ಬೆಂಗಳೂರು:ರಾಜ್ಯ ಸಚಿವ ಸಂಪುಟ ವಿಸ್ತರಣೆ ಕಸರತ್ತು ನಡೆಯುತ್ತಿದೆ. ಆಕಾಂಕ್ಷಿಗಳ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಮೊದಲ ಹಂತದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಜೊತೆ ಒಟ್ಟು 8 ಸಚಿವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ಇವರಿಗೆ ವಿಧಾನಸೌಧ ಹಾಗೂ ವಿಕಾಸ ಸೌಧದಲ್ಲಿ ಕಚೇರಿಯನ್ನು ಈಗಾಗಲೇ ನೀಡಲಾಗಿದೆ. ಆದರೆ ಇದುವರೆಗೂ ಖಾತೆ ಹಂಚಿಕೆ ಆಗಿಲ್ಲ.
ಪ್ರಭಾವಿ ಖಾತೆಗಾಗಿ ಎಂಟು ಸಚಿವರು ಲಾಬಿ ನಡೆಸುತ್ತಿರುವ ಮಧ್ಯೆ ಬಾಕಿ ಉಳಿದಿರುವ 24 ಸ್ಥಾನಗಳಿಗೆ 80 ಕ್ಕೂ ಹೆಚ್ಚು ಹಿರಿ, ಕಿರಿಯ ಶಾಸಕರು ಪೈಪೋಟಿ ನಡೆಸುತ್ತಿದ್ದಾರೆ. ತೀವ್ರ ಹಗ್ಗಜಗ್ಗಾಟದ ಬಳಿಕ ಹಿರಿಯ ಶಾಸಕರು ವಿಧಾನಸಭಾಧ್ಯಕ್ಷ ಸ್ಥಾನ ಅಲಂಕರಿಸಲು ಒಪ್ಪದಿದ್ದಾಗ ಯುವ ನಾಯಕ ಯು.ಟಿ.ಖಾದರ್ ಹೆಗಲಿಗೆ ಜವಾಬ್ದಾರಿ ಹೊರಿಸಲಾಗಿದೆ.
ಸಿದ್ದರಾಮಯ್ಯ 2ನೇ ಹಂತದಲ್ಲಿ 20 ಶಾಸಕರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಜಾತಿ, ಪ್ರಾದೇಶಿಕ ಸಮತೋಲನವನ್ನು ಗಮನದಲ್ಲಿ ಇಟ್ಟುಕೊಂಡು ಈ ಸಂಪುಟ ವಿಸ್ತರಣೆ ನಡೆಯಲಿದೆ. ಇದಕ್ಕಿಂತಲೂ ಮುಖ್ಯವಾಗಿ ಇಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಆಪ್ತರೂ ಹಾಗೂ ಬೆಂಬಲಿಗರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಪರಿಸ್ಥಿತಿ ನಿಭಾಯಿಸುವ ಹೊಣೆಯನ್ನು ಹೈಕಮಾಂಡ್ ನಾಯಕರ ಹೆಗಲಿಗೆ ವಹಿಸಲು ತೀರ್ಮಾನಿಸಿರುವ ಸಿಎಂ ಹಾಗೂ ಡಿಸಿಎಂ ದೆಹಲಿಗೆ ತೆರಳಿದ್ದಾರೆ.
ಮುಂದಿನ ಎರಡು ದಿನ ಅವರು ದೆಹಲಿಯಲ್ಲೇ ತಂಗಲಿದ್ದು ಸಚಿವ ಸ್ಥಾನದ ಪಟ್ಟಿ ಅಂತಿಮಗೊಳಿಸಿಕೊಂಡೇ ಹಿಂದಿರುಗಲಿದ್ದಾರೆ. 24 ಸಚಿವ ಸ್ಥಾನವನ್ನು ಯಾರಿಗೆ ನೀಡಬೇಕು ಎಂಬ ಕುರಿತು ತಾವೇ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿರುವ ಹೈಕಮಾಂಡ್ ನಾಯಕರು ಪ್ರಮುಖ ಮುಖಂಡರನ್ನು ಇಲ್ಲಿಗೆ ಕರೆಸಿಕೊಂಡಿದ್ದಾರೆ. ನಾಳೆ ವಿವಿಧ ಹಂತಗಳಲ್ಲಿ ಸಮಾಲೋಚನೆ ನಡೆಯಲಿದ್ದು ಅಂತಿಮವಾಗಿ ಕೇಂದ್ರದ ಕಾಂಗ್ರೆಸ್ ನಾಯಕರು ಬಿಡುಗಡೆ ಮಾಡುವ ಪಟ್ಟಿಯ ಜೊತೆ ಸಿಎಂ ಹಾಗೂ ಡಿಸಿಎಂ ಆಗಮಿಸಲಿದ್ದಾರೆ ಎಂಬ ಮಾಹಿತಿ ಇದೆ.