ಕರ್ನಾಟಕ

karnataka

ETV Bharat / state

ಸಿಎಂ ಜನತಾ ದರ್ಶನ: ಜನರಿಂದ ಸಮಸ್ಯೆಗಳ ಸುರಿಮಳೆ, ಪರಿಹಾರಕ್ಕೆ ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚನೆ - ಜನಸ್ಪಂದನಾ ಕಾರ್ಯಕ್ರಮ

CM Siddaramaiah Janatha Darshana: ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಸಿಎಂ ಸಿದ್ದರಾಮಯ್ಯನವರ ಜನತಾ ದರ್ಶನ ಕಾರ್ಯಕ್ರಮ ನಡೆಯುತ್ತಿದೆ. ರಾಜ್ಯದೆಲ್ಲೆಡೆಯಿಂದ ಅಪಾರ ಸಂಖ್ಯೆಯ ಜನರು ಅಹವಾಲುಗಳನ್ನು ನೀಡಲು ಆಗಮಿಸಿದ್ದಾರೆ.

janatha  darshana
ಅಹವಾಲು ಸಲ್ಲಿಸಲು ಆಗಮಿಸಿದ ಜನತೆ

By ETV Bharat Karnataka Team

Published : Nov 27, 2023, 10:35 AM IST

Updated : Nov 27, 2023, 1:13 PM IST

ಸಿಎಂ ಜನತಾ ದರ್ಶನ

ಬೆಂಗಳೂರು:ಗೃಹ ಕಚೇರಿ ಕೃಷ್ಣಾದಲ್ಲಿ ಜನತಾ ದರ್ಶನ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ, ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುತ್ತಿದ್ದು, ಹಲವರಿಗೆ ಸ್ಥಳದಲ್ಲೇ ಪರಿಹಾರ ನೀಡುತ್ತಿದ್ದಾರೆ.

ವೃದ್ದಾಪ್ಯ ವೇತನ ಮಂಜೂರಾತಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎನ್ನುವ ದೂರುಗಳ ಹಿನ್ನೆಲೆಯಲ್ಲಿ, ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಇಲಾಖೆ ನಿರ್ದೇಶಕರನ್ನು ಕರೆಯಿಸಿ ತಾಂತ್ರಿಕ‌ ತೊಂದರೆ ಇದ್ದರೆ ತಕ್ಷಣ ಬಗೆಹರಿಸಿ. ಸಿಬ್ಬಂದಿಯಿಂದ ತೊಂದರೆ ಆಗುತ್ತಿದ್ದರೆ ಅವರ ಮೇಲೆ ಕ್ರಮ ಜರುಗಿಸಿ ಎಂದು ಸಿಎಂ ಸೂಚನೆ ನೀಡಿದರು.

ಮನೆ ಕಂದಾಯ ಕಟ್ಟಿದ್ದರೂ ದುಪ್ಪಟ್ಟು ಪೆನಾಲ್ಟಿ ಹಾಕಿದ್ದಾರೆ. ಕಂದಾಯ ಕಟ್ಟಿದ ರಶೀದಿ ಇಟ್ಟುಕೊಂಡು ಬಿಬಿಎಂಪಿಗೆ ಹೋದರೆ ನಮಗೆ ಗೊತ್ತಿಲ್ಲ, ಹೋಗಿ ಸರ್ಕಾರಕ್ಕೆ ಕೇಳಿ ಎಂದು ಸಿಬ್ಬಂದಿ ದರ್ಪದಿಂದ ನಡೆದುಕೊಳ್ಳುತ್ತಾರೆ ಎಂದು ವೃದ್ದೆಯೊಬ್ಬರು ಅಳಲು ತೋಡಿಕೊಂಡರು‌. ಇದಕ್ಕೆ ಗರಂ ಆದ ಮುಖ್ಯಮಂತ್ರಿ, ಬಿಬಿಎಂಪಿ ಅಧಿಕಾರಿಯನ್ನು ಕರೆದು ಪ್ರಕರಣವನ್ನು ಖುದ್ದಾಗಿ ಗಮನಿಸಿ ಸಂಜೆಯೊಳಗೆ ಪರಿಹಾರ ಒದಗಿಸಿ ನನಗೆ ರಿಪೋರ್ಟ್ ಮಾಡಿ ಎಂದರು.

