ಬೆಂಗಳೂರು: ಅಮಿತ್ ಶಾ ರಾಜ್ಯ ಭೇಟಿ ನಂತರ ನೂತನ ಸಚಿವರಿಗೆ ಖಾತೆಗಳ ಹಂಚಿಕೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಆಗಿದೆ. ಅಮಿತ್ ಶಾ ರಾಜ್ಯ ಭೇಟಿ ನಂತರ ನೂತನ ಸಚಿವರಿಗೆ ಖಾತೆಗಳ ಹಂಚಿಕೆ ಮಾಡಬೇಕು ಎಂದುಕೊಂಡಿದ್ದೇವೆ, ಅದಕ್ಕೂ ಮೊದಲೇ ಆದರೂ ಆಗಬಹುದು ಸಚಿವರ ಖಾತೆಗಳ ಮರು ಹಂಚಿಕೆ ಬಗ್ಗೆ ಹಿರಿಯ ಸಚಿವರೊಂದಿಗೆ ಚರ್ಚಿಸಿ ನಿರ್ಧರಿಸಲಾಗುತ್ತದೆ ಎಂದರು.
ನಾಳೆ ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸುತ್ತಿದ್ದಾರೆ. ಅವರೊಂದಿಗೆ ಭದ್ರಾವತಿಗೆ ತೆರಳಿ, ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇನೆ. ನಂತರ ಬೆಳಗಾವಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿಯೂ ಭಾಗಿಯಾಗುತ್ತೇನೆ ಎಂದರು.
ಓದಿ : ಧಾರವಾಡದಲ್ಲಿ ಭೀಕರ ರಸ್ತೆ ಅಪಘಾತ: ಸಂತಾಪ ವ್ಯಕ್ತಪಡಿಸಿದ ಪ್ರಧಾನಿ ಮೋದಿ
ಗಡ್ಕರಿಗೆ ಅಭಿನಂದನೆ:ರಾಜ್ಯದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಬಗ್ಗೆ ನಿತಿನ್ ಗಡ್ಕರಿ ಜೊತೆ ಎರಡು ಗಂಟೆ ಚರ್ಚೆ ನಡೆಸಿದ್ದೇನೆ. ನಾವು ಕೇಳಿದ್ದ ಹೆದ್ದಾರಿ ಯೋಜನೆಗಳನ್ನೆಲ್ಲಾ ಕೊಟ್ಟು ಕೆಲಸ ಮುಗಿಸಿಕೊಡುವ ಭರವಸೆ ಕೊಟ್ಟಿದ್ದಾರೆ. ಹಿಂದೆಂದೂ ಆಗದ ರೀತಿಯಲ್ಲಿ ಗಡ್ಕರಿ ಕಾಲದಲ್ಲಿ ಕೆಲಸವಾಗುತ್ತಿದೆ ಇದಕ್ಕಾಗಿ ಗಡ್ಕರಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.