ಬೆಂಗಳೂರು: ಪೇಜಾವರ ಶ್ರೀಗಳ ಅನಾರೋಗ್ಯ ಹಾಗೂ ನಿಧನ ಹಿನ್ನೆಲೆ ಕಳೆದ ಒಂದೆರಡು ದಿನಗಳಿಂದ ಸರ್ಕಾರಿ ಕೆಲಸಗಳತ್ತ ಗಮನ ಹರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಿನ್ನೆ ಅರ್ಧ ದಿನವನ್ನು ಕಡತ ವಿಲೇವಾರಿಗೆಂದೇ ಮೀಸಲಿಟ್ಟಿದ್ದರು.
ಸಂಜೆ 4 ಗಂಟೆಯಿಂದ 6 ಗಂಟೆಯವರೆಗೆ ಗೃಹ ಕಚೇರಿ ಕೃಷ್ಣದಲ್ಲಿ ವಿವಿಧ ಇಲಾಖೆಯ ಕಡತಗಳ ವಿಲೇವಾರಿ ನಡೆಸಿದ್ರು. ಇದರ ಜೊತೆ ಜೊತೆಗೆ ಹಲವು ಗಣ್ಯರು ಹಾಗೂ ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
ಸಿಎಂ ಗೃಹ ಕಚೇರಿಗೆ ಆಗಮಿಸಿದ ವಿವಿಧ ಮುಖಂಡರುಗಳು ಹಾಗು ಅಧಿಕಾರಿಗಳು ವಿವಿಧ ನಿಗಮಗಳ ಕಾರ್ಯಕ್ರಮ:
ಕಾವೇರಿ ನೀರಾವರಿ ನಿಗಮ ಹಾಗು ಕೃಷ್ಣ ಭಾಗ್ಯ ಜಲ ನಿಗಮಗಳ ನಿರ್ದೇಶಕರ ಮಂಡಳಿ ಹಾಗೂ ವಾರ್ಷಿಕ ಸಾಮಾನ್ಯ ಸಭೆಯನ್ನೂ ಕೂಡ ಕೃಷ್ಣದಲ್ಲಿ ನಡೆಸಿದರು. ಇದೇ ಸಂದರ್ಭದಲ್ಲಿ ಕನ್ನಡ ದೈನಿಕ ವಾರ್ತಾಭಾರತಿಯ 17 ನೇ ವಾರ್ಷಿಕ ವಿಶೇಷಾಂಕ ಬಿಡುಗಡೆ ಮಾಡಿದ ಸಿಎಂ, ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘದ ಶತಮಾನೋತ್ಸವ ಸಮಾರಂಭದ ಲಾಂಛನ ಬಿಡುಗಡೆ ಮಾಡಿದರು.
ಸಿಎಂ ಗೃಹ ಕಚೇರಿ ಕೃಷ್ಣಗೆ ಶಾಸಕ ಸಿಎಂ ಉದಾಸಿ ಹಾಗೂ ಮಾಜಿ ಶಾಸಕ ಅಶೋಕ್ ಖೇಣಿ ಸೇರಿದಂತೆ ಹಲವು ಗಣ್ಯರು ಆಗಮಿಸಿ ಸಿಎಂ ಭೇಟಿ ಮಾಡಿ ಸಮಾಲೋಚಿಸಿ ತೆರಳಿದರು. ಬಿಬಿಎಂಪಿ ಆಯುಕ್ತರು ಸೇರಿದಂತೆ ಹಲವು ಅಧಿಕಾರಿಗಳನ್ನು ಕರೆಸಿಕೊಂಡು ಸಿಎಂ ಇದೇ ಸಂದರ್ಭ ಸಮಾಲೋಚಿಸಿದರು. ಒಟ್ಟಾರೆ ಸಂಜೆಯ 2 ಗಂಟೆ ಕಾಲಾವಧಿಯನ್ನು ಸಂಪೂರ್ಣ ಕಡತ ವಿಲೇವಾರಿಗೆ ಸಿಎಂ ಮೀಸಲಿಟ್ಟಿದ್ದರು.