148 ಮಂದಿ ವಿಶೇಷಚೇತನರಿಂದ ಮೂರು ಚಕ್ರದ ವಾಹನಕ್ಕೆ ಬೇಡಿಕೆ ಇಟ್ಟರು. ಸಿ-ಡಾಕ್ ಸಂಸ್ಥೆಯಿಂದ ತರಬೇತಿ ಪಡೆದಿದ್ದರೂ ಎರಡು ವರ್ಷದಿಂದ ನೆರವು ನೀಡಿಲ್ಲ ಎಂದು ದೂರು ನೀಡಿದರು. ತರಬೇತಿ ಪಡೆದಿರುವ 98 ಮಂದಿಗೆ ಮುಂದಿನ 15 ದಿನಗಳ ಒಳಗೆ ಸಾಲ ಸೌಲಭ್ಯ ಒದಗಿಸಬೇಕು. ಉಳಿದವರಿಗೆ ತ್ರಿಚಕ್ರ ವಾಹನ ಕೊಡಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್​ ಅವರಿಗೆ ತಿಳಿಸಿದರು.

ಹುಣಸೂರಿನ‌ ಕಲ್ಲಹಳ್ಳಿ ಪಂಚಾಯ್ತಿಯ ಲಕ್ಷ್ಮೀಬಾಯಿ, ಅಲೆಮಾರಿ ಡೋಂಗ್ರಿ ಗೆರೆಸಿಯಾ ಸಮುದಾಯದವರಿಗೆ 40 ಮನೆಗಳು ಮಂಜೂರಾಗಿವೆ. ಇವರಿಗೆ ಮನೆ ಕಟ್ಟಲು ಮಂಜೂರಾತಿ ನೀಡುವಂತೆ ಮನವಿ ಮಾಡಿದರು. ಈ ಮನವಿ ಸ್ವೀಕರಿಸಿದ ಸಿಎಂ, ಅಲೆಮಾರಿ ಅಭಿವೃದ್ಧಿ ನಿಗಮದ ಎಂಡಿ ಅವರನ್ನು ಕರೆದು, ಅರ್ಜಿಯನ್ನು ಸಮಗ್ರವಾಗಿ ಪರಿಶೀಲಿಸಿ ಅಗತ್ಯ ಕ್ರಮ ವಹಿಸಿ ತಮಗೆ ವರದಿ ನೀಡಬೇಕು ಎಂದರು.

ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ನಸೀಮಾ ಬಾನು ಅವರು ಜಿಲ್ಲಾ ಪಂಚಾಯಿತಿ ತಮ್ಮ ಮನೆಯನ್ನು ಅಕ್ರಮವಾಗಿ ಪ್ರವೇಶ ಮಾಡಿರುವ ಬಗ್ಗೆ ದೂರು ಸಲ್ಲಿಸಿದರು. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಡಿ.ಪಿ.ಭಾಗ್ಯ ಅವರ ಮನೆ ಶೇ 60 ಹಾನಿಯಾಗಿದ್ದು ಶೇ 100ರಷ್ಟು ಪರಿಹಾರ ಒದಗಿಸಿಕೊಡುವಂತೆ ಮನವಿ ಸಲ್ಲಿಸಿದರು. ಈ ಮನವಿಗಳನ್ನು ಆದ್ಯತೆ ಮೇಲೆ ಪರಿಗಣಿಸಿ ಸಮಸ್ಯೆಯನ್ನು ಪರಿಶೀಲಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸಿಎಂ ಸೂಚನೆ ಕೊಟ್ಟರು.

ಅಹವಾಲು ಸ್ವೀಕರಿಸಲು ಒಟ್ಟು 20 ಕೌಂಟರ್‌ಗಳನ್ನು ಸ್ಥಾಪಿಸಲಾಗಿದೆ‌. ವಿಶೇಷಚೇತನರು ಮತ್ತು ಹಿರಿಯ ನಾಗರಿಕರಿಗೆ ಎರಡು ಕೌಂಟರ್‌ಗಳನ್ನು ಮೀಸಲಿರಿಸಲಾಗಿದೆ. ಸ್ವೀಕರಿಸಿದ ಅಹವಾಲುಗಳನ್ನು ಇಲಾಖಾವಾರು ವಿಂಗಡಿಸಿ ತಂತ್ರಾಂಶದಲ್ಲಿ ದಾಖಲಿಸಿ ಅರ್ಜಿದಾರರಿಗೆ ಸ್ವೀಕೃತಿ ಪತ್ರ ನೀಡಿದ ನಂತರ ಮುಖ್ಯಮಂತ್ರಿ ಅವರ ಅಹವಾಲುಗಳನ್ನು ಆಲಿಸಿ ಪರಿಹಾರ ಸೂಚಿಸುತ್ತಾರೆ. ಕೌಂಟರ್‌ಗಳಲ್ಲಿ ಜನರು ಸರತಿ ಸಾಲಿನಲ್ಲಿ ನಿಂತು ತಮ್ಮ ಅಹವಾಲುಗಳನ್ನು ಸಲ್ಲಿಸುತ್ತಿದ್ದಾರೆ.

