ಬೆಂಗಳೂರು: ಚಿತ್ರದುರ್ಗದಲ್ಲಿ ವೀರವನಿತೆ ಒನಕೆ ಓಬವ್ವ ಸ್ಮಾರಕ ನಿರ್ಮಾಣ ಸೇರಿದಂತೆ ತಮ್ಮ ಸಮುದಾಯದ ಬೇಡಿಕೆಗಳನ್ನು ಸ್ವಾಮೀಜಿಗಳು ಮತ್ತು ಶಾಸಕ ನೆಹರು ಓಲೇಕಾರ್ ಗಮನಕ್ಕೆ ತಂದಿದ್ದಾರೆ. ಇದರ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಇಂದು ಸಂಜೆ ಆಯೋಜಿಸಿದ್ದ ವೀರವನಿತೆ ಒನಕೆ ಓಬವ್ವ ಜಯಂತಿ ಉದ್ಘಾಟಿಸಿ ಮಾತನಾಡಿದ ಸಿಎಂ, ಓಬವ್ವ ಪ್ರತಿಮೆ ಸ್ಥಾಪನೆ, ವಸತಿ ಶಾಲೆಗಳಿಗೆ ಅವರ ಹೆಸರಿಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಎಲ್ಲಿ ಸತ್ವ ಇದೆ ಅಲ್ಲಿ ಸತ್ಯ ಇರುತ್ತದೆ. ಓಬವ್ವನ ಕಥೆಯಲ್ಲಿ ಸತ್ಯ ಹಾಗೂ ಸತ್ವ ಇದೆ. ಓಬವ್ವ ಅವರಿಗೆ ಕುಲದ ಗುಣಗಳು ಇತ್ತು. ಹಾಗಾಗಿ ಅವರಿಗೆ ಸ್ವಾಮಿ ನಿಷ್ಠೆ ಜಾಸ್ತಿ ಇತ್ತು. ಹಾಗಾಗಿ, ಚಿತ್ರದುರ್ಗ ಕೋಟೆ ರಕ್ಷಣೆ ಮಾಡಿದರು ಎಂದು ಸ್ಮರಿಸಿದರು.
ಈ ವರ್ಷ ಕೆಳದಿ ಚೆನ್ನಮ್ಮ, ಬೆಳವಾಡಿ ಮಲ್ಲಮ್ಮ ಹಾಗೂ ಒನಕೆ ಓಬವ್ವ ಜಯಂತಿ ಮಾಡಿದ್ದೇವೆ. ಮುಂದಿನ ವರ್ಷ ದೊಡ್ಡ ಜಾಗದಲ್ಲಿ ಹೆಚ್ಚು ಜನ ಸೇರಿಸಿ ಓಬವ್ವನ ಜಯಂತಿ ಮಾಡೋಣ ಎಂದರು.
ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಎಲೆಮರೆ ಕಾಯಿ ಅಂತ ಇದ್ದ ಓಬವ್ವ ಅವರನ್ನು ರಾಷ್ಟ್ರಕ್ಕೆ ಪರಿಚಯ ಮಾಡಲಾಗಿದೆ. ಇತಿಹಾಸವನ್ನು ನಾವು ಮರೆಯುತ್ತೇವೆ, ಅನೇಕ ಮಹಿಳೆಯರು ಹೋರಾಟ ಮಾಡಿದ್ದಾರೆ. ಕರ್ನಾಟಕದವರು ಹೆಮ್ಮೆ ಪಡುವ ವಿಚಾರ. ಅವರಿಗೆ ಸ್ವಾಮಿ ನಿಷ್ಠೆ ಇತ್ತು, ಕಠಿಣ ಪರಿಸ್ಥಿತಿಯಲ್ಲಿ ಜೀವ ಒತ್ತೆ ಇಟ್ಟು ಹೋರಾಟ ಮಾಡಿದ್ರು ಎಂದು ಹೊಗಳಿದರು.
ಇದನ್ನೂ ಓದಿ: 'ಸ್ತ್ರೀಯರ ಒಳ ಉಡುಪಿನ ಮೇಲೆ ಗುಪ್ತಾಂಗ ಸ್ಪರ್ಶಿಸುವುದೂ ಸಹ ಅತ್ಯಾಚಾರಕ್ಕೆ ಸಮ'
ಮೈಸೂರಿನ ಉರುಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಕನ್ನಡ ನಾಡಿನ ಹೆಮ್ಮೆಯ ಪುತ್ರಿ ಒನಕೆ ಓಬವ್ವ ಅವರನ್ನು ಗರ್ಭದಿಂದ ಹೊರಗೆ ತಂದಿದ್ದಾರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರು. ಹೆಣ್ಣಿಗಾಗಿ, ಮಣ್ಣಿಗಾಗಿ ಹಲವಾರು ಜನ ಹೋರಾಟ ಮಾಡಿದ್ದಾರೆ. ಇಲ್ಲಿ ಕಾವಲುಗಾರನ ಹೆಂಡತಿ ಹೋರಾಟ ಮಾಡಿದ್ದಾಳೆ. ಇದು ಬಸವಣ್ಣ, ಕುವೆಂಪು, ಸಂತ, ವೀರ, ಸಾಹಸಿಗಳು ಇರುವ ನಾಡು. ಅದಕ್ಕೆ ನಾವು ಸರ್ವ ಜನಾಂಗದ ಶಾಂತಿಯ ತೋಟ ಎನ್ನುವುದು. ಜಾತಿ, ವರ್ಗ, ಧರ್ಮವನ್ನು ಮೀರಿಸಿ ವಿಧಾನಸೌಧದಲ್ಲಿ ಜಯಂತಿ ಮಾಡಿದ್ದಾರೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ನೆಹರು ಓಲೇಕಾರ್ ಮಾತನಾಡಿ, ಸಮಾಜದಲ್ಲಿ ಓಬವ್ವ ಅವರ ಚರಿತ್ರೆ ಹೇಳುವ ಕೆಲಸವನ್ನು ಯಾರೂ ಮಾಡಲಿಲ್ಲ. ಅಂದು ಆಕೆ ವೈರಿಗಳನ್ನು ಸದೆಬಡಿದಿದ್ದಳು. ಇವತ್ತು ಕತ್ತಲಲ್ಲಿದ್ದ ಓಬವ್ವ ಅವರನ್ನು ಜಯಂತಿ ಮಾಡಿ ಬೊಮ್ಮಾಯಿ ಅವರು ಬೆಳಕಿಗೆ ತಂದಿದ್ದಾರೆ. ಓಬವ್ವ ಹೆಸರಿನಲ್ಲಿ ಕರಾಟೆ ಕಲಿಸುವ ಕೆಲಸ ಮಾಡಿಸಿದ್ದಾರೆ ಎಂದು ಶ್ಲಾಘಿಸಿದರು.