ಬೆಂಗಳೂರು:ಪಟ್ಟಾಭಿಷೇಕದ ಬಳಿಕ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಡಿಸಿಎಂ ಡಿಕೆಶಿವಕುಮಾರ್ ಹಾಗೂ ನೂತನ ಮಂತ್ರಿಗಳ ಸಮ್ಮುಖದಲ್ಲಿ ವಿಧಾನಸೌಧದಲ್ಲಿ ನಡೆದ ಮೊದಲ ಸಂಪುಟ ಸಭೆಯಲ್ಲಿ ಬಹುನಿರೀಕ್ಷಿತ ಐದೂ ಗ್ಯಾರಂಟಿಗಳಿಗೆ ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಆದರೆ, ಉಚಿತ ಗ್ಯಾರಂಟಿಗಳ ರೂಪುರೇಷೆಯನ್ನು ಚರ್ಚಿಸಿ ಆ ಬಳಿಕ ಜಾರಿ ಮಾಡಲಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಇದೇ ವೇಳೆ ತಿಳಿಸಿದರು.
ಆ ಮೂಲಕ ಉಚಿತ ಯೋಜನೆಗಳ ಅನುಷ್ಠಾನ ಇನ್ನೂ ವಿಳಂಬವಾಗಲಿದೆ. ಪ್ರಮಾಣವಚನ ಬಳಿಕ ವಿಧಾನಸೌಧಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ತಮ್ಮ ನೇತೃತ್ವದಲ್ಲಿ ಮೊದಲ ಸಚಿವ ಸಂಪುಟ ಸಭೆ ನಡೆಸಿದರು. ಸಂಪುಟ ಸಭೆಯಲ್ಲಿ ತಮ್ಮ ಆಶ್ವಾಸನೆಯಂತೆ ಐದು ಗ್ಯಾರಂಟಿಗಳಿಗೆ ತಾತ್ವಿಕ ಅನುಮೋದನೆ ನೀಡಿದೆ.
ಕುಟುಂಬದ ಮಹಿಳೆಗೆ ಪ್ರತಿ ತಿಂಗಳು 2,000 ನೀಡುವ ಗೃಹಲಕ್ಷ್ಮಿ ಯೋಜನೆ, ಪ್ರತಿ ತಿಂಗಳು ಗೃಹ ಬಳಕೆಯ 200 ಯುನಿಟ್ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ, ಪದವೀಧರರಿಗೆ 3,000 ಹಾಗೂ ಡಿಪ್ಲೋಮಾ ಪದವೀಧರರಿಗೆ 1,500 ನೀಡುವ ಯುವನಿಧಿ ಯೋಜನೆ, ರಾಜ್ಯದ ಮಹಿಳೆಯರಿಗೆ ಉಚಿತ ಸರ್ಕಾರಿ ಬಸ್ ಪ್ರಯಾಣ ಹಾಗೂ ಬಿಪಿಎಲ್ ಕಾರ್ಡ್ದಾರರಿಗೆ 10 ಕೆ.ಜಿ. ಅನ್ನಭಾಗ್ಯ ಯೋಜನೆಯ ಒಟ್ಟು ಐದು ಗ್ಯಾರಂಟಿಗಳಿಗೆ ತಾತ್ವಿಕ ಸಮ್ಮತಿ ನೀಡಲಾಯಿತು ಎಂದು ತಿಳಿಸಿದರು.
ಮುಂದಿನ ಕ್ಯಾಬಿನೆಟ್ನಲ್ಲಿ ತೀರ್ಮಾನಿಸಿ ಜಾರಿ:ಈ ಗ್ಯಾರಂಟಿಗಳ ಖರ್ಚು, ವೆಚ್ಚ, ಸ್ಪಷ್ಟ ಲೆಕ್ಕಾಚಾರ, ರೂಪುರೇಷೆಯನ್ನು ಲೆಕ್ಕ ಹಾಕಿದ ಬಳಿಕ ಆದೇಶ ಹೊರಡಿಸಲಾಗುವುದು. ಐದೂ ಗ್ಯಾರಂಟಿಗಳಿಗೆ ಅಂದಾಜು ಸುಮಾರು 50,000 ಸಾವಿರ ಕೋಟಿ ರೂ. ಆಗುವ ಸಾಧ್ಯತೆ ಇದೆ. ಗೃಹ ಜ್ಯೋತಿ ಯೋಜನೆಗಾಗಿ ಒಂದು ತಿಂಗಳಿಗೆ ಅಂದಾಜು 1,200 ಕೋಟಿ ರೂ. ವೆಚ್ಚ ಆಗುವ ಸಾಧ್ಯತೆ ಇದೆ. ಕುಟುಂಬದ ಮಹಿಳೆಗೆ ಪ್ರತಿ ತಿಂಗಳು 2,000 ನೀಡುವ ಗೃಹಲಕ್ಷ್ಮಿ ಯೋಜನೆ ಜಾರಿ ಮಾಡುತ್ತೇವೆ. ಖರ್ಚು ವೆಚ್ಚ ಬಗ್ಗೆ ನಾವು ಚರ್ಚೆ ಮಾಡಿ ಮುಂದಿನ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.
