀಡಲಾಗಿದೆ. ಇಡೀ ದೇಶ ಮಾಲಿನ್ಯದ ಬಗ್ಗೆ ಚಿಂತನೆ ಮಾಡಬೇಕಿದ್ದು, ಅದಕ್ಕೆ ನಮ್ಮ ಮೊದಲ ಹೆಜ್ಜೆ ಇದಾಗಿದೆ'' ಎಂದು ಹೇಳಿದರು.

''ನಮ್ಮ‌ ಸರ್ಕಾರ ಶಕ್ತಿ ಯೋಜನೆ ತಂದಿದೆ. ಉಚಿತ ಯೋಜನೆಯಿಂದ ನಮಗೆ ಆರ್ಥಿಕ ನಷ್ಟವಾಗಿರಬಹುದು. ಆದರೆ ಇತರರ ವಹಿವಾಟು ಹೆಚ್ಚಾಗಿದೆ. ಹಣ ಎಲ್ಲರ ಕೈಯಲ್ಲಿ ಹರಿದಾಡುತ್ತಿದೆ. ವ್ಯಾಪಾರ ವಹಿವಾಟು ಹೆಚ್ಚಾಗಿದೆ. ನಾವು ಸಮೀಕ್ಷೆ ಮಾಡಿಸಿದ್ದೇವೆ. ಶೇ.80 ರಷ್ಟು ಜನ ಸಂತಸ ವ್ಯಕ್ತಪಡಿಸಿದ್ದಾರೆ. ನಾವು ಐತಿಹಾಸಿಕ ತೀರ್ಪು ತೆಗೆದುಕೊಂಡಿದ್ದೇವೆ. ಇತರರು ನಮ್ಮನ್ನು ಫಾಲೋ ಮಾಡುತ್ತಿದ್ದಾರೆ. ನಮ್ಮ ಗ್ಯಾರಂಟಿ ಟೀಕಿಸುತ್ತಿದ್ದವರೇ ಈಗ ಮೋದಿ ಗ್ಯಾರಂಟಿ ಮಾಡುತ್ತಿದ್ದು, ನಮ್ಮನ್ನು ಅನುಸರಿಸುತ್ತಿದ್ದಾರೆ'' ಎಂದು ಕಿಡಿಕಾರಿದರು.

ಮಾರ್ಚ್​​ ಅಂತ್ಯದ ವೇಳೆಗೆ ಮತ್ತೆ 921 ಬಸ್​​:ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ''ಬಿಎಂಟಿಸಿಯ 100 ಇವಿ ಬಸ್​ಗಳಿಗೆ ಸಿಎಂ ಚಾಲನೆ ಕೊಟ್ಟಿದ್ದಾರೆ.‌ ಟಾಟಾ ಸಂಸ್ಥೆಯು ಪ್ರತಿ ಕಿಲೋಮೀಟರ್ ಗೆ 41 ರೂ. ದಂತೆ ಜಿಸಿಸಿ ಮಾದರಿಯಲ್ಲಿ ಬಸ್​ಗಳ ಸೇರ್ಪಡೆ ಮಾಡಲಾಗಿದೆ. ಇನ್ನು 921 ಇವಿ ಬಸ್ ಮಾರ್ಚ್ ಅಂತ್ಯದೊಳಗೆ ಬರಲಿದೆ. ಈಗಾಗಲೇ ಮೂರು ಕಡೆ ಚಾರ್ಜಿಂಗ್ ಸ್ಟೇಷನ್ ನಿರ್ಮಿಸುವ ಕಾರ್ಯ ಮುಗಿದಿದೆ'' ಎಂದರು.

