ಕರ್ನಾಟಕ

karnataka

ETV Bharat / state

ಆತ್ಮನಿರ್ಭರ್ ಭಾರತ್ ಪ್ಯಾಕೇಜ್​ನ 3ನೇ ಹಂತದ ಘೋಷಣೆ: ಸಿಎಂ  ಮನದ ಮಾತು - Atma Nirbhar package

ಮಹತ್ವದ ಬೆಳವಣಿಗೆಯೊಂದರಲ್ಲಿ ಕೊರೊನಾ ವೈರಸ್ ವಿರುದ್ಧದ ಹೋರಾಟದ ಭಾಗವಾಗಿ, ದೇಶದ ಆರ್ಥಿಕ ವ್ಯವಸ್ಥೆ ಸದೃಢವಾಗಿಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಘೋಷಿಸಿರುವ ಆತ್ಮ ನಿರ್ಭರ ಯೋಜನೆಯನ್ನು ಸಿಎಂ ಬಿ.ಎಸ್. ಯಡಿಯೂರಪ್ಪ ಈ ರೀತಿ ವರ್ಣಿಸಿದ್ದಾರೆ.

CM reaction about Atma Nirbhar Bharat economic revival package
ಸಿಎಂ ಬಿ.ಎಸ್. ಯಡಿಯೂರಪ್ಪ

By

Published : May 15, 2020, 8:34 PM IST

ಬೆಂಗಳೂರು: ಆತ್ಮ ನಿರ್ಭರ ಯೋಜನೆಗೆ ಇಂದು ನಿಜವಾದ ಅರ್ಥ ಕಲ್ಪಿಸಿದ ಕೇಂದ್ರ ಸರ್ಕಾರ ಕೂಡ ಇಂದು ಘೋಷಿಸಿದ ಯೋಜನೆಗಳಿಂದ ದೇಶದ ರೈತರ ಮುಖದಲ್ಲಿ ಮಂದಹಾಸ ಮೂಡುವುದು ನಿಶ್ಚಿತ. ಇದರಿಂದ ಶೇ. 85 ರಷ್ಟು ಇರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹೆಚ್ಚಿನ ಲಾಭವಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ.

ಸಿಎಂ ಬಿ.ಎಸ್. ಯಡಿಯೂರಪ್ಪ

ಕೃಷಿ ಕ್ಷೇತ್ರದ ಮೂಲ ಸೌಕರ್ಯಗಳನ್ನು ವೃದ್ಧಿಗೊಳಿಸಲು ಒಂದು ಲಕ್ಷ ಕೋಟಿ ಒದಗಿಸಿದ್ದು ಇದು ರೈತರಿಗೆ ಅದರಲ್ಲೂ ತೋಟಗಾರಿಕ ಬೆಳೆಗಳನ್ನು ಬೆಳೆಯುವ ರೈತರಿಗೆ ಹೆಚ್ಚಿನ ಲಾಭವಾಗಲಿದೆ. ಇಂದಿನ ದಿನ ಕೃಷಿಗೆ ಪೂರಕವಾದ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಹಾಗೂ ಕೃಷಿ ಮತ್ತು ವಿವಿಧ ಉಪಕಸುಬುಗಳಿಗೆ ಒತ್ತು ನೀಡಿರುವುದು ಅತ್ಯಂತ ಸಕಾಲಿಕವಾಗಿದೆ. ಇದು ರೈತರಿಗೆ ಅದರಲ್ಲೂ ತೋಟಗಾರಿಕೆ ಬೆಳೆಗಳನ್ನು ಬೆಳೆಯುವವರಿಗೆ ಹೆಚ್ಚಿನ ಲಾಭವಾಗಲಿದೆ. ರಾಗಿಗೆ ಗ್ಲೋಬಲ್ ಬ್ರ್ಯಾಂಡಿಂಗ್ ನಿರ್ಧಾರ ರಾಜ್ಯದ ರಾಗಿಗೆ ಬೇಡಿಕೆ ಹೆಚ್ಚಾಗಲಿದೆ. ಇದರಿಂದ ಕೇಂದ್ರ ಸರ್ಕಾರ ಸಾವಯವ ಕೃಷಿ ಮತ್ತು ದೇಶೀ ಬೆಳೆಗಳನ್ನು ಪ್ರೋತ್ಸಾಹಿಸಿದೆ‌ ಎಂದು ಪತ್ರಿಕಾ ಹೇಳಿಕೆ ಮೂಲಕ ಸಿಎಂ ತಿಳಿಸಿದ್ದಾರೆ.

ಒಂದು ಲಕ್ಷ ಕೋಟಿ ಹಣದಲ್ಲಿ ದೇಶದಲ್ಲಿ ಶೀತಲ ಘಟಕ ನಿರ್ಮಾಣ ಮಾಡುವುದರಿಂದ ಹಿಡಿದು, ಕೊಯ್ಲೋತ್ತರ ಕೆಲಸಗಳಿಗೆ ಮತ್ತು ನಿರ್ವಹಣೆಗೆ ಪೂರಕವಾಗಲಿದ್ದು, ರೈತರು ತಮ್ಮ ಉತ್ಪಾದನೆಗಳನ್ನು ಹೆಚ್ಚಿನ ಮತ್ತು ಲಾಭದಾಯಕ ಬೆಲೆಗೆ ಮಾರಾಟ ಮಾಡಬಹುದು.

