ಬೆಂಗಳೂರು:ಸರ್ಕಾರದಲ್ಲಿನ ಭ್ರಷ್ಟಾಚಾರ ಸಂಬಂಧ ಸಚಿವ ಕೆ. ಎಸ್. ಈಶ್ವರಪ್ಪ ಅವರು ಬಿಜೆಪಿ ಹೈಕಮಾಂಡ್ಗೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಸ್ವ-ಇಚ್ಛೆಯಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದರು.
ಸಿಎಂ ಹುದ್ದೆಗೆ ರಾಜೀನಾಮೆ ಸಲ್ಲಿಸುವಂತೆ ಬಿಎಸ್ವೈಗೆ ಡಿಕೆಶಿ ಒತ್ತಾಯ ಸದಾಶಿವನಗರದ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕ್ಯಾಬಿನೆಟ್ ಸಚಿವರೊಬ್ಬರು ಸಿಎಂ ವಿರುದ್ಧ ಆರೋಪಿಸಿದ್ದಾರೆ. 1200 ಕೋಟಿ ರೂ. ಹಗರಣದ ಆರೋಪ ಮಾಡಿದ್ದಾರೆ. ತಿಪ್ಪೆ ಸಾರಿಸೋ ಕೆಲಸ ಮಾಡದೆ ಸಿಎಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲ ಆ ಸಚಿವರ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು.
ಒಳಗೆ ಏನೇನು ಇದೆಯೋ ಸಿಎಂ ರಾಜೀನಾಮೆ ಕೊಡಲಿ. ಇಲ್ಲಾ ಈಶ್ವರಪ್ಪ ಅವರನ್ನು ತೆಗೆದು ಹಾಕಲಿ. ಕಾಂಗ್ರೆಸ್ ಇದರ ವಿರುದ್ಧ ಹೋರಾಟ ಮಾಡುತ್ತದೆ. ಇದು 1,200 ಕೋಟಿ ರೂ. ಭ್ರಷ್ಟಾಚಾರದ ಕೂಪ. ಈಶ್ವರಪ್ಪ ಹೇಳಿದ್ದು ತಪ್ಪು ಅಂತ ನಾನು ಹೇಳಲ್ಲ. ಸಚಿವರಾಗಿ ಈಶ್ವರಪ್ಪ ಅವರು ತಮ್ಮ ಕರ್ತವ್ಯ ಮಾಡಿದ್ದಾರೆ. ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ ಎಂದರು.
ಓದಿ:ರಾಜ್ಯಪಾಲರು ಸಿಎಂ ವಜಾಗೊಳಿಸಿ, ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಬೇಕು: ಸಿದ್ದರಾಮಯ್ಯ ಆಗ್ರಹ
ರಮೇಶ್ ಜಾರಕಿಹೊಳಿ ಸಿಡಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿಡಿ ವಿಚಾರವಾಗಿ ನನಗೆ ಏನು ಸಂಬಂಧ ಇಲ್ಲ. ಅದು ನನಗೆ ಸಂಬಂಧ ಪಡದ ವಿಷಯ. ಅದರ ಬಗ್ಗೆ ನಾನು ಮಾತನಾಡಲ್ಲ. ನನ್ನ ಹೆಸರು ಹೇಳಿದರೆ ಅವರಿಗೆ ಮಾರ್ಕೆಟಿಂಗ್ ಆಗುತ್ತದೆ. ಅದಕ್ಕೆ ನನ್ನ ಹೆಸರು ಸೇರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದು ಆಶಿಸಿದರು.