ಬೆಂಗಳೂರು: ದೆಹಲಿಯಲ್ಲಿ ಜಿ20 ಶೃಂಗಸಭೆ ನಡೆಯುತ್ತಿರುವ ಹಿನ್ನೆಲೆ ರಾಷ್ಟ್ರಪತಿ ಏರ್ಪಡಿಸಿರುವ ಔತಣಕೂಟದಲ್ಲಿ ಭಾಗಿಯಾಗದಿರಲು ಸಿಎಂ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಜಿ20 ಶೃಂಗಸಭೆ ಹಿನ್ನೆಲೆ ಶನಿವಾರ ರಾಷ್ಟ್ರಪತಿಗಳಿಂದ ಔತಣಕೂಟ ಏರ್ಪಡಿಸಲಾಗಿದೆ. ಈ ಔತಣಕೂಟಕ್ಕೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಲಾಗಿದೆ. ಈ ಔತಣಕೂಟಕ್ಕೆ ಕಾಂಗ್ರೆಸ್ ಪಕ್ಷದ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಗೈರಾಗುತ್ತಿದ್ದಾರೆ. ಇತ್ತ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಕೂಡ ಔತಣಕೂಟಕ್ಕೆ ಹಾಜರಾಗದಿರಲು ನಿರ್ಧರಿಸಿದ್ದಾರೆ.
ರಾಷ್ಟ್ರಪತಿಗಳು ಶನಿವಾರ ಆಯೋಜಿಸಿರುವ ಜಿ20 ಔತಣಕೂಟಕ್ಕೆ ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಹ್ವಾನಿಸಲಾಗಿಲ್ಲ. ಮಲ್ಲಿಕಾರ್ಜುನ ಖರ್ಗೆ ಕ್ಯಾಬಿನೆಟ್ ಮಂತ್ರಿ ದರ್ಜೆಯನ್ನು ಹೊಂದಿದ್ದಾರೆ. ಇತರ ರಾಜಕೀಯ ಪಕ್ಷದ ನಾಯಕರಿಗೂ ಆಹ್ವಾನ ನೀಡಿಲ್ಲ ಎಂದು ಹೇಳಲಾಗಿದೆ. ಔತಣಕೂಟಕ್ಕೆ ಮಾಜಿ ಪ್ರಧಾನಿಗಳಾದ ಡಾ.ಮನಮೋಹನ್ ಸಿಂಗ್ ಹಾಗೂ ಹೆಚ್.ಡಿ.ದೇವೇಗೌಡರಿಗೂ ಆಹ್ವಾನ ನೀಡಲಾಗಿದೆ.
ಆದರೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಅನಾರೋಗ್ಯದ ಹಿನ್ನೆಲೆ ಔತಣಕೂಟದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಈಗಾಗಲೇ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದ ಅವರು, ಆರೋಗ್ಯ ಕಾರಣಗಳಿಂದಾಗಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮುಜಿ ಅವರು ಆಯೋಜಿಸಿರುವ ಜಿ20 ಔತಣಕೂಟದಲ್ಲಿ ನಾನು ಭಾಗವಹಿಸಲಾಗುತ್ತಿಲ್ಲ. ಈ ಬಗ್ಗೆ ಈಗಾಗಲೇ ಸರ್ಕಾರಕ್ಕೆ ತಿಳಿಸಿದ್ದೇನೆ. ಜಿ20 ಶೃಂಗಸಭೆಯು ಯಶಸ್ವಿಯಾಗಲಿ ಎಂದು ನಾನು ಬಯಸುತ್ತೇನೆ ಎಂದು ತಿಳಿಸಿದ್ದಾರೆ.