ಕೇವಲ ಎರಡು ವರ್ಷದವರೆಗೆ ನಿರುದ್ಯೋಗಿ ಪದವೀಧರಿಗೆ 3 ಸಾವಿರ, ಡಿಪ್ಲೋಮಾ ವಿದ್ಯಾರ್ಥಿಗಳಿಗೆ 1,500 ರೂ., ಕರ್ನಾಟಕದ ಮಹಿಳೆಯರಿಗೆ ಮಾತ್ರ ಅನ್ವಯವಾಗುವಂತೆ ಉಚಿತ ಬಸ್ ಪಾಸ್ ನೀಡಲಿದ್ದೇವೆ. ಇದರ ರೂಪುರೇಷೆ ಚರ್ಚಿಸಿ ಆಮೇಲೆ ಜಾರಿ ಮಾಡುತ್ತೇವೆ. ಇಂದು ತಾಂತ್ರಿಕವಾಗಿ ಎಲ್ಲದಕ್ಕೂ ಒಪ್ಪಿಗೆ ನೀಡಿದ್ದೇವೆ. ಆದೇಶದಲ್ಲಿ ಎಲ್ಲವನ್ನೂ ಸವಿವರವಾಗಿ ಚರ್ಚಿಸಿ ಆದೇಶ ಹೊರಡಿಸುತ್ತೇವೆ. ಮುಂದಿನ ಕ್ಯಾಬಿನೆಟ್ನಲ್ಲಿ ಐದೂ ಗ್ಯಾರಂಟಿಯನ್ನು ಜಾರಿ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಸಾಲ ಮಾಡದೇ ಗ್ಯಾರಂಟಿ ಜಾರಿ:ರಾಜ್ಯವನ್ನು ಸಾಲದ ಸುಳಿಯಲ್ಲಿ ಸಿಲುಕಿಸದೇ, ರಾಜ್ಯವನ್ನು ದಿವಾಳಿ ಮಾಡದೇ ಈ ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ. 3.25 ಲಕ್ಷ ಕೋಟಿ ರೂ. ಮೊತ್ತದ ಬಜೆಟ್ ಅನ್ನು ಜುಲೈನಲ್ಲಿ ಮಂಡಿಸಲಿದ್ದೇನೆ. ಅನಗತ್ಯ ವೆಚ್ಚ ಕಡಿತ, ಆದಾಯ ಸಂಗ್ರಹ ಹೆಚ್ಚಿಗೆ ಮಾಡುತ್ತೇವೆ ಎಂದು ಹೇಳಿದರು.
ಮೂರು ದಿನ ಅಧೀವೇಶನ:ಸೋಮವಾರ, ಮಂಗಳವಾರ, ಬುಧವಾರ ಮೂರು ದಿನಗಳ ಅಧಿವೇಶನ ಕರೆಯಲಾಗುವುದು. ಸ್ಪೀಕರ್ ಆಯ್ಕೆ, ಶಾಸಕರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಸಲಾಗುವುದು. ಮುಂದಿನ ವಾರದಲ್ಲೇ ಮತ್ತೊಂದು ಸಚಿವ ಸಂಪುಟ ಸಭೆ ಕರೆದು ಐದು ಗ್ಯಾರಂಟಿಗಳ ಬಗ್ಗೆ ಚರ್ಚಿಸಿ ಜಾರಿ ಬಗ್ಗೆ ತಿಳಿಸಲಾಗುವುದು ಎಂದು ಸಿದ್ದರಾಮಯ್ಯ ಅವರು ಹೇಳಿದರು. ಆರ್.ವಿ.ದೇಶಪಾಂಡೆ ಅವರನ್ನು ಹಂಗಾಮಿ ಸ್ಪೀಕರ್ ಆಗಿ ಆಯ್ಕೆ ಮಾಡುತ್ತೇವೆ. ಬಳಿಕ ಅಧೀವೇಶನದಲ್ಲಿ ನೂತನ ಸ್ಪೀಕರ್ ಆಯ್ಕೆ ನಡೆಯಲಿದೆ ಎಂದರು.