ಕರ್ನಾಟಕ

karnataka

ETV Bharat / state

ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸ್ಪಂದಿಸುವ ಗುಣ ಇಲ್ಲದಿದ್ದರೆ ನ್ಯಾಯ ಒದಗಿಸಲು ಸಾಧ್ಯವಿಲ್ಲ: ಸಿದ್ದರಾಮಯ್ಯ - Bangalore Bar Association President

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್​ ಅವರು ನ್ಯಾಯಮೂರ್ತಿ ಬಿ. ವೀರಪ್ಪ‌ ಅವರ ಬೀಳ್ಕೋಡುಗೆ ಸಮಾರಂಭದಲ್ಲಿ ಭಾಗವಹಿಸಿದ್ದರು.

cm-siddaramaiah-attended-the-farewell-ceremony-of-justice-b-veerappa
ಸಮಾಜದ ಕಟ್ಟ ಕಡೆಯ ಮನುಷ್ಯನಿಗೆ ಸ್ಪಂದಿಸುವ ಗುಣ ಇಲ್ಲದಿದ್ದರೆ ಸಿಎಂ, ಸಿಜೆಯಿಂದಲೂ ಜನರಿಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲ: ಸಿದ್ದರಾಮಯ್ಯ

By

Published : May 31, 2023, 9:26 PM IST

ಬೆಂಗಳೂರು:ನಮಗೆ ಉನ್ನತ ಅವಕಾಶಗಳು ಸಿಕ್ಕಾಗ ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಂಡಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ. ಉತ್ತಮ ನ್ಯಾಯದಾನದ ಮೂಲಕ ನ್ಯಾಯಮೂರ್ತಿ ಬಿ. ವೀರಪ್ಪ ಅವರು ತಮ್ಮ ಬದುಕು ಮತ್ತು ವೃತ್ತಿಯನ್ನು ಸಾರ್ಥಕಗೊಳಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್​, ನ್ಯಾಯಮೂರ್ತಿ ಬಿ. ವೀರಪ್ಪ‌

ಬೆಂಗಳೂರು ವಕೀಲರ ಸಂಘವು ವಿಧಾನಸೌಧ ಬ್ಯಾಂಕ್ವೆಟ್ ಹಾಲ್​ನಲ್ಲಿ ಆಯೋಜಿಸಿದ್ದ ನ್ಯಾಯಮೂರ್ತಿ ಬಿ. ವೀರಪ್ಪ‌ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿ. ವೀರಪ್ಪ ಅವರು ಮುಖ್ಯ ನ್ಯಾಯಮೂರ್ತಿ ಆಗುವಾಗಲೂ ನಾನು ಮುಖ್ಯಮಂತ್ರಿ ಆಗಿದ್ದೆ. ಈಗ ಇವರ ನಿವೃತ್ತಿ‌ ಸಂದರ್ಭದಲ್ಲೂ ನಾನು ಮುಖ್ಯಮಂತ್ರಿ ಆಗಿರುವುದು ಸುಸಂದರ್ಭ. ನಮಗೆ ಉನ್ನತ ಸ್ಥಾನ ಸಿಕ್ಕಾಗ ಪ್ರಾಮಾಣಿಕವಾಗಿ ಜನಸೇವೆ ಮಾಡಿದರೆ ಆ ಸ್ಥಾನದ ಘನತೆ ಹೆಚ್ಚುತ್ತದೆ. ಸಮಾಜದ ಅರಿವಿದ್ದವರು, ಬದುಕನ್ನು ಅರ್ಥ ಮಾಡಿಕೊಂಡವರು, ಜನರ ಸಂಕಷ್ಟಗಳನ್ನು ಅನುಭವಿಸಿದ್ದವರು, ಆ ಬಗ್ಗೆ ಸಹಾನುಭೂತಿ ಹೊಂದಿದ್ದವರು ಮಾತ್ರ ಸಮಾಜಮುಖಿಯಾಗಿದ್ದು, ಉನ್ನತ ಸ್ಥಾನದ ಘನತೆ ಹೆಚ್ಚಿಸಬಲ್ಲರು ಎಂದು ಹೇಳಿದರು.

ಬಿ. ವೀರಪ್ಪ ಅವರು ದಕ್ಷತೆ, ಪ್ರಾಮಾಣಿಕತೆ ಜತೆಗೆ ವಕೀಲ ಸಮೂಹದ ಪ್ರೀತಿಯನ್ನೂ ಗಳಿಸಿದ್ದರು ಎನ್ನುವುದಕ್ಕೆ ಇಲ್ಲಿ ಸೇರಿರುವ ಅಪಾರ ವಕೀಲ ಸಮೂಹವೇ ಸಾಕ್ಷಿ. ದುರ್ಬಲ ವರ್ಗದವರಿಗೆ ಮೇಲಿನ ನ್ಯಾಯಾಲಯಗಳಿಗೆ ಹೋಗಲು ಸಾಧ್ಯವಿಲ್ಲ. ಆದ್ದರಿಂದ ಕೆಳ ಹಂತದಲ್ಲೇ ದುರ್ಬಲ ವರ್ಗಗಳಿಗೆ ನ್ಯಾಯ ಸಿಗುವಂತಾಗಬೇಕು. ಬಿ. ವೀರಪ್ಪ ಅವರು ಈ ದೃಷ್ಟಿಯಲ್ಲಿ ಮೌಲ್ಯಯುತವಾದ ತೀರ್ಪುಗಳನ್ನು ನೀಡಿದ್ದಾರೆ. ಇವು ಕಿರಿಯ ವಕೀಲರಿಗೆ ಮಾದರಿ ಆಗಿವೆ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್​, ನ್ಯಾಯಮೂರ್ತಿ ಬಿ. ವೀರಪ್ಪ‌

ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿ, ನ್ಯಾಯುಮೂರ್ತಿ ವೀರಪ್ಪ ಅವರು ಸುಮಾರು 20 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಿ ದಾಖಲೆ ನಿರ್ಮಾಣ ಮಾಡಿದ್ದಾರೆ. ಜೈಲಿಗೆ ಹೋಗಿ ಖೈದಿಗಳ ಜತೆ ಊಟ ಮಾಡಿ ಅವರ ಮನಪರಿವರ್ತನೆ ಮಾಡಿದ್ದನ್ನೂ ನೋಡಿದ್ದೇವೆ. ಜತೆಗೆ ಅಲ್ಲಿ ಖೈದಿಗಳ ಬಳಿ 'ನಿಮ್ಮನ್ನು ನೋಡಿ ವಿಧಾನಸೌಧದಲ್ಲಿರುವವರು ಕಲಿಯುವುದಿದೆ' ಎಂದು ಹೇಳಿದ್ದನ್ನು ನೋಡಿದ್ದೇವೆ ಎಂದು ಹೇಳಿದರು.

ನಾವು ಜೀವನದಲ್ಲಿ ಯಶಸ್ಸು ಕಾಣಬೇಕಾದರೆ, ಧರ್ಮರಾಯನ ಧರ್ಮತ್ವ, ಕರ್ಣನ ದಾನತ್ವ, ಅರ್ಜುನನ ಗುರಿ, ಭೀಮನ ಬಲ, ವಿಧುರನ ನೀತಿ ಹಾಗೂ ಕೃಷ್ಣನ ತಂತ್ರ ಇರಬೇಕು. ಇದೆಲ್ಲವೂ ವೀರಪ್ಪ ಅವರಲ್ಲಿದೆ. ಅದಕ್ಕೆ ಅವರು ಯಶಸ್ಸು ಸಾಧಿಸಿದ್ದಾರೆ. ವೀರಪ್ಪ ಅವರು ತಮ್ಮ ಜೀವನದಲ್ಲಿ ಕೊಟ್ಟಿರುವ ತೀರ್ಪುಗಳು ಜನರ ಬಾಳಿನಲ್ಲಿ ಸಕಾರಾತ್ಮಕ ಬದಲಾವಣೆ ತಂದಿದೆ. ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ. ಜನನ ಉಚಿತ, ಮರಣ ಖಚಿತ. ಈ ಹುಟ್ಟು ಸಾವಿನ ನಡುವೆ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ. ಅವರು ಮಾಡಿದ ಸೇವೆ, ಅವರು ಮಂಡಿಸಿದ ವಾದ ಪರಿಗಣಿಸಿ ಅವರನ್ನು ಉನ್ನತ ಸ್ಥಾನಕ್ಕೆ ಕೂರಿಸಲಾಗಿತ್ತು ಎಂದರು.

ಬೆಂಗಳೂರು ಅತ್ಯುತ್ತಮ ಗುಣಮಟ್ಟದ ಶಿಕ್ಷಣ, ನ್ಯಾಯ ವ್ಯವಸ್ಥೆ ಹೊಂದಿದೆ. ಈ ಕಾರಣಕ್ಕೆ ಬೆಂಗಳೂರಿನಲ್ಲಿ ನ್ಯಾಷನಲ್ ಸ್ಕೂಲ್ ಆಫ್ ಲಾ ಸ್ಥಾಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಲ್ಲಿರುವ ನ್ಯಾಯಾಧೀಶರು ಯಾವ ಎತ್ತರದ ಸ್ಥಾನಕ್ಕೆ ಹೋಗುತ್ತೀರಿ ಗೊತ್ತಿಲ್ಲ. ದೇವರು ನಮಗೆ ವರವನ್ನೂ ನೀಡುವುದಿಲ್ಲ, ಶಾಪವನ್ನೂ ನೀಡುವುದಿಲ್ಲ. ಕೇವಲ ಅವಕಾಶ ಮಾತ್ರ ನೀಡುತ್ತಾನೆ. ಆ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದರು.

ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ, ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಉಪಸ್ಥಿತರಿದ್ದರು.

ಇದನ್ನೂ ಓದಿ:ವಿದ್ಯಾರ್ಥಿ ಪಾಸ್ ವಿತರಣೆ ವಿಳಂಬ: ಶುಲ್ಕ ಪಾವತಿಸಿದ ರಸೀದಿ ತೋರಿಸಿ ಸರ್ಕಾರಿ ಬಸ್​ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ..

ABOUT THE AUTHOR

...view details