ಕರ್ನಾಟಕ

karnataka

ETV Bharat / state

ವಿಶ್ವಾಸ ಮತ: ಇಂದು ಸಿಎಂ ವಾಗ್ದಾನ ಮೀರಿದರೆ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು!? - undefined

ವಿಶ್ವಾಸ ಮತಯಾಚನೆಗೆ ರಾಜ್ಯಪಾಲರು ಈಗಾಗಲೇ ಎರಡು ಬಾರಿ ಗಡುವು ನೀಡಿದ್ದು, ಇಂದು ಸಿಎಂ ಹೆಚ್​ಡಿಕೆ ವಿಶ್ವಾಸ ಮತಯಾಚನೆ ಮಾಡುವುದು ಅನಿರ್ವಾಯವಾಗಿದೆ.

ವಿಶ್ವಾಸ ಮತ

By

Published : Jul 22, 2019, 3:43 AM IST

Updated : Jul 22, 2019, 5:40 AM IST

ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ನಡೆಯುವ ಅಧಿವೇಶನದಲ್ಲಿ ತಮ್ಮ ಸರ್ಕಾರಕ್ಕೆ ಇರುವ ವಿಶ್ವಾಸಮತ ಸಾಬೀತುಪಡಿಸದೆ ನಾಳೆಗೆ ಮುಂದೂಡಿದರೆ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗುವ ಎಲ್ಲಾ ಸಾಧ್ಯತೆಗಳಿವೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ವಿಶ್ವಾಸ ಮತಯಾಚನೆಗೆ ರಾಜ್ಯಪಾಲರು ಈಗಾಗಲೇ ಎರಡು ಬಾರಿ ಗಡುವು ನೀಡಿದ್ದು, ಇಂದಿನ ವಿಧಾನಸಭೆ ಕಲಾಪವನ್ನು ಸಹ ತಾಳ್ಮೆಯಿಂದ ಗಮನಿಸಲಿದ್ದಾರೆ. ಸಿಎಂ ಅವರು ಕಳೆದ ವಾರದಂತೆ ಇಂದೂ ಕೂಡ ಚರ್ಚೆಯಲ್ಲಿಯೇ ಕಲಾಪ ತಳ್ಳಿದರೆ ರಾಜ್ಯಪಾಲರು ಕೇಂದ್ರ ಸರ್ಕಾರಕ್ಕೆ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗಿರುವ ಬಗ್ಗೆ ವರದಿ ನೀಡುವ ಎಲ್ಲಾ ಲಕ್ಷಣಗಳು ಗೋಚರವಾಗುತ್ತಿವೆ.

ಕಳೆದ ವಾರ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಎರಡು ಬಾರಿ ಗಡುವು ನೀಡಿದರೂ ವಿಶ್ವಾಸ ಮತ ಸಾಬೀತುಪಡಿಸದಿರುವ ಕುರಿತು ರಾಜ್ಯಪಾಲರು ಕೇಂದ್ರ ಸರ್ಕಾರಕ್ಕೆ ವರದಿ ನೀಡಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಇಂದಾದರೂ ಸದನದಲ್ಲಿ ವಿಶ್ವಾಸ ಮತದ ಚರ್ಚೆ ಪೂರ್ಣಗೊಳಿಸಿ ಬಹುಮತ ಸಾಬೀತುಪಡಿಸದಿದ್ದರೆ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಲಿದೆ. ಆಡಳಿತಾರೂಢ ಸರ್ಕಾರ ಶಾಸಕರ ವಿಶ್ವಾಸ ಕಳೆದುಕೊಂಡಿದೆ. ಮೈತ್ರಿ ಸರ್ಕಾರ ಬಹುಮತ ಸಾಬೀತುಪಡಿಸುತ್ತಿಲ್ಲ ಎಂದು ರಾಜ್ಯಪಾಲರು ಕೇಂದ್ರದ ಗೃಹ ಇಲಾಖೆಗೆ ವರದಿ ಸಲ್ಲಿಸಲಿದ್ದಾರೆ ಎನ್ನಲಾಗುತ್ತಿದೆ.

ರಾಜ್ಯದ ರಾಜಕೀಯ ಪರಿಸ್ಥಿತಿ ಅವಲೋಕಿಸಿ ಸಾಂವಿಧಾನಿಕ ಬಿಕ್ಕಟ್ಟನ್ನು ನಿಯಂತ್ರಿಸಲು ರಾಜ್ಯಪಾಲರು ವಿಧಾನಸಭೆಯನ್ನು ಅಮಾನತು ಮಾಡಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ತರಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಸಾಧ್ಯತೆಗಳಿವೆ.

ರಾಷ್ಟ್ರಪತಿ ಆಡಳಿತ ಜಾರಿ ನಂತರ ಕೆಲ ದಿನಗಳ ಬಳಿಕ ಬಹುಮತ ಸಾಬೀತು ಪಡಿಸಲು ಸಿದ್ಧವಿರುವ ರಾಜಕೀಯ ಪಕ್ಷವನ್ನು ಸರ್ಕಾರ ರಚಿಸಲು ರಾಜ್ಯಪಾಲರು ಆಹ್ವಾನಿಸಬಹುದಾಗಿದೆ.ಇಂದು ನಡೆಯುವ ವಿಧಾನಸಭೆ ಕಾರ್ಯ ಕಲಾಪಗಳ ಮಾಹಿತಿ ತಿಳಿದುಕೊಂಡು ವರದಿ ನೀಡಲು ರಾಜ್ಯಪಾಲರು ವಿಶೇಷ ಅಧಿಕಾರಿಯನ್ನು ಸದನಕ್ಕೆ ಕಳಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಳೆದ ಶುಕ್ರವಾರ ಸೋಮವಾರ ಸದನದಲ್ಲಿ ವಿಶ್ವಾಸಮತ ಸಾಬೀತುಪಡಿಸುವ ಇಂಗಿತ ವ್ಯಕ್ತಪಡಿಸಿ ಹೇಳಿಕೆ ನೀಡಿದ್ದರು. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. ವಿಧಾನಸಭೆ ಅಧ್ಯಕ್ಷ ರಮೇಶ್ ಕುಮಾರ್ ಅವರೂ ಸೋಮವಾರ ವಿಶ್ವಾಸ ಮತ ನಿರ್ಣಯ ಚರ್ಚೆ ಮತ್ತು ಮತದಾನ ಪೂರ್ಣಗೊಳ್ಳಲೇಬೇಕೆಂದು ತಿಳಿಸಿದ್ದಾರೆ.

ಇಂದು ಸುಪ್ರೀಂನಲ್ಲಿ ನಡೆಯುವ ಅರ್ಜಿಯ ವಿಚಾರಣೆ ಹಾಗೂ ನ್ಯಾಯಾಲಯ ನೀಡುವ ಆದೇಶ ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ನಿರ್ಣಯದ ಚರ್ಚೆಗೆ ಮಂಗಳ ಹಾಡುವ ಬಗ್ಗೆ ನಿರ್ಧಾರ ತಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ.

Last Updated : Jul 22, 2019, 5:40 AM IST

For All Latest Updates

TAGGED:

ABOUT THE AUTHOR

...view details