ಬೆಂಗಳೂರು:ವಿಧಾನಸಭಾ ಚುನಾವಣೆ ಸಂಧರ್ಭದಲ್ಲಿ ಕಾಂಗ್ರೆಸ್ ಪಕ್ಷ ಜನತೆಗೆ ನೀಡಿದ್ದ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ. ಈ ಕುರಿತು ಇಂದು ಅವರು ಎಲ್ಲ ಸಚಿವರ ಜತೆ ಸಮಾಲೋಚನೆ ನಡೆಸಲಿದ್ದು, ವಿಧಾನಸೌಧಕ್ಕೆ ಆಗಮಿಸಿದ್ದಾರೆ. ಈ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಟಾನದ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ. ಈ ಸಂಬಂಧ ರೂಪುರೇಷೆಗಳು ಹೊರ ಹೊಮ್ಮುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯುವ ಸಚಿವರುಗಳ ಸಭೆಯಲ್ಲಿ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಸಾಧಕ ಬಾಧಕಗಳ ಬಗ್ಗೆ ಚರ್ಚೆಗಳು ನಡೆಯಲಿವೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಐದು ಗ್ಯಾರಂಟಿ ಯೋಜನೆಗಳ ಮಾರ್ಗಸೂಚಿಗಳನ್ನು ಅಂತಿಮಗೊಳಿಸಿ ಜೂ. 1 ರಿಂದಲೇ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡುವ ಸಾಧ್ಯತೆಗಳಿವೆ.
ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಪ್ರತಿ ಮನೆಯ ಯಜಮಾನಿಗೆ ತಿಂಗಳಿಗೆ 2 ಸಾವಿರ ರೂ. ನೀಡುವ ಗೃಹಲಕ್ಷ್ಮಿ, ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್‌ನ ಗೃಹಜ್ಯೋತಿ, ಪಡಿತರ ವ್ಯವಸ್ಥೆಯಲ್ಲಿ ಪ್ರತಿ ವ್ಯಕ್ತಿಗೆ 10 ಕೆ.ಜಿ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆ ಜತೆಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣ ಯೋಜನೆ ಹಾಗೂ ನಿರುದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ಯೆ ನೀಡುವ ಯುವನಿಧಿ ಯೋಜನೆಯನ್ನು ಜಾರಿ ಮಾಡುವುದಾಗಿ ಘೋಷಣೆ ಮಾಡಿತ್ತು.
ಜೂನ್ 1 ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಐದು ಯೋಜನೆಗಳ ರೂಪುರೇಷೆಗಳು, ಮಾರ್ಗಸೂಚಿಗಳನ್ನು ಅಂತಿಮಗೊಳಿಸಲಾಗುತ್ತದೆ. ಮುಖ್ಯಮಂತ್ರಿ ಅವರು ಐದು ಇಲಾಖೆಯ ಮುಖ್ಯಸ್ಥರು ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಯೋಜನೆ ಅನುಷ್ಠಾನಕ್ಕೆ ವೆಚ್ಚವಾಗುವ ಹಣದ ಮಾಹಿತಿಯನ್ನು ಪಡೆದುಕೊಂಡಿದ್ದರು. ಈ ಸಭೆಯಲ್ಲಿ ಭಾಗಿಯಾಗಿದ್ದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಹಾಗೂ ಹಣಕಾಸು ಇಲಾಖೆಯ ಅಧಿಕಾರಿಗಳು ಈ ಐದು ಗ್ಯಾರಂಟಿ ಯೋಜನೆ ಜಾರಿಗೆ ವಾರ್ಷಿಕ 50 ಸಾವಿರ ಕೋಟಿ ರೂ. ಬೇಕಾಗುತ್ತದೆ ಎಂದು ಹೇಳಿದ್ದರು.