ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಗುತ್ತಿಗೆದಾರರ ಬಿಲ್ ಬಾಕಿ ಹಾಗೂ ಸಚಿವ ಚಲುವರಾಯಸ್ವಾಮಿ ವಿರುದ್ಧದ ದೂರಿನ ಪತ್ರದ ಬಗ್ಗೆ ಗಂಭೀರ ಚರ್ಚೆ ನಡೆಯಿತು. ಈ ವೇಳೆ ಗುತ್ತಿಗೆದಾರರ ಬಿಲ್ ಬಾಕಿ ಉಳಿದಿರೋದು ನಿಜ. ಕಾನೂನು ಪ್ರಕಾರ ಬಿಲ್ ಪಾವತಿ ಆಗುತ್ತಿದೆ. ಕೆಲವು ಕಡೆ ಕಾಮಗಾರಿಗಳು ಆಗಿಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಡಿಕೆಶಿ, ಗುತ್ತಿಗೆದಾರರು ಎಲ್ಲೆಲ್ಲಿ ಹೋಗ್ತಿದ್ದಾರೆ ಗೊತ್ತಿದೆ. ಅವರನ್ನು ಯಾರು ಛೂ ಬಿಟ್ಟಿದ್ದಾರೆ ಅನ್ನೋದು ಗೊತ್ತಿದೆ. ಕೆಲವು ಕಡೆ ಕಾಮಗಾರಿಗಳೇ ನಡೆದಿಲ್ಲ. ನಡೆಯದ ಕಾಮಗಾರಿಗೆ ಬಿಲ್ ಮಾಡಲಾಗಿದೆ. ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದೆ. ಅದಕ್ಕೆ ತನಿಖೆಗೆ ಕೊಟ್ಟಿರೋದು. ಆದರೆ ಬಿಜೆಪಿಯವರು ಇದನ್ನು ದೊಡ್ಡದು ಮಾಡ್ತಿದ್ದಾರೆ. ತನಿಖೆ ಆದ್ಮೇಲೆ ಎಲ್ಲರ ಹುಳುಕು ಹೊರಗೆ ಬರುತ್ತದೆ. ನಾವು ಅದರ ಬಗ್ಗೆ ಹೆಚ್ಚು ಗಮನ ಕೊಡೋದು ಬೇಡ. ತನಿಖೆ ನಡೆಯಲಿ, ಸತ್ಯಾಂಶ ಹೊರಗೆ ಬರಲಿ ಬಿಡಿ ಎಂದರು.
ಚಲುವರಾಯಸ್ವಾಮಿ ದೂರಿನ ಪತ್ರದ ಬಗ್ಗೆ ಚರ್ಚೆ: ಸಚಿವ ಸಂಪುಟ ಸಭೆಯಲ್ಲಿ, ಚಲುವರಾಯಸ್ವಾಮಿ ಮೇಲಿನ ಲಂಚದ ಆರೋಪ ವಿಚಾರವೂ ಪ್ರಸ್ತಾಪವಾಗಿದೆ. ಪ್ರತಿಪಕ್ಷಗಳು ನಮ್ಮನ್ನು ಪೇಚಿಗೆ ಸಿಲುಕಿಸೋಕೆ ಪ್ರಯತ್ನ ಮಾಡುತ್ತಿವೆ. ಕೆಲವು ಪ್ರಯತ್ನಗಳನ್ನು ಅವರು ಮಾಡುತ್ತಿದ್ದಾರೆ. ನಮ್ಮ ಗ್ಯಾರಂಟಿಗಳು ಅವರಿಗೆ ಇರುಸು ಮುರುಸಾಗಿವೆ. ಲೋಕಸಭಾ ಚುನಾವಣೆಗೆ ಇದರ ಲಾಭವಾಗಲಿದೆ. ಹಾಗಾಗಿಯೇ ಕೆದಕಿ ಕೆದಕಿ ಆರೋಪಿಸುತ್ತಿದ್ದಾರೆ. ಕೆಲವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಚಲುವರಾಯಸ್ವಾಮಿ ಕೂಡ ಟಾರ್ಗೆಟ್ ಆಗಿದ್ದಾರೆ. ಜೆಡಿಎಸ್ನವರು ಕಷ್ಟಕ್ಕೆ ಸಿಲುಕಿಸೋಕೆ ನೋಡುತ್ತಿದ್ದಾರೆ. ಮಂಡ್ಯ ಜಿಲ್ಲೆಗೆ ಸಂಬಂಧಿಸಿದಂತೆ ರಾಜಕೀಯ ಮಾಡ್ತಿದ್ದಾರೆ. ಅದಕ್ಕೆ ಚಲುವರಾಯಸ್ವಾಮಿನ ಟಾರ್ಗೆಟ್ ಮಾಡ್ತಿದ್ದಾರೆ ಎಂದು ಡಿಕೆಶಿ ವಿಷಯ ಪ್ರಸ್ತಾಪಿಸಿದರು.
ನಾನು ಚಲುವರಾಯಸ್ವಾಮಿ ಜೊತೆ ಮಾತನಾಡಿದ್ದೇನೆ. ಅವರು ನನ್ನೊಂದಿಗೆ ಎಲ್ಲಾ ಹೇಳಿಕೊಂಡಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಮಾತಿಗೆ ತಲೆಕೆಡಿಸಿಕೊಳ್ಳಬೇಡಿ. ಅವರು ಏನು ಬೇಕಾದ್ರೂ ಮಾತನಾಡಲಿ. ನೀವ್ಯಾರು ಸುಮ್ಮನೆ ಮಾತನಾಡಲು ಹೋಗಬೇಡಿ. ನಿಮ್ಮ ಇಲಾಖೆ ಕೆಲಸದ ಕಡೆ ಗಮನಕೊಡಿ. ರಾಜ್ಯದ ಜನರಿಗೆ ನಾವು ಉತ್ತಮ ಆಡಳಿತ ಕೊಡಬೇಕು. ಅದರ ಕಡೆ ಗಮನಹರಿಸಿ. ಲೋಕಸಭಾ ಚುನಾವಣೆಗೆ ಪಕ್ಷ ಕಟ್ಟಿ. ಉಳಿದಿದ್ದು ನಾವು ನೋಡಿಕೊಳ್ಳುತ್ತೇವೆ ಎಂದು ಸಚಿವರಿಗೆ ಸಿಎಂ ಸಿದ್ದರಾಮಯ್ಯ ಅಭಯ ನೀಡಿದರು.