ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ಬೆಂಗಳೂರು ನಗರ ರಸ್ತೆ ಸುರಕ್ಷತಾ ಸಮಿತಿ ಹಾಗೂ ಸಂಚಾರಿ ಪೊಲೀಸ್ ಇಲಾಖೆ ವತಿಯಿಂದ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಮಕ್ಕಳಿಂದ ಪಥಸಂಚಲನ ಹಾಗೂ ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಪುಸ್ತಕ ಹಾಗೂ ಪೋಸ್ಟರ್ಗಳನ್ನ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ''ಚಿಕ್ಕ ವಯಸ್ಸಿನಿಂದಲೇ ಕಾನೂನು ಪಾಲನೆಯ ಕುರಿತು ಅರಿತುಕೊಳ್ಳಬೇಕು ಎಂಬ ಕಾರಣದಿಂದ ನಿಮ್ಮೆಲ್ಲರನ್ನು ಕರೆಸಿ ಈ ರಾಷ್ಟ್ರೀಯ ಸುರಕ್ಷತಾ ಸಪ್ತಾಹವವನ್ನು ಆಯೋಜಿಸಲಾಗಿದೆ. ನಮ್ಮ ಕಾಲಕ್ಕಿಂತಲೂ ಅತ್ಯಾಧುನಿಕ ತಂತ್ರಜ್ಞಾನ ಇಂದು ನಿಮ್ಮ ಮುಂದಿದೆ. ಆರ್ಟಿಫಿಶಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನವನ್ನ ರಸ್ತೆ ಸುರಕ್ಷತೆ, ಸಂಚಾರ ವ್ಯವಸ್ಥೆಯಲ್ಲಿ ಹೇಗೆ ಬಳಸಬಹುದು ಎಂಬ ವಿಡಿಯೋ ತುಣುಕನ್ನ ಇಂದು ನಾನು, ಮಾನ್ಯ ಮುಖ್ಯಮಂತ್ರಿಗಳು, ಗೃಹ ಸಚಿವರು ಹಾಗೂ ಸಾರಿಗೆ ಸಚಿವರು ಗಮನಿಸಿದ್ದೇವೆ'' ಎಂದರು.
''ಅಲ್ಲದೇ ರಸ್ತೆ ಸಂಚಾರಿ ನಿಯಮಗಳನ್ನ ನಾವು ಪಾಲಿಸದಿದ್ದರೆ ಎಷ್ಟು ಅವಘಡಗಳಾಗಬಹುದು ಎಂಬುದಕ್ಕೆ ಸಾಕಷ್ಟು ದಾಖಲೆಗಳು ನಮ್ಮ ಮುಂದಿವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ಪ್ರಕಾರ 2023ರಲ್ಲಿ ರಸ್ತೆ ಅಪಘಾತಗಳಲ್ಲಿ ದ್ವಿಚಕ್ರ ವಾಹನ ಸವಾರರೇ ಹೆಚ್ಚು ಪ್ರಾಣ ಕಳೆದುಕೊಂಡಿದ್ದಾರೆ. ಹೆಚ್ಚಿನವರು ಯುವಕರೇ ಆಗಿದ್ದಾರೆ. ಆದ್ದರಿಂದ ಜೀವವನ್ನ ಕಳೆದುಕೊಳ್ಳುವ ಮುನ್ನ ಕಾಪಾಡಿಕೊಳ್ಳಬೇಕು'' ಎಂದು ಅವರು ತಿಳಿಸಿದರು.