ಜಂಟಿ ಮಾಧ್ಯಮಗೋಷ್ಟಿ ನಡೆಸಿದ ಸಿಎಂ ಹಾಗೂ ಡಿಸಿಎಂ ದೆಹಲಿ/ಬೆಂಗಳೂರು: ಕಾವೇರಿ ನೀರು ಹಂಚಿಕೆ ಸಂಬಂಧ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರ ಜತೆ ಸಭೆ ನಡೆಸಿದ್ದೇವೆ. ಸದ್ಯಕ್ಕೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಲ ಸಂಪನ್ಮೂಲ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಅವರಿಂದು ಜಂಟಿ ಮಾಧ್ಯಮಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ನಮ್ಮ ಸಂಕಷ್ಟದ ಪರಿಸ್ಥಿತಿಯನ್ನು ಕೇಂದ್ರ ಸಚಿವರಿಗೆ ಸಮರ್ಥವಾಗಿ ತಿಳಿಸಿದ್ದೇವೆ. ಅವರ ಸ್ಪಂದನೆ ಸಕಾರಾತ್ಮಕವಾಗಿತ್ತು. ನಾವು ಪ್ರಧಾನಿ ಸಮಯವನ್ನೂ ಕೇಳಿದ್ದೇವೆ. ಸಮಯ ಸಿಕ್ಕರೆ ಭೇಟಿ ಆಗುತ್ತೇವೆ. ನಾಲ್ಕೂ ರಾಜ್ಯದವರನ್ನು ಕರೆಸಿ ಮಾತನಾಡಲು ಮಧ್ಯ ಪ್ರವೇಶಿಸಿ ಎಂದು ಪ್ರಧಾನಿಗೆ ಮನವಿ ಮಾಡುತ್ತೇವೆ. ಕೇಂದ್ರ ಸಚಿವರಲ್ಲಿ ನಮಗೆ ಬೆಳೆ ರಕ್ಷಣೆ, ಕುಡಿಯುವ ನೀರು ಮತ್ತು ಕೈಗಾರಿಕೆಗಳಿಗೆ 106 ಟಿಎಂಸಿ ನೀರು ಅಗತ್ಯವಿದೆ. ಆದರೆ ನಮ್ಮ ನಾಲ್ಕೂ ಜಲಾಶಯಗಳಿಂದ ಕೇವಲ 51 ಟಿಎಂಸಿ ನೀರಿದೆ ಎನ್ನುವುದನ್ನು ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಸಿದ್ದೇವೆ ಎಂದರು.
123 ವರ್ಷಗಳಲ್ಲೇ ಅತ್ಯಂತ ಕಡಿಮೆ ಮಳೆ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಬಿದ್ದು ಜಲಾಶಯಗಳ ಒಳ ಹರಿವು ಇಲ್ಲವಾಗಿದೆ ಎಂದು ಸಚಿವರ ಗಮನ ಸೆಳೆದಿದ್ದೇವೆ. ನಮ್ಮ ರೈತರು ಮತ್ತು ನಾನಾ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಬಿಡುವುದಕ್ಕೆ ನಮ್ಮ ಬಳಿ ನೀರೇ ಇಲ್ಲ ಎಂದೂ ಹೇಳಿದ್ದೇವೆ. ಸುಪ್ರೀಂಕೋರ್ಟ್ ಗೂ ನಮ್ಮ ಸಂಕಷ್ಟದ ಪರಿಸ್ಥಿತಿಯನ್ನು ನಮ್ಮ ಲೀಗಲ್ ತಂಡ ಮನವರಿಕೆ ಮಾಡಿಸಲು ಯತ್ನಿಸುತ್ತಿದೆ. ನಾಲ್ಕೂ ಜಲಾಶಯಗಳ ಒಳ ಹರಿವು 11 ರಿಂದ 8 ಕ್ಯೂಸೆಕ್ಗೆ ಇಳಿದಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್‌ರನ್ನು ರಾಜ್ಯ ಪ್ರತಿನಿಧಿಸುವ ಕೇಂದ್ರದ ಸಚಿವರು ಹಾಗೂ ಸಂಸದರೊಂದಿಗೆ ಭೇಟಿ ಮಾಡಿ ಚರ್ಚಿಸಿದರು. ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಶೋಭಾ ಕರಂದ್ಲಾಜೆ, ರಾಜ್ಯದ ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ, ಕೃಷಿ ಸಚಿವ ಚಲುವರಾಯಸ್ವಾಮಿ, ಕಾನೂನು ಸಚಿವ ಎಚ್.ಕೆ.ಪಾಟೀಲ್, ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿಗಳಾದ ಟಿ.ಬಿ.ಜಯಚಂದ್ರ, ಪ್ರಕಾಶ್ ಹುಕ್ಕೇರಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಜಲ ಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ಜಯರಾಮ್, ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಸೇರಿ ಹಲವರು ಈ ಸಂದರ್ಭದಲ್ಲಿ ಇದ್ದರು.
ಇದನ್ನೂ ಓದಿ:ಕಾವೇರಿ ಜಲವಿವಾದದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಕಾರ; ಹೆಚ್ಚುವರಿ ನೀರು ಕೇಳಿದ ತಮಿಳುನಾಡು ಅರ್ಜಿಯೂ ವಜಾ