''ಎಸಿ ಬಸ್​ಗೂ ಟೆಂಡರ್ ಕರೆದಿದ್ದು, 320 ಬಸ್ ಹಾಗೂ 120 ನಾನ್ ಎಸಿ ಇವಿ ಬಸ್ ಬರಲಿದೆ. 1751 ಇವಿ ಬಸ್ ಏಪ್ರಿಲ್​ಗೆ ಸಾರಿಗೆ ಸಂಸ್ಥೆ ಸೇರಿಕೊಳ್ಳಲಿದೆ. ಇವಿ ಬಸ್​ಗಳಲ್ಲಿ ದೆಹಲಿ ನಂತರದ ಸ್ಥಾನ ಬೆಂಗಳೂರಿಗೆ ಸಿಗಲಿದೆ'' ಎಂದರು. ''ಮಾಲಿನ್ಯ ಕಡಿಮೆ ಮಾಡಲಿ ಇವಿ ಬಸ್​ಗಳನ್ನು ಫೇಮ್ ಯೋಜನೆಯಡಿ ಕೇಂದ್ರ ಕೊಡುತ್ತಿದೆ. ಟಾಟಾದವರು ನಮಗೆ ಬಸ್ ನೀಡಿದ್ದಾರೆ. ದಿನಕ್ಕೆ ಕನಿಷ್ಠ 200 ಕಿಲೋಮೀಟರ್ ಇದ್ದು, ಕಿಲೋಮೀಟರ್​ಗೆ 41 ರೂ. ನಿಗದಿಪಡಿಸಲಾಗಿದೆ. ಏಪ್ರಿಲ್ ವೇಳೆಗೆ ಒಟ್ಟು ಎಲ್ಲ ಮಾದರಿ ಸೇರಿ 8 ಸಾವಿರ ಬಸ್ ಬಿಎಂಟಿಸಿಗೆ ಇರಲಿದೆ. ಜನಸಂಖ್ಯೆ ನೋಡಿದರೆ, 10 ಸಾವಿರ ಬಸ್ ಬಿಎಂಟಿಸಿಗೆ ಅಗತ್ಯವಿದೆ. ಪ್ರತಿದಿನ 40 ಲಕ್ಷ ಜನ ಬಿಎಂಟಿಟಿಯಲ್ಲಿ ಸಂಚರಿಸಿದರೆ, ಮೆಟ್ರೋದಲ್ಲಿ ಕೇವಲ 6 ಲಕ್ಷ ಜನ ಮಾತ್ರ ಪ್ರಯಾಣ ಮಾಡುತ್ತಿದ್ದಾರೆ'' ಎಂದು ವಿವರಿಸಿದರು.

''ಈವರೆಗೂ ಶಕ್ತಿ ಯೋಜನೆಯಡಿ 120.8 ಕೋಟಿ ಜನ ಸಂಚರಿಸಿದ್ದಾರೆ. ಅದರ ಟಿಕೆಟ್ ಮೊತ್ತ 2869 ಕೋಟಿ ಆಗಿದೆ. ಎಲ್ಲ ನಿಗಮ ಸೇರಿ ಮಾರ್ಚ್ ಒಳಗೆ 5,500 ಬಸ್ ಬರಲಿದೆ. 9 ಸಾವಿರ ಹುದ್ದೆ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ. ಕೋವಿಡ್ ವೇಳೆ 3,800 ಶೆಡ್ಯೂಲ್ ಕ್ಯಾನ್ಸಲ್ ಮಾಡಲಾಗಿತ್ತು. ಅದನ್ನೂ ಆರಂಭಿಸಲಾಗುತ್ತದೆ. ಹೊಸ ಬಸ್ ಬಂದ ನಂತರ, ಸಂಚಾರದಲ್ಲಿ ಯಾವ ಸಮಸ್ಯೆ ಆಗದಂತೆ ನಡೆಯಲಿದೆ'' ಎಂದರು. ಕೆಎಸ್ಆರ್​ಟಿಸಿ ಸಿಬ್ಬಂದಿಗೆ ಕೋಟಿ ವೆಚ್ಚದ ಅಪಘಾತ ವಿಮೆ ತರಲಾಗಿದೆ. ಕಲ್ಯಾಣ ಕರ್ನಾಟಕ ಸಾರಿಗೆಗೂ ಕೋಟಿ ವೆಚ್ಚದ ಅಪಘಾತ ವಿಮೆ ಮಾಡಿಸಲಾಗಿದೆ ಎಂದು ಆರ್ಥಿಕ ಭದ್ರತೆ ಕಲ್ಪಿಸಿರುವ ಮಾಹಿತಿ ನೀಡಿದರು.

ಇದನ್ನೂ ಓದಿ:ರಾಮದೇವರ ಪ್ರಾಣ ಪ್ರತಿಷ್ಠಾಪನೆ: ಹೆಚ್.ಡಿ.ಕುಮಾರಸ್ವಾಮಿ ಕುಟುಂಬಕ್ಕೆ ಆಹ್ವಾನ

Last Updated : Dec 26, 2023, 1:56 PM IST

ABOUT THE AUTHOR

...view details