ಉದಾಹರಣೆ: ನಮ್ಮ ರೈತರು ಬೆಳೆದ ಈರುಳ್ಳಿಯನ್ನು ಹೆಚ್ಚಿನ ದಿನಗಳವರೆಗೆ ಸಂಗ್ರಹಿಸಿ ಬೆಲೆ ಹೆಚ್ಚಾದಾಗ ಮಾರಬಹುದು. ಅದರಲ್ಲೂ ರೈತರು ತಮ್ಮ ಉತ್ಪಾದನೆಗಳಾದ ಈರುಳ್ಳಿ, ಟೊಮೇಟೋ ಆಲೂಗಡ್ಡೆಗಳನ್ನು ಸಂಗ್ರಹಣೆ ಮತ್ತು ಸಾಗಣೆ 50 ಪರ್ಸೆಂಟ್ ಸಹಾಯಧನವನ್ನು ಘೋಷಿಸಿರುವುದು ಒಂದು ಐತಿಹಾಸಿಕ ನಿರ್ಧಾರ. ಇದಕ್ಕೆ 500 ಕೋಟಿ ರೂ.ಗಳನ್ನು ನಿಗದಿಪಡಿಸಿದ್ದು, ನಮ್ಮ ರಾಜ್ಯದ ಈರುಳ್ಳಿ, ಟೊಮೇಟೊ ಮತ್ತು ಆಲೂಗಡ್ಡೆ ಬೆಳೆಗಾರರಿಗೆ ಹೆಚ್ಚಿನ ಲಾಭವಾಗಲಿದೆ. ರೈತರಿಗೆ ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಹತ್ತು ಸಾವಿರ ಕೋಟಿಗಳನ್ನು ನಿಗದಿ ಮಾಡಿದ್ದು, ಇದರಿಂದ ರೈತರಿಗೆ ಸ್ವಂತ ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವಲ್ಲಿ ಸಹಾಯವಾಗಲಿದೆ ಎಂದಿದ್ದಾರೆ.

ಇನ್ನೊಂದು ದೊಡ್ಡ ನಿರ್ಧಾರ ನಮ್ಮ ರಾಜ್ಯಕ್ಕೆ ಲಾಭವಾಗುವುದು ಯಾವುದೆಂದರೆ ಮೀನುಗಾರಿಕೆ ಉತ್ಪಾದನೆಗೆ ಸುಮಾರು ಇಪ್ಪತ್ತು ಸಾವಿರ ಕೋಟಿ ನಿಗದಿಪಡಿಸಿದ್ದು, ದೇಶದ 70 ಲಕ್ಷ ಮೀನುಗಾರರಿಗೆ ಇದು ಸಹಾಯವಾಗುತ್ತದೆ ಎಂದು ಅಂದಾಜು ಮಾಡಿದ್ದರೂ ನಮ್ಮ ಕರಾವಳಿ ಪ್ರದೇಶದ ಮೀನುಗಾರರಿಗೆ ತಮ್ಮ ಉದ್ಯಮವನ್ನು ವೃದ್ಧಿಗೊಳಿಸಲು ಅನುಕೂಲವಾಗಲಿದೆ. ಜೇನು ಸಾಕಣೆಗೆ ರೂ.500 ಕೋಟಿ, ದನಗಳ ಲಸಿಕೆಗೆ 13,327 ಕೋಟಿ ರೂ., ಹೈನುಗಾರಿಕೆಗೆ 15,000 ಕೋಟಿ ರೂ. ಕೂಡ ರೈತರ ಮತ್ತು ಗ್ರಾಮೀಣ ಪ್ರದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸುವಲ್ಲಿ ಪ್ರೇರಕವಾಗಲಿದೆ.

ಕೃಷಿ ವಲಯಕ್ಕೆ ಸಂಬಂಧಪಟ್ಟ ಕಾನೂನುಗಳನ್ನು ಸರಳೀಕರಣಗೊಳಿಸಿ ರೈತರಿಗೆ ಅನುಕೂಲವಾಗುವಂತೆ ಮಾರ್ಪಾಡು ಮಾಡಲು ಉದ್ದೇಶಿಸಿದ್ದು , ಇದು ದೇಶದ ರೈತರ ಮನೋಸ್ಥೈರ್ಯ ಹೆಚ್ಚಿಸಲಿದೆ. ಇವುಗಳಲ್ಲಿ ನಾವು ಎ.ಪಿ.ಎಂ.ಸಿ. ಕಾಯಿದೆಯ ತಿದ್ದುಪಡಿ ತರಲು ಇಚ್ಚಿಸಿದ್ದನ್ನೂ ಕೂಡ ಇಂದಿನ ಘೋಷಣೆಗಳಲ್ಲಿ ಸೇರಿಸಿದ್ದು, ರೈತರಿಗೆ ತಮ್ಮ ಉತ್ಪಾದನೆಗಳಿಗೆ ಲಾಭದಾಯಕ ಬೆಲೆ ಸಿಗುವಂತೆ ಮಾಡಲು ನಾವು ಇಟ್ಟ ಹೆಜ್ಜೆಗೆ ಬೆಂಬಲ ಸೂಚಿಸಿದಂತಾಗಿದೆ ಮತ್ತು ನಮ್ಮ ರೈತಪರ ನೀತಿಗೆ ಮುದ್ರೆ ಒತ್ತಿದಂತಾಗಿದೆ ಎಂದಿದ್ದಾರೆ.

ABOUT THE AUTHOR

...view details