ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ವೇ ಪರಿಶೀಲನೆ ಬಳಿಕ ಸಿಎಂ ಪ್ರತಿಕ್ರಿಯೆ ಮಂಡ್ಯ/ಬೆಂಗಳೂರು:ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ 151.81 ಕೋಟಿ ರೂ.ಗಳ ವೆಚ್ಚದಲ್ಲಿ ಹೆಚ್ಚುವರಿ ಕಾಮಗಾರಿ ಕೈಗೊಳ್ಳಲಾಗುವುದು. ನವೆಂಬರ್ ತಿಂಗಳ ನಂತರ ಈ ಕೆಲಸ ಪ್ರಾರಂಭವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿರು ಹಿನ್ನೆಲೆಯಲ್ಲಿ ಇಂದು ಸಿಎಂ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಎಕ್ಸ್ಪ್ರೆಸ್ ವೇನಲ್ಲಿ ಸ್ಪೀಡ್ ಡಿಟೆಕ್ಟರ್ಗಳನ್ನು ಅಳವಡಿಸಿರಲಿಲ್ಲ. ಹಾಗಾಗಿ ಅಪಘಾತಗಳು ಹೆಚ್ಚಾಗುತ್ತಿದ್ದವು. ಜುಲೈ ತಿಂಗಳಲ್ಲಿ ಅಪಘಾತಗಳು ಕಡಿಮೆ ಆಗಿವೆ. ಜೂನ್ ತಿಂಗಳಲ್ಲಿ 20 ಅಪಘಾತಗಳಾಗಿದ್ದರೆ, ಜುಲೈನಲ್ಲಿ 5 ಅಪಘಾತಗಳು ಸಂಭವಿಸಿವೆ. ಸ್ಪೀಡ್ ಡಿಟೆಕ್ಟರ್ಗಳನ್ನು ಪ್ರತಿ 10 ಕಿಮೀ ಅಂತರದಲ್ಲಿ ಅಳವಡಿಸಿದರೆ ಅಪಘಾತಗಳನ್ನು ಕಡಿಮೆ ಮಾಡಲು ಸಾಧ್ಯ ಎಂದರು.
ಮುಖ್ಯ ಕಾರ್ಯದರ್ಶಿಗಳು ಎನ್ಹೆಚ್ಎಐ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ನನ್ನ ಅಧ್ಯಕ್ಷತೆಯಲ್ಲಿಯೂ ಸಭೆ ನಡೆಯಲಿದೆ. ಎಕ್ಸ್ಪ್ರೆಸ್ ವೇಯಲ್ಲಿ ಕೆಲವು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಅದಕ್ಕಾಗಿಯೇ ಕಾಮಗಾರಿ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಸರ್ವಿಸ್ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ ಬೈಪಾಸ್ ರಸ್ತೆಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಪ್ರವೇಶ ಮತ್ತು ನಿರ್ಗಮನ ರಸ್ತೆಗಳನ್ನು ಮಾರ್ಚ್ ತಿಂಗಳೊಳಗೆ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ ಎಂದು ಸಿಎಂ ತಿಳಿಸಿದರು.
ಟೋಲ್ ಸಂಗ್ರಹದ ಬಗ್ಗೆ ಕೇಂದ್ರ ಹೆದ್ದಾರಿ ಸಚಿವರೊಂದಿಗೆ ಚರ್ಚೆ: ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳದೇ ಟೋಲ್ ಸಂಗ್ರಹ ಆಗುತ್ತಿರುವ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಟೋಲ್ ಸಂಗ್ರಹವನ್ನು ಎನ್ಹೆಚ್ಎಐ ಅವರು ಮಾಡುತ್ತಾರೆ. ದೆಹಲಿಗೆ ತೆರಳಿದಾಗ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು.
ಉಡುಪಿ ಪ್ರಕರಣದಲ್ಲಿ ಕಾನೂನು ಪ್ರಕಾರ ಕ್ರಮ: ಉಡುಪಿ ಕಾಲೇಜು ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಈಗಾಗಲೇ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ. ಸೂಕ್ತ ತನಿಖೆ ನಡೆಸಿ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. ಇದೇ ವೇಳೆ ಮಂಡ್ಯದ ಹೊರವಲಯದ ಉಮ್ಮಡಹಳ್ಳಿ ಗೇಟ್ ಬಳಿ ಸ್ಪೀಡ್ ಡಿಟೆಕ್ಟರ್ ನಿರ್ಮಾಣಕ್ಕೂ ಸಿಎಂ ಸಿದ್ಧರಾಮಯ್ಯ ಚಾಲನೆ ನೀಡಿದರು.
ಎಕ್ಸ್ಪ್ರೆಸ್ವೇ ಪರಿಶೀಲನೆ ಸಂದರ್ಭದಲ್ಲಿ ಸಚಿವ ಚಲುವನಾರಾಯಣಸ್ವಾಮಿ, ಸಂಚಾರಿ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಹಾಗೂ ಇತರ ಅಧಿಕಾರಿಗಳು ಇದ್ದರು. ಅಪಘಾತ ತಡೆಗೆ ಪೊಲೀಸ್ ಇಲಾಖೆ ತೆಗೆದುಕೊಂಡ ಕ್ರಮಗಳು, ಅತಿ ವೇಗದ ಚಾಲನೆ ಗುರುತಿಸಿ ಸಂಚಾರ ನಿಯಮ ಉಲ್ಲಂಘನೆಗೆ ದಂಡ ಹಾಕಲು ಕ್ಯಾಮರಾಗಳ ಅಳವಡಿಕೆ ಕುರಿತಂತೆಯೂ ಸಿಎಂ ಪರಿಶೀಲಿಸಿದರು. ಕ್ಯಾಮರಾ ಅಳವಡಿಕೆ ಬಳಿಕ ಅಪಘಾತಗಳು ಇಳಿಮುಖ ಆಗಿರುವುದು ಸೇರಿದಂತೆ ಹಲವು ಮಾಹಿತಿಯನ್ನು ಅಧಿಕಾರಿಗಳು ನೀಡಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕೂಡ ಹಾಜರಿದ್ದರು.
ಇದನ್ನೂ ಓದಿ:ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ ವೇಯಲ್ಲಿ ಅಪಘಾತ ಹೆಚ್ಚಳ: ಇಂದು ಸಿಎಂ ಸಿದ್ದರಾಮಯ್ಯ ಪರಿಶೀಲನೆ