ಬೆಂಗಳೂರು: ''ರಾಜಕೀಯ ಉದ್ದೇಶದಿಂದ ಉತ್ತರ ಕನ್ನಡ ಸಂಸದರಾದ ಅನಂತ ಕುಮಾರ್ ಹೆಗಡೆಯವರು ಬಳಸಿದ ಭಾಷೆ ಅವರ ಸಂಸ್ಕೃತಿಯನ್ನು ಬಿಂಬಿಸುತ್ತದೆ'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ತಾವು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ವಿಡಿಯೋದೊಂದಿಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸಿಎಂ, ''ಕೇಂದ್ರದ ಮಂತ್ರಿಯಾಗಿದ್ದಾಗ, ಸಂವಿಧಾನವನ್ನೇ ಬದಲಾಯಿಸುತ್ತೇನೆ ಎಂದು ಹೇಳಿದ್ದ ಅನಂತ ಕುಮಾರ್ ಹೆಗಡೆ ಅವರಿಂದ ಉತ್ತಮ ಸಂಸ್ಕೃತಿಯನ್ನು ಅಪೇಕ್ಷಿಸಲು ಸಾಧ್ಯವೇ?'' ಎಂದು ಪ್ರಶ್ನಿಸಿದ್ದಾರೆ.
ಅನಂತ ಕುಮಾರ್ ಹೆಗಡೆ ಹೇಳಿಕೆ:ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ ಶನಿವಾರ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಸಂಸದ ಅನಂತ ಕುಮಾರ್ ಹೆಗಡೆ, ಅಂದು ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ವೇಳೆ ಗೋ ಹತ್ಯೆ ನಿಷೇಧದ ಬಗ್ಗೆ ದೊಡ್ಡ ಆಂದೋಲನ ನಡೆದಿತ್ತು. ಈ ಆಂದೋಲನದಲ್ಲಿ ಗೋಲಿಬಾರ್ ಆಗಿ ಹತ್ತಾರು ಸಂತರೂ ಸತ್ತರು. ಇಂದಿರಾಗಾಂಧಿ ಸಮ್ಮುಖದಲ್ಲಿ ಈ ಹತ್ಯೆ ನಡೆಯಿತು ಎಂದಿದ್ದರು.
ಅಲ್ಲದೇ, ಕೆಲವರು ಜಾತಿ, ಭಾಷೆ, ಪ್ರಾದೇಶಿಕ ಇತರ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತಿದ್ದಾರೆ. ಈಗಲೂ ಅದೇ ಕೆಲಸ ನಡೆಯುತ್ತಿದೆ. ಆದರೂ ಕೂಡ ಸಮಾಜ ಒಟ್ಟಿಗೆ ನಿಂತಿದೆ. ಹೀಗಾಗಿ ಈಗಿನ ಗೆಲುವನ್ನು ಮುಂದಿನ ಶತಮಾನದಲ್ಲೂ ನೆನೆಯುವಂತಿರಬೇಕು. ಅಮಿತ್ ಶಾ ಅವರು ಹೇಳಿರುವಂತೆ ಈ ಬಾರಿಯ ಗೆಲುವು ಮುಂದಿನ ದಿನಗಳಲ್ಲಿ ಅಳಿಸಲು ನಮ್ಮಿಂದಲೂ ಆಗಬಾರದು. ಗೆಲುವಿನ ಹೊಡೆತ ನಮ್ಮ ವಿರೋಧಿಗಳಿಗೆ ಆಗಬೇಕು ಎಂದು ಅನಂತ ಕುಮಾರ್ ಹೇಳಿದ್ದಾರೆ.
ನಮ್ಮ ವಿರೋಧ ಕಾಂಗ್ರೆಸ್ ಅಲ್ಲ. ಆದರೆ, ನಮ್ಮ ವಿರೋಧಿ ಸಿದ್ದರಾಮಯ್ಯ. ಪ್ರಜಾಪ್ರಭುತ್ವದಲ್ಲಿ ಪಕ್ಷ ಅಧಿಕಾರಕ್ಕೆ ಬರುವುದು, ಕಳೆದುಕೊಳ್ಳುವುದು ಸಾಮಾನ್ಯ. ರಾಮ ಜನ್ಮಭೂಮಿ ಆಮಂತ್ರಣ ಬರದಿದ್ದಾಗ, ಸಿದ್ದರಾಮಯ್ಯ ಅವರು ತಮಗೆ ಆಹ್ವಾನ ಬಂದಿಲ್ಲ ಎಂದ್ರು. ಬಳಿಕ ಆಮಂತ್ರಣ ಬಂದಮೇಲೂ ಅಯೋಧ್ಯೆಗೆ ಹೋಗಲ್ಲ ಅಂದಿದ್ರು. ಇದೀಗ, ಅಯೋಧ್ಯೆಗೆ ಹೋಗುತ್ತೇನೆ, ಆದರೆ ಜನವರಿ 22ಕ್ಕೆ ಹೋಗುವುದಿಲ್ಲ. ಆಮೇಲೆ ಹೋಗುತ್ತೇನೆ ಎಂದಿದ್ದಾರೆ ಎಂದು ಅನಂತ ಕುಮಾರ್ ವಾಗ್ದಾಳಿ ನಡೆಸಿದ್ದರು.
ಇದನ್ನೂ ಓದಿ:ರಾಮಮಂದಿರ ಉದ್ಘಾಟನೆಯನ್ನು ಬಿಜೆಪಿಯವರು ರಾಜಕೀಯವಾಗಿ ಬಳಸಿಕೊಳ್ಳಲು ಮುಂದಾಗಿದ್ದಾರೆ: ಸಿಎಂ ಸಿದ್ದರಾಮಯ್ಯ
ಇನ್ನು ಹುಬ್ಬಳ್ಳಿಯಲ್ಲಿ ಮಾತನಾಡಿದ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ, ನಾವು ಎಲ್ಲ ದೇವರಗಳನ್ನು ನಂಬುತ್ತೇವೆ ಮತ್ತು ಗೌರವದಿಂದ ಕಾಣುತ್ತೇವೆ. ಶ್ರೀರಾಮನನ್ನೂ ಪ್ರೀತಿಯಿಂದ ಗೌರವರಿಸುತ್ತೇವೆ. ದೇವರೆಂದು ಒಪ್ಪಿಕೊಂಡಿದ್ದು, ಹಿಂದೂ ಧರ್ಮದಲ್ಲಿ ಅದರ ಸ್ಥಾನವೂ ಇದೆ. ಆದರೆ, ಬಿಜೆಪಿಯವರು ರಾಮನ ಹೆಸರಲ್ಲಿ ರಾಜಕೀಯ ಲಾಭ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ'' ಎಂದಿದ್ದರು.