ಬೆಂಗಳೂರು:ರಂಜಾನ್ ಹಬ್ಬದ ಅಂಗವಾಗಿ ಸಾರ್ವತ್ರಿಕ ರಜೆ ಮಂಜೂರು ಮಾಡಿರುವುದರಿಂದ ನಾಳೆ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3.30ರವರೆಗೆ ನಿಗದಿಪಡಿಸಿದ್ದ ವಿವಿಧ ಇಲಾಖೆಗಳ ಪರಿಶೀಲನಾ ಸಭೆಗಳನ್ನು ಮುಂದೂಡಲಾಗಿದೆ. ಮೇ 3ರಂದು ರಂಜಾನ್ ಎನ್ನಲಾಗಿತ್ತಾದರೂ ನಾಳೆಯೇ ಹಬ್ಬ ಆಚರಣೆ ಮಾಡುವುದಾಗಿ ಮುಸ್ಲಿಂ ಸಮುದಾಯದ ಪ್ರಮುಖರು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಸಾರ್ವತ್ರಿಕ ರಜೆ ನೀಡಲಾಗಿದೆ.
ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಾಳೆ ಗೃಹ ಕಚೇರಿ ಕೃಷ್ಣಾದಲ್ಲಿ ನಿಗದಿಗೊಳಿಸಿದ್ದ 2022-23ನೇ ಸಾಲಿನ ಆಯವ್ಯಯದಲ್ಲಿ ಘೋಷಣೆಯಾಗಿರುವ ಯೋಜನೆಗಳ ಅನುಷ್ಠಾನ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ, ಜಲ ಸಂಪನ್ಮೂಲ (ಬೃಹತ್, ಮಧ್ಯಮ ಹಾಗೂ ಸಣ್ಣ ನೀರಾವರಿ), ವಾಣಿಜ್ಯ ಮತ್ತು ಕೈಗಾರಿಕೆ, ಲೋಕೋಪಯೋಗಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಲ ಜೀವನ್ ಮಿಷನ್ ಪರಿಶೀಲನಾ ಸಭೆಗಳು ಮುಂದೂಡಲ್ಪಟ್ಟಿವೆ.