ಕರ್ನಾಟಕ

karnataka

ETV Bharat / state

ಕಾವೇರಿ ನೆಪದಲ್ಲಿ ಬಿಜೆಪಿ, ಜೆಡಿಎಸ್​​ ರಾಜಕೀಯ: ಸಿಎಂ ಸಿದ್ದರಾಮಯ್ಯ - ಬೆಂಗಳೂರು

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ನಾಳೆ ಬೆಂಗಳೂರು ಹಾಗೂ ಸೆ.29ರಂದು ಕರ್ನಾಟಕ ಬಂದ್​ಗೆ ಕರೆ ನೀಡಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

CM Siddaramaiah
ಮುಖ್ಯಮಂತ್ರಿ ಸಿದ್ದರಾಮಯ್ಯ

By ETV Bharat Karnataka Team

Published : Sep 25, 2023, 2:14 PM IST

ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ

ಬೆಂಗಳೂರು:ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರದಲ್ಲಿ ಬಿಜೆಪಿ ಮತ್ತು ಜೆಡಿಎಸ್​​ನವರು ರಾಜಕೀಯ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು. ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ತಮ್ಮ ರಾಜೀನಾಮೆ ಕೇಳುತ್ತಿರುವ ವಿರೋಧ ಪಕ್ಷಗಳು, ಸರ್ವಪಕ್ಷ ಸಭೆಯಲ್ಲಿ ಹಾಗೆ ಹೇಳಲಿಲ್ಲವಲ್ಲ ಎಂದು ಪ್ರಶ್ನಿಸಿದರು.

ಪ್ರತಿಭಟನೆಗೆ ಅವಕಾಶವಿದೆ:ಕಾವೇರಿ ನೀರಿನ ಸಂಬಂಧ ನಾಳೆ ಬೆಂಗಳೂರು ಬಂದ್ ಹಾಗೂ ಸೆ.29ರಂದು ಕರ್ನಾಟಕ ಬಂದ್ ಕರೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆಗೆ ಅವಕಾಶವಿದೆ. ಅದನ್ನು ನಾವು ಹತ್ತಿಕ್ಕಲು ಹೋಗುವುದಿಲ್ಲ ಎಂದು ತಿಳಿಸಿದರು.

ಕಾವೇರಿ- ಇನ್ನಷ್ಟು ಬಲವಾಗಿ ವಾದ ಮಂಡನೆ:ಕಾವೇರಿ ನೀರು ಹರಿಸುವ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಆದೇಶ ಇದೆ. ನೀರು ಹರಿಸಲು ಸಾಧ್ಯವಿಲ್ಲ ಎಂದು ವಾದ ಮಂಡಿಸಲಾಗಿದೆ. ನಮ್ಮ ಅರ್ಜಿ ವಜಾ ಆಗಿದ್ದು, ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ನಿರ್ವಹಣಾ ಪ್ರಾಧಿಕಾರ ಎರಡರ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದೆವು. ಸುಪ್ರೀಂ ಕೋರ್ಟ್ ನಮ್ಮ ಹಾಗೂ ತಮಿಳುನಾಡಿನ ಅರ್ಜಿಯನ್ನು ತಿರಸ್ಕಾರ ಮಾಡಿದೆ. ತಮಿಳುನಾಡು 24 ಸಾವಿರ ಕ್ಯೂಸೆಕ್​ ನೀರು ಕೇಳಿದ್ದರು. ನಂತರ 7,200 ಕ್ಯೂಸೆಕ್ ಕೇಳಿದರು. ನಾವು 5 ಸಾವಿರ ಕ್ಯೂಸೆಕ್ಸ್ ನೀರು ಕೂಡ ಕೊಡಲಾಗುವುದಿಲ್ಲ. ನಮ್ಮ ಬಳಿ ನೀರಿಲ್ಲ ಎಂದು ವಾದಿಸಿದ್ದು, ಅದನ್ನು ನ್ಯಾಯಾಲಯ ಒಪ್ಪಿಲ್ಲ. ಪುನಃ ಸೆ.26 ರಂದು ಸುಪ್ರೀಂ ಕೋರ್ಟ್​ನಲ್ಲಿ ವಿಚಾರಣೆಗೆ ಬರಲಿದೆ. ನಮ್ಮ ವಾದವನ್ನು ಇನ್ನಷ್ಟು ಬಲವಾಗಿ ಮಂಡಿಸಲಾಗುವುದು ಎಂದರು.

