ಬೆಂಗಳೂರು :ರಾಜ್ಯವಿಧಾನಸಭಾ ಚುನಾವಣೆ 2023 ರ ಫಲಿತಾಂಶ ಪ್ರಕಟವಾಗಿ ಪೂರ್ಣ ಪ್ರಮಾಣದ ಸಚಿವ ಸಂಪುಟವೂ ಅಸ್ತಿತ್ವಕ್ಕೆ ಬಂದಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ನೂತನ ಸಚಿವರಿಗೆ ಹೊಸ ಗುರಿಗಳನ್ನು ನೀಡಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಈ ಗುರಿಗಳನ್ನು ನೀಡಲಾಗಿದೆ.
ನಾಡಿನ ಜನತೆ ಅಭೂತಪೂರ್ವ ಬಹುಮತದಿಂದ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ನಮಗೆ ಬಹಳ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ಜನಪರ ಆಡಳಿತ ನೀಡಬೇಕಾದ ಹೊಣೆಗಾರಿಕೆ ನಮ್ಮ ಮೇಲಿದೆ. ಜನರ ಸಮಸ್ಯೆಗಳನ್ನು ಕೇಳಿಸಿಕೊಳ್ಳಿ. ತಮ್ಮ ತಮ್ಮ ಕ್ಷೇತ್ರದಲ್ಲೇ ಸಮಸ್ಯೆ ಬಗೆಹರಿಸಲು ಬೇಕಾದ ಕ್ರಿಯಾಶೀಲತೆ ರೂಢಿಸಿಕೊಳ್ಳಿ. ಸಣ್ಣ ಪುಟ್ಟ ಕೆಲಸಗಳಿಗೂ ಕ್ಷೇತ್ರದ ಜನ ಸರ್ಕಾರಿ ಕಚೇರಿಗಳಿಗೆ ಪದೇ ಪದೆ ಅಲೆಯುವುದನ್ನು ತಪ್ಪಿಸಿ. ಜನರು ತಮ್ಮ ಕೆಲಸಗಳನ್ನು ಪೂರೈಸಿಕೊಳ್ಳಲು ಬಸ್ಸು, ರೈಲು ಹತ್ತಿಕೊಂಡು ವಿಧಾನಸೌಧಕ್ಕೆ ಬರುವ ಹೊರೆ ತಪ್ಪಿಸಿ ಎಂದು ಸಿಎಂ ಸಿದ್ದರಾಮಯ್ಯ ಶಾಸಕರಿಗೆ ಸೂಚಿಸಿದ್ದಾರೆ.
ಒಂದು ವರ್ಷದಲ್ಲಿ ಲೋಕಸಭಾ ಚುನಾವಣೆ ಬರಲಿದೆ. ನಾವು ಕನಿಷ್ಠ 20 ಲೋಕಸಭಾ ಕ್ಷೇತ್ರಗಳನ್ನು ಗೆದ್ದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮತ್ತು ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರಿಗೆ ಉಡುಗೊರೆ ನೀಡಬೇಕು. ಈ ಗುರಿ ಇಟ್ಟುಕೊಂಡು ಶ್ರದ್ದೆ, ಪ್ರಾಮಾಣಿಕತೆ ಹಾಗೂ ಚುರುಕಾಗಿ ಜವಾಬ್ದಾರಿ ನಿರ್ವಹಿಸಿ ಎಂದು ಸಚಿವರಿಗೂ ಮನವರಿಕೆ ಮಾಡಿಸಿದ್ದಾರೆ.
ನಾವು ಚುನಾವಣೆ ಪೂರ್ವದಲ್ಲಿ ನೀಡಿರುವ ಗ್ಯಾರಂಟಿಗಳು ಜನರಿಗೆ ಸಮರ್ಪಕವಾಗಿ ತಲುಪುವಂತೆ ಪ್ರಾಮಾಣಿಕವಾಗಿ ಶ್ರಮಿಸಬೇಕು. ಹಿಂದಿನ ಬಾರಿಯ ತಪ್ಪುಗಳು ಈ ಬಾರಿ ಮರುಕಳಿಸಬಾರದು. ಖಾತೆ ಹಂಚಿಕೆ ಸದ್ಯದಲ್ಲೇ ಪೂರ್ಣಗೊಳ್ಳಲಿದೆ. ನೀವೆಲ್ಲ ಸಕ್ರಿಯರಾಗಿ. ಪ್ರತಿಪಕ್ಷದಲ್ಲಿದ್ದಾಗ ನಾವು ನಡೆಸಿದ ಹೋರಾಟದ ಫಲವಾಗಿ ಜನತೆ ಬಿಜೆಪಿಯ ದುರಾಡಳಿತವನ್ನು ತಿರಸ್ಕರಿಸಿ ನಮ್ಮ ಕೈ ಹಿಡಿದಿದ್ದಾರೆ.