ಜನಸ್ಪಂದನ ಕಾರ್ಯಕ್ರಮದಲ್ಲಿ ಅಹವಾಲು ನೀಡಲು ಆಗಮಿಸುವ ನಾಗರಿಕರು ತಮ್ಮ ಗುರುತಿಗಾಗಿ ಆಧಾರ್​ ಕಾರ್ಡ್​ ಅಥವಾ ಪಡಿತರ ಚೀಟಿ ತರಬೇಕಿದೆ. ಇದರಿಂದ ತಂತ್ರಾಂಶದಲ್ಲಿ ದಾಖಲಿಸುವ ಅರ್ಜಿಗಳ ಸ್ಥಿತಿಗತಿ ಪತ್ತೆಹಚ್ಚಲು ಅನುಕೂಲವಾಗಲಿದೆ.

ಸರ್ಕಾರದ ಎಲ್ಲ ಕಾರ್ಯದರ್ಶಿಗಳು, ಇಲಾಖಾ ಮುಖ್ಯಸ್ಥರು ಖುದ್ದು ಹಾಜರಿರುವಂತೆ ಹಾಗೂ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಎಲ್ಲಾ ಜಿಲ್ಲಾ/ಉಪವಿಭಾಗ/ತಾಲ್ಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಹಾಜರಿರುವಂತೆ ಈಗಾಗಲೇ ಸೂಚಿಸಲಾಗಿದೆ.

ಈ ನಿಟ್ಟಿನಲ್ಲಿ ಮುಖ್ಯಮಂತ್ರಿಯವರ ಗೃಹ ಕಚೇರಿಯಲ್ಲಿ ಕಳೆದ ಮೂರು ದಿನಗಳಿಂದ ಸಕಲ ಸಿದ್ಧತೆ ನಡೆಸಲಾಗುತ್ತಿದ್ದು, ಜನರಿಗೆ ಕುಡಿಯುವ ನೀರು, ಆಹಾರ ಹಾಗೂ ಶೌಚಾಲಯ ಮತ್ತು ಇತರ ವ್ಯವಸ್ಥೆಗಳನ್ನು ಸಜ್ಜುಗೊಳಿಸಲಾಗಿದೆ. ಭದ್ರತೆಗಾಗಿ ಇಬ್ಬರು ಡಿಸಿಪಿ, 3 ಎಸಿಪಿ, 10 ಪೊಲೀಸ್ ಇನ್ಸ್‌ಪೆಕ್ಟರ್, 15 ಪಿಎಸ್ಐ ಹಾಗೂ ಸುಮಾರು 550 ಪಿಸಿ, ಹೋಮ್​ ಗಾರ್ಡ್​ಗಳನ್ನು ನಿಯೋಜಿಸಲಾಗಿದೆ.

ಅಹವಾಲು ಸ್ವೀಕಾರ ಮತ್ತು ಪರಿಶೀಲನೆಗೆ 350 ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇತರೆ ಸಹಾಯಕ ಸಿಬ್ಬಂದಿ ಸೇರಿ ಒಟ್ಟು 1,000 ಅಧಿಕಾರಿ ಮತ್ತು ಸಿಬ್ಬಂದಿ ಕರ್ತವ್ಯನಿರತರಾಗಿದ್ದಾರೆ. ಆನ್​ಲೈನ್​ನಲ್ಲೂ ದೂರು ಸಲ್ಲಿಸಬಹುದು. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿಯೂ ಸಹ ಸಾರ್ವಜನಿಕರು ದೂರುಗಳನ್ನು ನೇರವಾಗಿ ಸಲ್ಲಿಸಲು ಅವಕಾಶವಿದೆ. ಹಾಗೆಯೇ 1902ಕ್ಕೆ ಕರೆ ಮಾಡಿಯೂ ಸಹ ಆನ್‌ಲೈನ್ ಮೂಲಕ ನೊಂದಾಯಿಸಿಕೊಳ್ಳಬಹುದು. ipgrs.Karnataka. gov.in ಮೂಲಕ ಜನತಾ ದರ್ಶನದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಿ.

ಇದನ್ನೂ ಓದಿ:ನಮ್ಮ ಕಾರ್ಯಕರ್ತರಿಗೆ ಬೆದರಿಕೆ, ಕಿರುಕುಳ ಎದುರಾದರೆ ತಕ್ಷಣ ಪಕ್ಷ ನೆರವಿಗೆ ಬರಲಿದೆ: ಬಿ.ವೈ.ವಿಜಯೇಂದ್ರ

Last Updated : Nov 27, 2023, 1:13 PM IST

ABOUT THE AUTHOR

...view details