ಸೆ.29ಕ್ಕೆ ಕರ್ನಾಟಕ ಬಂದ್:ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನ ಖಂಡಿಸಿ ನಾಳಿನ ಬೆಂಗಳೂರು ಬಂದ್ ಜೊತೆ ಸೆ.29ರಂದು ಕರ್ನಾಟಕ ಬಂದ್ ನಡೆಯಲಿದೆ. ಈ‌ ಮೂಲಕ ಕನ್ನಡ ಹಾಗೂ ರೈತಪರ ಸಂಘಟನೆಗಳು ಸೇರಿ ವಿವಿಧ ಸಂಘ ಸಂಸ್ಥೆಗಳು ಒಂದೇ ವಾರದಲ್ಲಿ ಎರಡು ಬಂದ್ ಮೂಲಕ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲಿವೆ.

ನಾಳೆ ಬೆಂಗಳೂರು ಬಂದ್​​:ಕಾವೇರಿ ಕಣಿವೆಯಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ಕೆಆರ್​​ಎಸ್ ಜಲಾಶಯ ಸೇರಿ ವಿವಿಧ ಡ್ಯಾಂಗಳಲ್ಲಿ ನೀರು ಬರಿದಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹರಿಸಿರುವ ರಾಜ್ಯ ಸರ್ಕಾರ ಧೋರಣೆ ಖಂಡನೀಯ. ಕೂಡಲೇ ನೀರು ನಿಲ್ಲಿಸಿ ರಾಜ್ಯ ರೈತರ ಹಿತ ಕಾಪಾಡಲು ಒತ್ತಾಯಿಸಿ ಕಬ್ಬು ಬೆಳೆಗಾರರ ಸಂಘಟನೆ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಸೇರಿದಂತೆ ವಿವಿಧ ಸಂಘಟೆಗಳು ನಾಳೆ ಬೆಂಗಳೂರು ಬಂದ್​​ಗೆ ಕರೆ ಕೊಟ್ಟಿದ್ದರು.‌

ಇತ್ತ ಕನ್ನಡ ಒಕ್ಕೂಟ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಕಾವೇರಿ ನೀರಿಗಾಗಿ ಒತ್ತಾಯಿಸಿ ಸೆ.29ರಂದು ಬಂದ್ ಕರೆ ಕೊಟ್ಟಿದ್ದರು. ಒಂದೇ ವಾರದಲ್ಲಿ ಎರಡು ಬಂದ್ ನಡೆಯುವ ಹಿನ್ನೆಲೆಯಲ್ಲಿ ಕುರುಬೂರು ಶಾಂತಕುಮಾರ್ ಅವರು ನಾಳಿನ ಬಂದ್​​ಗೆ ಬೆಂಬಲಿಸಬೇಕೆಂದು ಮನವಿ ಮಾಡಿದ್ದರು.‌ ಇಂದಿನ ಸಭೆಯಲ್ಲಿ ತೀರ್ಮಾನ ಮಾಡೋಣ ಎಂದು ವಾಟಾಳ್ ಭರವಸೆ‌ ನೀಡಿದ್ದರು. ಇದರಂತೆ ಇಂದು ಕನ್ನಡ ಹಾಗೂ‌ ರೈತಪರ ಸಂಘಟನೆಗಳ‌‌ ನಡುವೆ ನಗರದ ಖಾಸಗಿ ಹೊಟೇಲ್​​ನಲ್ಲಿ ಸಭೆ ನಡೆಯಿತು. ಸಭೆಯಲ್ಲಿ‌ ಎರಡು ಬಣಗಳ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಬೆಂಗಳೂರು ಬಂದ್ ಜೊತೆ ಕರ್ನಾಟಕ ಬಂದ್ ನಡೆಯುವುದು ನಿಶ್ಚಿತವಾಗಿದೆ.

ಇದನ್ನೂ ಓದಿ:ಕಾವೇರಿ ಕಿಚ್ಚು: ಎರಡು ಬಣಗಳ ನಡುವೆ ಮೂಡದ ಒಮ್ಮತ... ನಾಳೆ ಬೆಂಗಳೂರು, ಸೆ.29ಕ್ಕೆ ಕರ್ನಾಟಕ ಬಂದ್

ABOUT THE AUTHOR

...view details